“ವಾಣಿಜ್ಯ ಬೆಳೆಗಳಿಂದಾಗಿ ಶತಮಾನದಿಂದ ಬೆಳೆಯುತ್ತಿದ್ದ ಸಿರಿಧಾನ್ಯಗಳನ್ನು ಬೆಳೆಯುವುದನ್ನು ಬಿಟ್ಟಿದ್ದಾರೆ . ಒಣ ಪ್ರದೇಶದಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು ,ಕಾಳುಗಳನ್ನು ಕೊಡುವುದರ ಜೊತೆಗೆ ಮೇವನ್ನು ನೀಡುವುದರಿಂದ ರೈತರಿಗೆ ಸಿರಿಧಾನ್ಯಗಳು ಆಹಾರ, ಆದಾಯ ಹಾಗೂ ಆರೋಗ್ಯದ ಅವಶ್ಯಕತೆನ್ನು ನೀಗಿಸಿದೆ”.ಎಂದು ಕೃಷಿ ವಿವಿಯ ಕುಲಪತಿಗಳಾದ ಡಾ.ಆರ್.ಸಿ. ಜಗದೀಶ್ ಹೇಳಿದರು.
ರೈತರಲ್ಲಿ ಸಿರಿಧಾನ್ಯಗಳ ಮಹತ್ವದ ಅರಿವು ಮೂಡಿಸಲು , ಅವುಗಳನ್ನು ಬೆಳೆಯಲು ಉತ್ತೇಜನ ನೀಡುವ ಸಲುವಾಗಿ ಅನಂದಪುರ ಸಮೀಪದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಶಿವಮೊಗ್ಗ ,ಕೃಷಿ ನಿರ್ದೇಶನಾಲಯ , ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ , ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಹೈದರಾಬಾದ್ , ಶ್ರಿ ಸಂಗಮೇಶ್ವರ ರೈತ ಉತ್ಪಾದಕರ ಸಹಕಾರ ಸಂಘ ಚುರ್ಚಿಗುಂಡಿ ಇವರ ಸಂಯುಕ್ತಾಶ್ರಯದಲ್ಲಿ ಸಿರಿಧಾನ್ಯಗಳ ಕಾರ್ಯಾಗಾರ ಕಾರ್ಯಕ್ರಮವನ್ನು ಚುರ್ಚಿಗುಂಡಿಯಲ್ಲಿ ರೈತರಿಗೆ ಸಿರಿಧಾನ್ಯಗಳನ್ನು ಕೊಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ರೈತರಲ್ಲಿ,ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಸಿರಿಧಾನ್ಯಗಳ ಆರೋಗ್ಯ ಸಿರಿಯನ್ನು ತಿಳಿಸಲು ಘೋಷವಾಕ್ಯಗಳ ಮೂಲಕ ಜಾತಾ ನಡೆಸಲಾಯಿತು.ಜಾತಾದಲ್ಲಿ ಕೃಷಿ ವಿವಿಯ ವಿಜ್ಞಾನಿಗಳು,ಕೃಷಿ ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು , ಶ್ರೀಸಂಗಮೇಶ್ವರ ರೈತ ಸಹಕಾರಿ ಸಂಘದ ಸದಸ್ಯರು , ಗ್ರಾಮದ ರೈತರು ಹಾಗೂ ಮಹಿಳೆಯರು ಸೇರಿ ಸುಮಾರು 300ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು .
“ಗುಡ್ಡ ಪ್ರದೇಶದಲ್ಲಿ ಕಡಿಮೆ ಫಲವತ್ತತೆಯಿರುವ ಪ್ರದೇಶದಲ್ಲೂ ,ಕಡಿಮೆ ನೀರು ಇದ್ದರು ಕೂಡ ಬೆಳೆಯಬಲ್ಲ ಸಿರಿಧಾನ್ಯಗಳು ಯಾವುದೇ ರಾಸಾಯನಿಕವನ್ನು ಸಿಂಪಡಿಸದೆ ಹೆಚ್ಚಿನ ಇಳುವರಿಯನ್ನು ನೀಡುತ್ತದೆ. ಹೆಚ್ಚಿನ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು ನಾರಿನಾಂಶ ಹೆಚ್ಚಾಗಿರುತ್ತದೆ. ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ. ರೈತರು ಕೇವಲ ಸಿರಿಧಾನ್ಯಗಳನ್ನು ಬೆಳೆಯದೆ, ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸಬೇಕು.
ಕೃಷಿ ವಿವಿಯಿಂದ ಸಿರಿಧಾನ್ಯಗಳನ್ನು ಸಿಪ್ಪೆ ತೆಗೆಯುವ, ಜರಡಿ ಹಿಡಿಯುವ ಹಾಗೂ ಹಿಟ್ಟು ಮಾಡುವ ಯಂತ್ರವು ದೊರೆಯುತ್ತಿದ್ದು ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು. ಉತ್ಪಾದಕರ ಸಂಘಗಳಿಗೆ ಗೊಬ್ಬರ ಬೀಜ ಹಾಗೂ ತಾಂತ್ರಿಕ ಮಾಹಿತಿಯನ್ನು ಕೊಟ್ಟು ಸಿರಿಧಾನ್ಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ತರಬೇತಿಗಳನ್ನು ನೀಡಬೇಕು. ಮಕ್ಕಳಿಗೆ ಕಾಫಿ ಬದಲು ರಾಗಿಮಾಲ್ಟ .ಬಿಸ್ಕೆಟ್ ಬದಲು ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳನ್ನು ನೀಡಬೇಕಿದೆ ಎಂದು ಹೇಳಿದರು”.
ಕಾರ್ಯಕ್ರಮದಲ್ಲಿದ್ದ ಕೃಷಿ ವಿವಿಯ ಶಿಕ್ಷಣ ನಿರ್ದೇಶಕರಾದ ಹೇಮ್ಲಾ ನಾಯಕ್ ಮಾತನಾಡಿ “ಪ್ರಪಂಚದಲ್ಲಿ ಬೆಳೆಯಲು ಆಗದೇ ಇರುವಂತಹ ಬೆಳೆಗಳನ್ನು ಭಾರತದಲ್ಲಿ ಬೆಳೆಯುತ್ತಿದ್ದು ಭಾರತವು ವೈವಿದ್ಯಮಯ ವಾತಾವರಣವನ್ನು ಹೊಂದಿದೆ. ರೈತರು ರಾಸಾಯನಿಕಗಳನ್ನು ಬಳಸದಿರುವ ಸಿರಿಧಾನ್ಯಗಳನ್ನು ಜಾನುವಾರುಗಳಿಗೆ ನೀಡಿ, ರಾಸಾಯನಿಕಗಳಿಂದ ಬೆಳೆಸಿದ ಆಹಾರವನ್ನು ತಿಂದು ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ. ಸಿರಿಧಾನ್ಯಗಳನ್ನು ಸೇವಿಸಿ ರೋಗವನ್ನು ಓಡಿಸಬೇಕಾಗಿದೆ. ಕೃಷಿ ಪದ್ಧತಿಗಳು ಬದಲಾದಂತೆ, ನಮ್ಮ ಆಹಾರ ಪದ್ಧತಿಯೂ ಬದಲಾಗಿ ಸಿರಿಧಾನ್ಯಗಳ ಸೇವನೆ ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಏಕಬೆಳೆಗೆ ಸೀಮಿತವಾಗದೆ ಅನೇಕ ಬೆಳೆಗಳನ್ನು ಬೆಳೆದು ಆದಾಯವನ್ನು ದ್ವಿಗುಣಗೊಳಿಸಬೇಕಾಗಿದೆ ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಿದೆ. ಸಿರಿಧಾನ್ಯಗಳನ್ನು ಸೇವಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ” ಎಂದರು
” ಎಳೆಯ ಮಕ್ಕಳಿಗೆ ಸಿರಿಧಾನ್ಯಗಳನ್ನು ಕೊಡುವುದರಿಂದ ನಾರು, ಪ್ರೋಟೀನ್, ವಿಟಮಿನ್ ಮುಂತಾದ ಪೋಷಕಾಂಶಗಳಿದ್ದು ,ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ತಡೆಯಬಹುದು. ಸಮಗ್ರ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು”
” ನವನೆ, ಹಾರಕ, ಕೋರಲೆ, ಊದಲು, ಸಾಮೆಗಳನ್ನು ರೈತರಿಗೆ ಕೊಟ್ಟು, ಅವುಗಳು ಬೆಳೆದ ನಂತರ ರೈತರಿಂದಲೇ ನೇರವಾಗಿ ಸಿರಿಧಾನ್ಯಗಳನ್ನು ಖರೀದಿ ಮಾಡಿ, ಸಂಸ್ಕರಣೆಯನ್ನು ಮಾಡಿ 22 ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕವಿಲ್ಲದೆ ಬೆಳೆದೆ ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ಖಾದ್ಯಗಳನ್ನು ಸಂಘದಿಂದ ಮಾರಾಟ ಮಾಡಲಾಗುತ್ತದೆ. ಎಂದು ಭೂಸಿರಿ ಸಿರಿಧಾನ್ಯಗಳ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಚಂದ್ರಕಾಂತ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎಸ್. ಎಮ್ ಸೂರ್ಯಕಾಂತ್ ಮಾತನಾಡಿ ” ಸಿರಿಧಾನ್ಯಗಳ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಾಗಿದ್ದು, ಮೌಲ್ಯವರ್ಧನೆಯನ್ನು ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಸಾರಬೇಕಿದೆ ಎಂದರು.