ಬೆಂಗಳೂರು: ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ವೇತನವನ್ನು ಪರಿಷ್ಕೃತಗೊಳಿಸುವಂತೆ ಶಾಸಕರಾದ ಡಾ.ಧನಂಜಯ ಸರ್ಜಿ ಅವರು ಸರಕಾರವನ್ನು ಒತ್ತಾಯಿಸಿದರು.

16 ನೇ ಚಳಿಗಾಲದ ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ಧ್ವನಿ ಎತ್ತಿದ ಅವರು, ಕಾರ್ಮಿಕ ಕಾಯಿದೆಯ ಪ್ರಕಾರವಾದರೂ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಒಟ್ಟು 48, 657 ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಮುಗಿಸಿ ಗ್ರೂಪ್ ಡಿ ಆಗಿಯೋ, ಸೆಕ್ಯುರಿಟಿ ಆಗಿಯೋ ಅಥವಾ ಅಟೆಂಡರ್ ಆಗಿಯೋ ಕೆಲಸ ಮಾಡಿದರೂ ಕನಿಷ್ಠ 17,500 ರೂ. ವೇತನ ಲಭಿಸುತ್ತದೆ. ಆದರೆ, 2 ವರ್ಷ ಪಿಯುಸಿ ಮುಗಿದ ನಂತರ ಮೂರು ವರ್ಷ ಪದವಿ ಮುಗಿಸಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕನಿಷ್ಠ ವೇತನವೂ ದೊರೆಯುತ್ತಿಲ್ಲ. ಗ್ರೂಪ್ ಡಿ, ಅಟೆಂಡರ್ ಗಳು ಪಡೆಯುವ ಮೊತ್ತವನ್ನು ಅತಿಥಿ ಉಪನ್ಯಾಸಕರು ದುಡಿಯಬೇಕೆಂದರೆ ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ, ಇಂತಹ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರಿದ್ದು, ಎಲ್ಲಿದೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪ, 2022 ರಲ್ಲಿ ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಳ ಮಾಡಲಾಗಿತ್ತು, ಮತ್ತೆ ವೇತನ ಹೆಚ್ಚಳ ಮಾಡುವುದು ಅಗತ್ಯವಾಗಿದೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಗತ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಚಿವರ ಉತ್ತರಕ್ಕೆ ಒಪ್ಪದ ಶಾಸಕ ಡಾ.ಧನಂಜಯ ಸರ್ಜಿ ಅವರು, ಇದು ರಾಜ್ಯದ ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸುವ ಅವಶ್ಯಕತೆ ಇದೆ, ನಿಯಮ 58 ರ ಅಡಿ ಇದಕ್ಕೆ ಅರ್ಧ ಗಂಟೆ ಕಾಲ ಕಾಲಾವಕಾಶವನ್ನು ನೀಡಬೇಕು ಎಂದು ಸಭಾಪತಿಗಳನ್ನು ಕೋರಿದರು. ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ಸಭಾಪತಿಗಳು ಸಹಮತಿಸಿದರು.

Leave a Reply

error: Content is protected !!