ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ 15ನೇ ಬಜೆಟ್ ಬಡವರ ಪರವಾಗಿದ್ದು, ಸರ್ವರಿಗೂ ಸಮಪಾಲು ಸಮ ಬಾಳು ಎನ್ನುವಂತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಪಿ. ಶೇಷಾದ್ರಿ ಹೇಳಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಮುಖ್ಯವಾಗಿ ಕುರಿಗಾಹಿಗಳಿಗೆ, ಅಲ್ಪಸಂಖ್ಯಾತರಿಗೆ, ರೈತರಿಗೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಅವರು ಪ್ರಕಟಿಸಿದ್ದಾರೆ. ಎಲ್ಲಾ ವರ್ಗಗಳನ್ನು ಸಮಾನ ದೃಷ್ಟಿಯಿಂದ ನೋಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಸುಮಾರು ಎರಡು ಸಾವಿರ ಶಾಲೆಗಳನ್ನಾಗಿ ಪರಿವರ್ತಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇವೆಲ್ಲವೂ ಸ್ವಾಗತಾರ್ಹ ಎಂದರು.
ಹಾಗೆಯೇ ಶಿವಮೊಗ್ಗ ಜಿಲ್ಲೆಗೂ ಕೂಡ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಡಕೆ ರೋಗ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಭದ್ರಾವತಿಯಲ್ಲಿ ಮೀನು ಮಾರುಕಟ್ಟೆ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಕೌಶಲ್ಯ ಕೇಂದ್ರ ಸ್ಥಾಪನೆಗೆ ಒತ್ತು ಕೊಟ್ಟಿದ್ದಾರೆ. ದಿ. ಎಸ್. ಬಂಗಾರಪ್ಪನವರ ಸ್ಮಾರಕ ಮಾಡುವುದಾಗಿ ಹೇಳಿದ್ದಾರೆ. ಹೈಟೆಕ್ ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ 100 ಕೋಟಿ ರೂ., ಮೆಗ್ಗಾನ್ ಆಸ್ಪತ್ರೆಗೆ ಆಪರೇಷನ್ ಥಿಯೇಟರ್ ಮತ್ತು ಅಭಿವೃದ್ಧಿಗೆ 25 ಕೋಟಿ ರೂ. ನೀಡಿದ್ದಾರೆ ಎಂದಿದ್ದಾರೆ.
ಹೀಗೆ ಅಭಿವೃದ್ಧಿಗೆ ಒತ್ತು ನೀಡಿದ್ದಾರೆಲ್ಲದೇ ಎಲ್ಲಾ ಗ್ಯಾರಂಟಿಗಳನ್ನು ಹೊಂದಿಸಿಕೊಳ್ಳುವ ಪ್ರಯತ್ನ ಕೂಡ ಮಾಡಿದ್ದಾರೆ. ಒಟ್ಟಾರೆ ಇದೊಂದು ಬಡವರ ಪರವಾದ ಉತ್ತಮ ಬಜೆಟ್ ಆಗಿದೆ ಎಂದು ಶೇಷಾದ್ರಿ ತಿಳಿಸಿದ್ದಾರೆ.