ವರ್ಣವ್ಯವಸ್ಥೆಯ ಮಾಲಿನ್ಯವನ್ನು ತೊಳೆದವರು ಡಾ.ಅಂಬೇಡ್ಕರ್ ಅವರು. ಬೌದ್ಧಿಕವಾಗಿ ನಾಶವಾಗುತ್ತಿರುವ ಈ ಕಾಲದಲ್ಲಿ ಅಂಬೇಡ್ಕರ್ ವಿಚಾರಗಳನ್ನು ಮನನ ಮಾಡಿ, ಅನುಷ್ಠಾನಕ್ಕೆ ತರುವ ತೀವ್ರ ಪ್ರಯತ್ನ ಅಗತ್ಯವಿದೆ. ಇಂದು ಮುಂದು ಅಂಬೇಡ್ಕರ್ ವಿಚಾರಗಳು ಅತಿ ಮುಖ್ಯವಾಗಿವೆ. ಬರೀ ಜಾಹಿರಾತು ಮತ್ತು ಪ್ರಚಾರಕ್ಕೆ ಸೀಮಿತ ಮಾಡದೆ, ವೈಯಕ್ತಿಕವಾಗಿ ಅನುಸರಿಸಬೇಕು. ಅದರಲ್ಲೂ ಪಾಠ ಮಾಡುವ ಮನಸ್ಸುಗಳು ಬಹು ಮುಖ್ಯ ಎಂದು ಖ್ಯಾತ ವಿಚಾರವಾದಿ ಪ್ರೊ.ಶ್ರೀ ಕಂಠಕೂಡಿಗೆ ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಪದವಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಮತ್ತು ಸಮಗ್ರ ಅಭಿವೃದ್ಧಿ ಎಂಬ ರಾಜ್ಯ ಮಟ್ಟದ ಕಾರ್ಯಾಗಾರವನ್ನ ಉದ್ಘಾಟಿಸಿ ಮಾತಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಕುಮಾರಚಲ್ಯ ಅವರು ಮಾತಾಡಿ ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸುವುದೆ ವೈಚಾರಿಕತೆ. ಇಂದು ಸುಳ್ಳಿನ ಭಯೋತ್ಪಾದಕರುಗಳಿಂದ ಸುಧಾರಣೆ ತರಲಾಗುತ್ತಿಲ್ಲ. ಅಂತಃಕರಣ ಇಂದು ಸತ್ತು ಹೋಗಿದೆ. ಸುಧಾರಕರು ಬೆನ್ನ ಹಿಂದಿನ ಬೆಳಕುಗಳು. ಹಿಂದಿರುಗಿ ನೋಡಿದಾಗ ಬೆಳಕುಗಳು ಕಾಣುತ್ತವೆ. ಪ್ರತಿಷ್ಟೆಗಾಗಿ ಸುಧಾರಕರನ್ನು ನೆನಪು ಮಾಡಿಕೊಳ್ಳುವುದಲ್ಲ ಎಂದು ತಿಳಿಸಿದರು.
ಮತೋರ್ವ ಅತಿಥಿಗಳಾದ ಪ್ರೊ.ಹೂವಯ್ಯಗೌಡರು, ಸಂಪನ್ಮೂಲವ್ಯಕ್ತಿಗಳಾದ ಪ್ರೊ.ಎ.ಬಿ.ರಾಮಚಂದ್ರಪ್ಪ, ಪ್ರೊ.ಕೆ. ಆರ್.ಮಂಜುನಾಥ್ ಉಪಸ್ಥಿತಿರಿದ್ದರು. ಅಧ್ಯಕ್ಷತೆಯನ್ನು ಡೀನರಾದ ಪ್ರೊ.ಹಿರೇಮಣಿನಾಯ್ಕ ಅವರು ವಹಿಸಿದ್ದರು. ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
