ಶಿವಮೊಗ್ಗ, ಮಾರ್ಚ್ 24 : ಲೋಕಸಭಾ ಚುನಾವಣಾ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ನೀತಿ ಸಂಹಿತೆಯನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಬೇಕು ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ-2024 ರ ಹಿನ್ನೆಲೆ ಎಆರ್‍ಓ, ತಹಶೀಲ್ದಾರರು, ಇಓ, ಪೊಲೀಸ್ ಮತ್ತು ಇತರೆ ಚುನಾವಣಾ ನಿಯೋಜಿತ ಅಧಿಕಾರಿಗಳೊಂದಿಗೆ ಚುನಾವಣಾ ತಯಾರಿ ಕುರಿತು ಮಾ.23 ರಂದು ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಸಮರ್ಪಕವಾಗಿ ಪ್ರತಿಯೊಂದು ವಾಹನಗಳನ್ನು ವಿಶೇಷವಾಗಿ ಗೂಡ್ಸ್ ವಾಹನಗಳನ್ನು ಪರಿಶೀಲನೆ ನಡೆಸಬೇಕು. ದಟ್ಟಣೆ ಆಗದಂತೆ ಕ್ರಮ ವಹಿಸಬೇಕು. ಪರಿಶೀಲನೆ ವೇಳೆ ಯಾವುದೇ ವಾಹನದಲ್ಲಿ ರೂ.50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸುತ್ತಿದ್ದರೆ ಅಂತಹ ವಾಹನ ವಶಪಡಿಸಿಕೊಂಡು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಬೇಕು. ವಾಹನಗಳಲ್ಲಿ ಅಕ್ರಮ ಹಣ, ಪಕ್ಷದ ಗುರುತಿರುವ ಬಟ್ಟೆ, ಸೀರೆ ಇತರೆ ಕೊಡುಗೆಗಳು, ಕಿಟ್‍ಗಳು ಇತ್ಯಾದಿ ರೀತಿಯ ಅಕ್ರಮ ವಸ್ತುಗಳ ಸಾಗಾಣಿಕೆ ಕಂಡು ಬಂದರೆ ಅವುಗಳನ್ನು ವಶಪಡಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕೆಂದರು.
ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ಸೆಕ್ಟರ್ ಅಧಿಕಾರಿಗಳು, ಎಸ್‍ಎಸ್‍ಟಿ ತಂಡ, ವಿಎಸ್‍ಟಿ ತಂಡ, ಎಫ್‍ಎಸ್‍ಟಿ ತಂಡಗಳು, ಎಂಸಿಸಿ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ಪೊಲೀಸರು ಹಾಗೂ ಇತರೆ ಚುನಾವಣಾ ನಿಯೋಜಿತ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಎಂಸಿಸಿ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮ ಜರುಗಿಸಬೇಕು.
ಅಂಚೆ ಮತಪತ್ರಗಳಿಗೆ ಸಂಬಂಧಿಸಿದಂತೆ ಫಾರ್ಮ್ 12ಡಿ ವಿತರಣೆ ಮಾಡಬೇಕು. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿವಿಜಿಲ್ ಗೆ ಬರುವ ದೂರುಗಳನ್ನು ಸಮಯಕ್ಕೆ ಸರಿಯಾಗಿ ವಿಲೇಮಾರಿ ಮಾಡಬೇಕು. ಮದುವೆ ಇತರೆ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡಬೇಕು. ಸುವಿಧಾ ತಂತ್ರಾಂಶದ ಮೂಲಕ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು, ವಾಹನಗಳಿಗೆ ಅನುಮತಿಯನ್ನು ನೀಡಬೇಕು. ಆರ್‍ಟಿಓ ಮತ್ತು ಪೋಲಿಸ್ ಇಲಾಖಾ ಅಧಿಕಾರಿಗಳು ಮೋಟಾರು ವಾಹನ ಪ್ರಕರಣಗಳನ್ನು ಎಚ್ಚರಿಕೆಯಿಂದ ಗಮನಿಸಿ ಪ್ರಕರಣ ದಾಖಲಿಸಬೇಕು. ಹಾಗೂ ಧ್ವನಿವರ್ಧಕ, ಇತರೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿರುದ್ದ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಬೇಕೆಂದು ಸೂಚನೆ ನೀಡಿದರು.
ಮತಗಟ್ಟೆ ಸಿಬ್ಬಂದಿಗಾಗಿ ಮತದಾರರ ಅನುಕೂಲ ಕೇಂದ್ರ, ಪಿವಿಸಿ ಫಾರ್ ಎವಿಇಎಸ್ ಕೆಟಗರಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ತಿಳಿದುಕೊಮಡು ಕ್ರಮ ಕೈಗೊಳ್ಳಬೇಕು. ಸ್ಟ್ರಾಂಗ್‍ರೂಂ ಗಳ ತಯಾರಿ ಮಾಡಿಕೊಂಡು 24*7 ಸಿಸಿಟಿವಿ ವ್ಯವಸ್ಥೆ ಹಾಗೂ ಪೊಲಿಸ್ ಭದ್ರತೆ ಮಾಡಬೇಕು.
ಇವಿಎಂ ಮತ್ತು ವಿವಿ ಪ್ಯಾಟ್‍ಗಳ ರ್ಯಾಂಡಮೈಸೇಷನ್ ಮತ್ತು ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇವಿಎಂಗಳನ್ನು ಪೊಲೀಸ್ ಬೆಂಗಾವಲಿನೊಂದಿಗೆ ಜಿಪಿಎಸ್ ಅಳವಡಿಸಿದ ವಾಹನಗಳ ಮೂಲಕ ಮಾತ್ರ ಸಾಗಿಸಬೇಕು. ಎಲ್ಲಾ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಕಳುಹಿಸುವ ಮೊದಲು ಇಎಂಎಸ್ ಅಪ್ಲಿಕೇಷನ್ ಮೂಲಕ ಸ್ಕ್ಯಾನ್ ಮಾಡಬೇಕು. ರಾಷ್ಟ್ರೀಯ ಮತ್ತು ರಾಜ್ಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಲಿಖಿತವಾಗಿ ಸೂಚನೆ ನೀಡಬೇಕು. ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಸಂಗ್ರಹಿಸಿ, ಸ್ಟ್ರಾಂಗ್ ರೂಂ ಗಳನ್ನು ಅವರ ಉಪಸ್ಥಿತಿಯಲ್ಲಿ ಸೀಲ್ ಮಾಡಬೇಕು. ಈ ಕಾರ್ಯದ ಸಂಪೂರ್ಣ ವಿಡಿಯೋಗ್ರಫಿ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಎಡಿಸಿ ಸಿದ್ದಲಿಂಗ ರೆಡ್ಡಿ, ಎಸಿ ಯತೀಶ್, ಚುನಾವಣಾ ಅಧಿಕಾರಿಗಳು ಹಾಜರಿದ್ದರು.