ನೂತನ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಪಾದನೆ
ತರೀಕೆರೆ : ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದು ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎಂದು ನೂತನ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಪಾದಿಸಿದರು.
ಇಲ್ಲಿನ ಬಿಜೆಪಿ ಮಂಡಲ ವತಿಯಿಂದ ಗುರುವಾರ ನೂತನ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹತ್ಯೆ ಮತ್ತು ಆತ್ಮಹತ್ಯೆ ಎರಡೂ ಹೆಚ್ಚಾಗಿದೆ, ಕೊಲೆಗಡುಕರಿಗೆ ಭಯ ಇಲ್ಲದಂತಾಗಿದೆ, ಒಂದು ಕೊಲೆಗಡುಕರಿಗೆ ಭಯ ಇದ್ದಿದ್ದರೆ ನೇಹಾಳಂತಹ ಹತ್ಯೆ ಕಾಲೇಜು ಆವರಣದಲ್ಲಿ ಆಗುತ್ತಿರಲಿಲ್ಲ, ಇಂತಹ ಅನೇಕ ಘಟನೆಗಳು ನಡೆಯುತ್ತಿರಲಿಲ್ಲ, ಹಾಗೆಯೇ ಕಳೆದ ಒಂದು ವರ್ಷ ಅವಧಿಯಲ್ಲಿ 700 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು ಸರ್ಕಾರ ನಿರ್ಲಕ್ಷ ವನ್ನು ಎತ್ತಿ ತೋರಿಸುತ್ತದೆ, ಇದೇ ಅವರ ಸಾಧನೆಯಾಗಿದೆ, ಅಲ್ಲದೇ ನಕಲಿ ಖಾತೆಗೆ 187 ಕೋಟಿ ರೂಪಾಯಿ ವರ್ಗಾವಣೆ ಮಾಡುವ ಮೂಲಕ ಲೂಟಿ ಹೊಡೆದಿದೆ, ಅದರಲ್ಲೂ ಕಮಿಷನ್ ಗಿಂತ ಶೇ.100 ರಷ್ಟು ಲೂಟಿ ಹೊಡೆಯುತ್ತಿದೆ ಎಂದು ಆಪಾದಿಸಿದರು.
ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನನಗೆ ಅವಕಾಶ ಜೆಡೆಸ್, ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು, ಮೇಲ್ಮನೆ ಚಿಂತಕರ ಚಾವಡಿ, ಈ ಚಾವಡಿಗೆ ನಾಯಕರಾದ ಸಿ.ಟಿ.ರವಿ ಅವರು ಹಾಗೂ ಡಾ.ಧನಂಜಯ ಸರ್ಜಿ, ಎಸ್.ಎಲ್.ಭೋಜೇಗೌಡ ಅವರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ, ಇವರೆಲ್ಲರೂ ರಾಷ್ಟ್ರೀಯತೆಯ ಸಂಕೇತವಾಗಿ ಸೇವೆ ಸಲ್ಲಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಏನೇ ಬಂಡಾಯವೆದ್ದರೂ ನಮ್ಮ ಪಕ್ಷದ ಸಿದ್ಧಾಂತ ಎಂದೂ ಬದಲಾಗಲಿಲ್ಲ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷ ಕ್ಕಿಂತ ದೇಶ ಮುಖ್ಯಎಂಬ ಉದಾತ್ತ ಧ್ಯೇಯ ಬಿಜೆಪಿಯದ್ದು, ಈ ನಿಟ್ಟಿನಲ್ಲಿ ಭಾರತವನ್ನು ವಿಕಸಿತವಾಗಿ ನಿರ್ಮಾಣ ಮಾಡುವ ಮೂಲಕ ಭದ್ರ ಭವಿಷ್ಯವನ್ನು ಕಟ್ಟುವ ಶಕ್ತಿ ಬಿಜೆಪಿಗಿದೆ, ಇದರ ಮಹಾಶಕ್ತಿಯೇ ಕಾರ್ಯಕರ್ತರು ಎಂಬುದು ಹೆಮ್ಮೆಯ ಸಂಗತಿ ಎಂದರು.
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ, ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ನಮ್ಮದಾಗಿದೆ, ಇಷ್ಟಕ್ಕೆ ನಾವು ಬೀಗಬಾರದು, ಈ ಎಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಮುಂದೆ ಬರಲಿರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜಯಭೇರಿ ಭಾರಿಸುವಂತಾಗಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಕಳೆದುಕೊಂಡು ಇಡೀ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ಕಡಿಮೆಯಾಗಿತ್ತು, ಇದೀಗ ಜಿಲ್ಲೆಗೆ ನಾಲ್ಕು ಎಂ ಎಲ್ ಸಿ ಹಾಗೂ ಒಬ್ಬ ಸಂಸದರನ್ನು ಜನ ಆಯ್ಕೆ ಮಾಡಿದ್ದು, ಪಕ್ಷಕ್ಕೆ ದೊಡ್ಡ ಮಟ್ಟದ ಶಕ್ತಿ ಬಂದಂತಾಗಿದೆ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುರೇಶ್, ಮಂಡಲ ಅಧ್ಯಕ್ಷ ಪ್ರತಾಪ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರಡಪ್ಪ, ಮಾಜಿ ಶಾಸಕ ಸ್.ಎಂ.ನಾಗರಾಜ್, ಮುಖಂಡರಾದ ಕೆ.ಆರ್. ಆನಂದಪ್ಪ, ದ್ರುವಕುಮಾರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಸ್.ಬಿ.ಆನಂದಪ್ಪ, ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್, ತರೀಕೆರೆ ಮಂಡಲ ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್, ಬಸವರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧಾಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಚೈತ್ರ ಶ್ರೀ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ, ಜೆಡಿಎಸ್ ಮುಖಂಡ ನರೇಂದ್ರ ಮತ್ತಿತರರು ಹಾಜರಿದ್ದರು.