ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಸಾಮಾಜಿಕ ನ್ಯಾಯ ಎತ್ತಿಹಿಡಿದ ಬಜೆಟ್ ಆಗಿದೆ. ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿದ ಸಿದ್ಧರಾಮಯ್ಯನವರಿಗೆ ಕೃತಜ್ಞತೆಗಳು ಎಂದು ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ತಿಳಿಸಿದ್ದಾರೆ.
ಆರ್ಥಿಕ, ಸಾಮಾಜಿಕ ಸಮಾನತೆ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳ ಬಜೆಟ್ ನೀಡಿದೆ. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡಿರುವ ವಿಶೇಷ ಆಯವ್ಯಯ ಇದಾಗಿದೆ. ನಗರಾಭಿವೃದ್ಧಿ ಸೇರಿ ಎಲ್ಲ ಇಲಾಖೆಗಳಿಗೆ ಹಣ ವಿನಿಯೋಗವನ್ನು ಜಾಣ್ಮೆಯಿಂದ ಮಾಡಲಾಗಿದೆ. ಕಾಂಗ್ರೆಸ್ ಜನಪರ ಎಂಬುದಕ್ಕೆ ಈ ಬಜೆಟ್ ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ವರ್ಗದ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಹಂಚಿಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಹಾಗೂ ಎಲ್ಲ ಕ್ಷೇತ್ರಕ್ಕೂ ಹೊಂದಿಕೆಯಾಗಿರುವ ಸಮಗ್ರ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ರಾಜ್ಯದ 24005 ಜನ ಪೌರಕಾರ್ಮಿಕರ ಸೇವೆಯನ್ನು ಕಾಯಂ ಗೊಳಿಸಿದ್ದಾರೆ , ಶಿವಮೊಗ್ಗ ಜಿಲ್ಲೆಗೆ ಕೃಷಿ ಆಧಾರಿತ ಆಹಾರ ಉತ್ಪಾದನಾ ಘಟಕವನ್ನು ನೀಡಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಿದ್ದಾರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಪ್ರಯೋಗಾಲಯಗಳ ಸ್ಥಾಪಿಸುವ ಮೂಲಕ ಬಡಜನರ ಕೈಗಟ್ಟುಗುವ ದರದಲ್ಲಿ ಸೇವೆಯನ್ನು ನೀಡುವ ಉತ್ತಮ ಯೋಜನೆ ಘೋಷಣೆ , ಶಿವಮೊಗ್ಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 114 ಮಾಡ್ಯೂಲಾರ್ ಓಟಿ ಸ್ಥಾಪನೆ, ಶಿವಮೊಗ್ಗ ನಗರದ ಬೊಮ್ಮನಕಟ್ಟೆ ರಸ್ತೆಯ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಅನುದಾನ ಘೋಷಣೆ, ಜೊತೆಗೆ ಶಿವಮೊಗ್ಗದಲ್ಲಿ ಹೊಸ ವಿಜ್ಞಾನ ಕೇಂದ್ರ(ತಾರಾಲಯ) ಸ್ಥಾಪನೆಗೆ ಈ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು. ಶಿವಮೊಗ್ಗ ನಗರದ ನಾಗರಿಕರಿಗೆ ಅತಿ ಸಂತಸದ ವಿಚಾರವಾಗಿದೆ. ಬರದ ಪರಿಸ್ಥಿತಿಯಲ್ಲೂ ಸಮತೋಲನದ ಬಜೆಟ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಲ್ಲಾ ಸಚಿವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.