ಎಸ್.ಸಿ-ಎಸ್.ಟಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮ ಸಭೆ

ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ: ಪಲ್ಲವಿ.ಜಿ ಸೂಚನೆ

ಬೆಳಗಾವಿ, ಜು.13 : ಜಿಲ್ಲಾ ಕೇಂದ್ರಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೇ ನಿಗಮದ ಕೆಲಸ ನಿರ್ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿನ ಯೋಜನೆಗಳ ಅರ್ಜಿಗಳ ಅಂಕಿ ಅಂಶಗಳ ಮಾಹಿತಿ ಅಧಿಕಾರಿಗಳಿಗೆ ಇರಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಅವರು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ (ಜು.13) ನಡೆದ ಎಸ್.ಸಿ-ಎಸ್.ಟಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಕುರಿತು ಕೆಲವು ದೂರುಗಳು ಬರುತ್ತಿವೆ. ಹಾಗಾಗಿ ಯಾವುದೇ ಮಧ್ಯವರ್ತಿಗಳು ಇಲ್ಲದೇ ಯೋಜನೆಗಳ ಸೌಲಭ್ಯ ಫಲಾನುಭವಿಗೆ ದೊರೆಯುವಂತೆ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಇಲಾಖೆ ಯೋಜನೆಗಳಿಗಾಗಿ ಸಲ್ಲಿಸಿದ ಅರ್ಜಿಗಳ ಮಾಹಿತಿಯನ್ನು ಅಧಿಕಾರಿಗಳು ಕಡ್ಡಾಯವಾಗಿ ತರಬೇಕು. ಸಭೆಗೆ ಮುಂಚಿತವಾಗಿ ಎಲ್ಲಾರಿಗೂ ಸಭೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ದಾಖಲಾತಿ ಒದಗಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಿದ ಅಲೆಮಾರಿಗಳ, ಅರೆ ಅಲೆಮಾರಿ ಜನನಗಳ ಅಂಕಿ ಅಂಶಗಳನ್ನು ಮಾಹಿತಿಗಾಗಿ ಸಂಗ್ರಹಿಸಬೇಕು. ಆಯ್ಕೆಯಾದ ಫಲಾನುಭವಿಗಳಿಗೆ ಕೆಲವು ಬ್ಯಾಂಕ್ ಸಾಲ ಸೌಲಭ್ಯ ನೀಡುವುದಿಲ್ಲ ಅಂತಹ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಂದ ನಿರ್ದೇಶನ ನೀಡುವಂತೆ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ಮಂಜೂರಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಯಾವುದೇ ಅನುದಾನವನ್ನು ಬಾಕಿ ಉಳಸಿಕೊಳ್ಳಬಾರದು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಸೂಚಿಸಿದರು..

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ ಸೇರಿಂತೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಸಭೆಯಲ್ಲಿ ಉಪಸ್ಥಿತರಿದ್ದರು.


error: Content is protected !!