ಸರ್ಕಾರ ಯಾವುದೇ ಭೂಮಾಫಿಯಾದ ಒತ್ತಡಗಳಿಗೆ ಮಣಿಯಬಾರದು. ರೈತರ ಆತಂಕ ದೂರ ಮಾಡಬೇಕು : ಸಂಸದ ಬಿ.ವೈ. ರಾಘವೇಂದ್ರ
ಶಿವಮೊಗ್ಗ: ಸರ್ಕಾರ ಮಧ್ಯಪ್ರವೇಶ ಮಾಡಿ ಶಿವಮೊಗ್ಗದ ತುಂಗಾ ಭದ್ರಾ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಹಾಗು ಅಲ್ಲಿ ವಾಸಿಸುತ್ತಿರುವ ಜನರಿಗೆ ಮತ್ತು ಉಳುಮೆ ಮಾಡುತ್ತಿರುವ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ತುಂಗಾ ಭದ್ರಾ ಸಕ್ಕರೆ ಕಾರ್ಖಾನೆÉ 1950ರಲ್ಲಿಯೇ ಕಾರ್ಖಾನೆ ಪ್ರಾರಂಭವಾಯಿತು. ನಂತರದಲ್ಲಿ ಚೆನ್ನೈನ ದೇವಿ ಶುಗರ್ ಹೆಸರಲ್ಲಿ ಮುಂದುವರೆಯಲ್ಪಟ್ಟಿತು. 1994ರಲ್ಲಿ ಅದು ಮುಚ್ಚಿ ಹೋಯಿತು ಎಂದರು.
ಸುಮಾರು 2374 ಎಕರೆ ಪ್ರದೇಶದಲ್ಲಿ ಹಲವು ರೈತರು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕೆಲವರಿಗೆ ಸಾಗುವಳಿ ಚೀಟಿ ಕೂಡ ಸಿಕ್ಕಿದೆ. ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರೈತರು ಸಕ್ರಮಕ್ಕಾಗಿ ಅರ್ಜಿಯನ್ನೂ ಕೂಡ ಹಾಕಿದ್ದುಂಟು. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿ ಈ ಎಲ್ಲಾ ಜಾಗವನ್ನು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಒಪ್ಪಿಸಿದೆ. ಈಗ ಅಲ್ಲಿನ ಎಲ್ಲಾ ರೈತರು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕು. ನ್ಯಾಯಾಲಯಕ್ಕೆ ಈಗಿರುವ ಪರಿಸ್ಥಿತಿ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ರೈತರ ಸಂಕಷ್ಟವನ್ನು ನ್ಯಾಯಾಲಯಕ್ಕೆ ತಿಳಿಸಿ,ಮವರಿಕೆ ಮಾಡಿಕೊಡಬೇಕು ಆಜಾಗದಲ್ಲಿ 398 ಕುಟುಂಬಗಳು ವಾಸ ಮಾಡುತ್ತಿವೆ. ಅನೇಕ ಕಡೆ ನಾಡಕಚೇರಿಗಳಿವೆ. ಸರ್ಕಾರಿ ಜಾಗವಿದೆ. ನೀರಿನ ಟ್ಯಾಂಕ್ ಗಳಿವೆ.
ಈ ಜಾಗದಲ್ಲಿ ಖಾಸಗಿ ಲೇಔಟ್ ಆಗುತ್ತಿದೆ ಎಂಬ ಸುದ್ದಿಯೂ ಇದೆ. ಇದು ಆಗಬಾರದು. ವಸತಿ ಪ್ರದೇಶವನ್ನು ಮತ್ತು ರೈತರ ಉಳುಮೆ ಜಾಗವನ್ನು ಮಾಲೀಕರಿಂದ ಸರ್ಕಾರವೇ ಬಿಡಿಸಿಕೊಂಡು ರೈತರಿಗೆ ನೀಡಬೇಕು. ಸರ್ಕಾರ ಯಾವುದೇ ಭೂಮಾಫಿಯಾದ ಒತ್ತಡಗಳಿಗೆ ಮಣಿಯಬಾರದು. ರೈತರ ಆತಂಕ ದೂರ ಮಾಡಬೇಕು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ. ಮೇಘರಾಜ್, ಗಿರೀಶ್ ಪಟೇಲ್, ಎಸ್. ದತ್ತಾತ್ರಿ, ಶಿವರಾಜ್, ಕೆ.ಬಿ. ಅಶೋಕ್ ನಾಯ್ಕ್, ಜಗದೀಶ್, ಹೃಷಿಕೇಶ್ ಪೈ, ರತ್ನಾಕರ ಶೆಣೈ, ರಮೇಶ್, ವಿನ್ಸೆಂಟ್ ಮೊದಲಾದವರಿದ್ದರು.
ಬಾಕ್ಸ್
ಆ ದೇವರು ನೋಡಿಕೊಳ್ಳುತ್ತಾನೆ… ಬಿ.ವೈ. ರಾಘವೇಂದ್ರ,
ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಕೆಲವರು ಆರೋಪ ಮಾಡಿದ್ದು, ನಿಮ್ಮ ಹೆಸರನ್ನು ಮಧ್ಯ ತರುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಸಂಸದ ಬಿ.ವೈ. ರಾಘವೇಂದ್ರ, ಆ ಜಾಗಕ್ಕೆ ಸಂಬಂಧಿಸಿದಂತೆ ಒಂದು ಅಡಿಯೂ ನನಗೆ ಬೇಕಾಗಿಲ್ಲ. ಕೆಲವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ ಗುರಿಯೇ ಆ ಜಾಗವನ್ನು ರೈತರಿಗೆ ಮರಳಿ ಕೊಡಿಸಬೇಕು ಎಂಬುದಾಗಿದೆ. ಅಲ್ಲಿ ಯಾರು ಲೇಔಟ್ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಕೆಲವರು ಆರೋಪ ಮಾಡುವಂತೆ ನಿಜವೇ ಆಗಿದ್ದರೆ ಆ ದೇವರು ನೋಡಿಕೊಳ್ಳುತ್ತಾನೆ. ನನ್ನ ಮೇಲೆ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.