ಶಿವಮೊಗ್ಗ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅದೇ, ಧೈರ್ಯದಿಂದ ಗೀತಾಕ್ಕಗೆ ಮತ ನೀಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.
ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ದಾರಿ ದೀಪವಾಗಿವೆ. ಅದೇ ರೀತಿ, ಎಸ್.ಬಂಗಾರಪ್ಪ ಅವರ ಆಡಳಿತದ ಅವಧಿಯಲ್ಲಿ ಉಚಿತ ವಿದ್ಯುತ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಶೋಷಿತ ವರ್ಗಕ್ಕೆ ನೆರಳಾಗಿ ನಿಂತಿದ್ದರು ಎಂದರು.
ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ರೈತರಿಗೆ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ. ರಾಜ್ಯ ಮಟ್ಟದಲ್ಲಿ ಸಚಿವ ಮಧು ಬಂಗಾರಪ್ಪ ರೈತರ ಕಷ್ಟಗಳಿಗೆ ನೆರವಾದರೆ, ಕೇಂದ್ರದ ಹಂತದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸಲು ನಾನು ಶ್ರಮಿಸುತ್ತೇನೆ. ಅದೇ ಕಾರಣಕ್ಕೆ ನನಗೆ ಮತ ನೀಡಿ ಎಂದು ಕೋರಿದರು
ನಟ ಶಿವರಾಜ ಕುಮಾರ್ ಮಾತನಾಡಿ, ಜನರು ಬದಲಾವಣೆ ಬಯಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಈ ಯೋಜನೆಗಳಿಂದ ಬಡವರಿಗೆ ಸಹಾಯ ಆಗ ಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳಿಗೆ ಬೆಲೆ ಸಿಗಲಿದೆ. ಈ ನಿಟ್ಟಿನಲ್ಲಿ ಯೋಜನೆಗಳು ಜನಸಾಮಾನ್ಯರಿಗೆ ನೆರವಾಗಿವೆ ಎಂದು ನಾನು ಬಯಸುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಏತ ನೀರಾವರಿ ಯೋಜನೆಗೆ ಬೀಜ ಬಿತ್ತಿದವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಎನ್ನುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆ ನುಂಗಲಾಗದ ತುತ್ತಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗೀತಾ ಅವರು ಶಾಸ್ವತ ಪರಿಹಾರ ಸೂಚಿಸುವರು ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಶಕ್ತಿ ತುಂಬುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಶಕ್ತರಿಗೆ ನೆರವಾಗಿದ್ದಾರೆ. ಇದರ ಋಣ ತೀರಿಸುವ ಸಕಾಲ ಈಗ ಬಂದಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇಲ್ಲಿ ಬಿಜೆಪಿ ಪಕ್ಷವನ್ನು ಕಿತ್ತು ಎಸೆಯಬೇಕಿದೆ. ಅದೇ ಕಾರಣಕ್ಕೆ ಗೀತಾ ಅವರಿಗೆ ಬೆಂಬಲಿಸೋಣ ಎಂದರು.
ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನಪರವಾಗಿವೆ. ಅದೇ ಕಾರಣಕ್ಕೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಯ್ಕೆ ಮಾಡೋಣ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಮಜಿ ಸದಸ್ಯ ಆರ್.ಪ್ರಸನ್ನಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ,ಎಸ್.ರವಿಕುಮಾರ್, ಜಿ.ಡಿ.ಮಂಜುನಾಥ್, ಎನ್.ರಮೇಶ್, ಜಿ.ಪಲ್ಲವಿ, ಕಲಗೋಡು ರತ್ನಾಕರ್, ಎಂ.ಶ್ರೀಕಾಂತ್, ವೈ.ಎಚ್.ನಾಗರಾಜ್, ಚಂದ್ರಭೂಪಾಲ್, ರವಿಕುಮಾರ್, ಮಲೆಶಂಕರ ರಮೇಶ, ಸಿ.ಹನುಮಂತ್, ಇಕ್ಕೇರಿ ರಮೇಶ್, ಅನಿತಾ ಕುಮಾರಿ ಇದ್ದರು.
ರೈತರ ಸಮಸ್ಯೆ ಪರಿಹಾರಕ್ಕೆ ಗೀತಕ್ಕ ಶ್ರಮಿಸುವರು: ಮಧು ಬಂಗಾರಪ್ಪ
ಮುಳುಗಡೆ ಸಂತ್ರಸ್ತರು ಹಾಗೂ ಬಗರುಕಂ ರೈತರ ಸಮಸ್ಯೆ ಬಗೆ ಹರಿಸುವ ಕೀಲಿ ಕೈ ದೆಹಲಿಯ ಕೇಂದ್ರದಲ್ಲಿದೆ. ಆದರೆ, 10 ವರ್ಷದಿಂದ ಆಡಳಿತ ನಡೆಸುತ್ತಿರುವ ಸ್ಥಳೀಯ ಸಂಸದರು, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ಉದ್ದೇಶಕ್ಕೆ ಗೀತಾ ಶಿವರಾಜ ಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕಿದೆ. ಗೀತಾಕ್ಕ ಗೆದ್ದರೆ, ಜಿಲ್ಲೆಯ ಶೋಷಿತ ವರ್ಗಕ್ಕೆ ಖಂಡಿತ ನ್ಯಾಯ ಸಿಗಲಿದೆ. ಇದಕ್ಕೆ ನಾನು ಗ್ಯಾರಂಟಿ ನೀಡುತ್ತೇನೆ ಎಂದು ಸಚಿವ ಮಧುಬಂಗಾರಪ್ಪ ಬರವಸೆ ನೀಡಿದರು.