ಶಿವಮೊಗ್ಗ : ಸತತ ಮೂರನೇ ಭಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಜೀ ಅವರು ಅಧಿಕಾರ ಸ್ವೀಕರಿಸಿದ ನಂತರ ಮಂಗಳೂರು ಸಮೀಪದ ಬೋಳಿಯಾರ್ ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ತಂಡವು ನಡೆಸಿದ ಹಲ್ಲೆಯನ್ನು ವಿಧಾನ ಪರಿಷತ್ ನೂತನ ಸದಸ್ಯ ಡಾ.ಧನಂಜಯ ಸರ್ಜಿ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದ ಗೌರವಾನ್ವಿತ ಸ್ಪೀಕರ್ ಅವರ ಕ್ಷೇತ್ರದಲ್ಲೇ ಇಂತಹ ರಾಜಕೀಯ ದ್ವೇಷದ ದುಷ್ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಘಟನೆಯಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಇಬ್ಬರಿಗೆ ಚೂರಿ ಇರಿಯಲಾಗಿದೆ, ಈ ಹಿಂದೆಯೂ ಆ ಭಾಗದಲ್ಲಿ ಇಂತಹ ಘಟನೆಗಳು ನಡೆದಿದ್ದವು, ಚುನಾವಣೋತ್ತರದಲ್ಲಿ ಈ ರೀತಿ ಬಿಜೆಪಿ ಕಾರ್ಯರ್ತರನ್ನು ಗುರಿಯಾಗಿಸಿಟ್ಟುಕೊಂಡು ರಾಜಕೀಯ ಪ್ರೇರಿತ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ. ಕಾಂಗ್ರೆಸ್ ಆಡಳಿತ ಆಡಳಿತದಲ್ಲಿರುವಾಗ ಇಂತಹ ಘಟನೆಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ,
ರಾಜಕೀಯ ದ್ವೇಷದ ಹಲ್ಲೆಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ಅಶಾಂತಿಗೆ ಕಾರಣವಾಗಲಿದೆ, ಈ ಘಟನೆ ಕುರಿತು ಕಾನೂನು ಕ್ರಮಗಳನ್ನು ಬಿಗಿಗೊಳಿಸಬೇಕು ಎಂದು ಮಂಗಳೂರು ಮಾನ್ಯ ಶಾಸಕರಾದ ವೇದವ್ಯಾಸ ಕಾಮತ್ ಅವರು ಕೂಡ ಆಗ್ರಹಪಡಿಸಿದ್ದು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಅಲ್ಲದೇ ನಾಗರಿಕರಿಗೆ ನ್ಯಾಯ ಒದಗಿಸಬೇಕು ಎಂದು ಡಾ.ಧನಂಜಯ ಸರ್ಜಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.