ಶಿವಮೊಗ್ಗ,ಮೇ 30: ವಾಲ್ಮೀಕಿ ನಿಗಮದ ಅಧಿಕಾರಿ ಪಿ.ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಸಂಬಂಧಪಟ್ಟ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಅವರು ಇಂದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣ ಇಡೀ ರಾಜ್ಯ ಸರ್ಕಾರದ ಭ್ರಷ್ಟಚಾರಕ್ಕೆ ಇದು ತಾಜಾ ಉದಾಹರಣೆಯಾಗಿದೆ. ವಾಲ್ಮೀಕಿ ನಿಗಮದಲ್ಲಿದ್ದ, ಕೋಟ್ಯಾಂತರ ಹಣ ಅವ್ಯವಹಾರವಾಗಿದೆ. ಇದರಲ್ಲಿ ಸುಮಾರು 25 ಕೋಟಿ ಹಣವನ್ನು ಪಕ್ಕದ ಜಿಲ್ಲೆಯ ತಮಿಳುನಾಡಿಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕಾಗಿ ಹೊಸ ಅಕೌಂಟ್‍ನ್ನೇ ತೆರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಚುನಾವಣೆಗಾಗಿ ಇದನ್ನು ಬಳಸಿಕೊಂಡಿದೆ. ನಾವು ಈ ಹಿಂದೆ ಆರೋಪ ಮಾಡಿದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆಗಾಗಿ ಎಟಿಎಂ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರ ತನ್ನ ಬಂಡತನ ಬಿಟ್ಟು ಇದನ್ನು ಸಿಬಿಐಗೆ ಒಪ್ಪಿಸಬೇಕು. ಸಿಐಡಿ, ಸಿಐಟಿಗಳಿಂದ ನ್ಯಾಯ ಸಿಗುವುದಿಲ್ಲ. ಸಮಯ ವ್ಯರ್ಥ ಮಾಡಬಾರದು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತೇವೆ. ವಾರದೊಳಗೆ ಇದನ್ನು ಸಿಬಿಐಗೆ ಒಪ್ಪಿಸದಿದ್ದರೆ ಬಿಜೆಪಿ ಇಡೀ ರಾಜ್ಯಾದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದರು.
ಚುನಾವಣೆಯ ಸಂದರ್ಭದಲ್ಲಿ ಅನಧೀಕೃತವಾಗಿ ಖಾತೆ ತೆರೆದು ಹೊರರಾಜ್ಯಕ್ಕೆ ಹಣ ಹೋಗಿದೆ ಎಂದರೆ ಇದರಲ್ಲಿ ರಾಜ್ಯ ಸರ್ಕಾರದ ಪಿತೋರಿ ಇರುತ್ತದೆ. ಮುಖ್ಯವಾಗಿ ಇಲಾಖೆಗೆ ಸಂಬಂಧಪಟ್ಟ ಸಚಿವ ನಾಗೇಂದ್ರ ಅವರ ಪಾತ್ರವು ಇದೆ. ಕೇವಲ ಅಧಿಕಾರಿಗಳನ್ನು ಮಾತ್ರ ಹೊಣೆಯಾಗಿ ಮಾಡಿದರೆ ಸಾಕಾಗುವುದಿಲ್ಲ. ಚಂದ್ರಶೇಖರ್ ಅವರು ಬರೆದಿಟ್ಟ ಡೆತ್‍ನೋಟ್‍ನಲ್ಲಿ ಸ್ಪಷ್ಟವಾಗಿ ಸಚಿವರ ಕಛೇರಿಯಿಂದ ಕರೆ ಬಂದಿದ್ದು, ಮತ್ತು ಸಚಿವರು ಮೌಖಿಕವಾಗಿ ಆದೇಶ ನೀಡಿದ್ದರು ಎಂದು ಬರೆದಿಟ್ಟಿದ್ದಾರೆ. ಹಾಗಾಗಿ ಈ ಭ್ರಷ್ಟಚಾರ ನಡೆದಿರುವುದು ಖಂಡಿತವಾಗಿದೆ ಎಂದರು.
ಈ ಹಿನ್ನಲೆಯಲ್ಲಿ ಸಚಿವರು ರಾಜೀನಾಮೆ ನೀಡಬೇಕು. ಸಿಬಿಐಗೆ ತನಿಖೆಗೆ ಒಪ್ಪಿಸಬೇಕು. ಮತ್ತು ಮೃತ ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎನ್.ಚನ್ನಬಸಪ್ಪ, ಹರತಾಳು ಹಾಲಪ್ಪ, ಡಿ.ಎಸ್.ಅರುಣ್, ರುದ್ರೇಗೌಡರು, ಭಾರತೀಶೆಟ್ಟಿ, ದತ್ತಾತ್ರಿ, ಟಿ.ಡಿ.ಮೇಘರಾಜ್, ಗಾಯಿತ್ರಿ ಮಲ್ಲಪ್ಪ, ಹರಿಕೃಷ್ಣ, ಶಿವರಾಜ್, ನಾಗರಾಜ್, ಚಂದ್ರಶೇಖರ್, ಅಶೋಕ್ ನಾಯಕ್, ಮೋಹನ್‍ರೆಡ್ಡಿ, ಕೆ.ವಿ. ಅಣ್ಣಪ್ಪ ಮತ್ತಿತರರಿದ್ದರು.

error: Content is protected !!