ಶಿವಮೊಗ್ಗ,ಜೂ.8: ನಮ್ಮ ದೇಶದಲ್ಲಿ 1960ಕ್ಕೂ ಮುನ್ನ ಸಾವಯವ ಕೃಷಿಯೇ ಪ್ರಧಾನವಾಗಿದ್ದು, ರಾಸಾಯನಿಕ ಗೊಬ್ಬರ, ಬೀಜ ಇರಲಿಲ್ಲ. ಸಾವಯವ ಕೃಷಿಯಿಂದ ಉತ್ತಮ ಆರೋಗ್ಯ ಲಭ್ಯ ಎಂಬ ಪರಿಜ್ಞಾನ ಇತ್ತು ಎಂದು ಕೆಳದಿಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಗದೀಶ್ ಆರ್.ಸಿ. ಹೇಳಿದ್ದಾರೆ.
ಅವರು ಶನಿವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ, ಸಾವಯವ ಕೃಷಿ ಸಂಶೋಧನ ಕೇಂದ್ರ, ಸಹಜ ಸಮೃದ್ಧ ವತಿಯಿಂದ ಹಮ್ಮಿಕೊಂಡಿದ್ದ ದೇಸೀ ಬೀಜೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಆಹಾರದ ಬೇಡಿಕೆ ಹೆಚ್ಚಾದಂತೆ ಹೆಚ್ಚಿನ ಬೆಳೆಗಾಗಿ ಪ್ರಗತಿಪರ ಧೋರಣೆಗಳ ಅನುಷ್ಠಾನ ಬಂತು. ಬೇಸಾಯ ಪದ್ಧತಿ ಮತ್ತು ಜನರ ಮನಸ್ಥಿತಿ ಬದಲಾದಂತೆ ರಾಸಾಯನಿಕ ಬಳಕೆಗಳು ಹೆಚ್ಚಾಯಿತು. ಹಿಂದೆ ನಮ್ಮಲ್ಲೇ ಲಭ್ಯವಿರುವ ಸಾವಯವ ಪದಾರ್ಥ ಬಳಸಿ ಕೃಷಿ ಮಾಡುತ್ತಿದ್ದರು. ಮನೆಯಲ್ಲಿ ಎಷ್ಟು ಜೊತೆ ಎತ್ತುಗಳಿವೆ ಎಂಬುವುದರ ಮೇಲೆ ಅವರ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು. ಆ ಮನೆಗೆ ಹೆಣ್ಣು ಕೊಡುತ್ತಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಈಗ ಯಾಂತ್ರಿಕ ಕೃಷಿ ಮತ್ತು ರಾಸಾಯನಿಕ ಕೃಷಿಗೆ ಹೆಚ್ಚಿನ ಬೆಳೆಯ ಆಸೆಗೆ ರೈತರು ಮಾರುಹೋಗಿದ್ದಾರೆ. ಸಾವಯವ ಕೃಷಿಗೆ ಗೋ ಸಾಕಣೆಯೇ ಪೂರಕ, ಒಂದು ಇಂಚು ಮಣ್ಣಿನಲ್ಲಿ ಕೋಟ್ಯಾಂತರ ಜೀವ ರಾಶಿಗಳಿವೆ. ಅನೇಕ ರಾಸಾಯನಿಕ ಕ್ರಿಯೆಗಳು ಸಾವಯವ ಕೃಷಿಯಿಂದ ಆ ಮಣ್ಣಿನಲ್ಲಿ ನಡೆಯುತ್ತಿತ್ತು. ಆದರೆ ಈಗ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತ್ತೆ ನಾಶವಾಗಿದೆ. ಆರೋಗ್ಯಕಕ್ಕೆ ಪೂರಕವಾದ ಆಹಾರ ಬೆಳೆಯುತ್ತಿಲ್ಲ. ಗೋ ಆಧಾರಿತ ಕೃಷಿ ಕಡಿಮೆಯಾಗಿದೆ. ಹಿಂದೆ ಪ್ರತಿಯೊಂದು ಮನೆಯಲ್ಲೂ ತಿಪ್ಪೆ ಹಾಕುವ ಜಾಗವಿತ್ತು. ಪ್ರತಿ ಮನೆಯಲ್ಲೂ ಕನಿಷ್ಠ 8 ಕೆ.ಜಿ. ಯಷ್ಟು ಜೈವಿಕ ಗೊಬ್ಬರ ಉತ್ಪತ್ತಿಯಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಉತ್ಪತ್ತಿಯಾಗುವ ಗೊಬ್ಬರ 16ಲಕ್ಷ ಟನ್ ಇದ್ದು, ಇಡೀ ಜಿಲ್ಲೆಗೆ ಅದು ಸಾವಯವ ಕೃಷಿಗೆ ಪೂರಕವಾಗುತ್ತದೆ. ಆದರೆ ಅದನ್ನು ಸದುಪಯೋಗ ಮಾಡುವ ವ್ಯವಸ್ಥೆ ಇಲ್ಲ. ಯುವಕರು ಮುಂದೆ ಬಂದರೆ ನಮ್ಮ ವಿಶ್ವವಿದ್ಯಾನಿಲಯದಿಂದ ಉಚಿತ ಸಲಹೆ ಸೂಚನೆ ನೀಡುವುದಾಗಿ ಹೇಳಿದರು.
ಸಾವಯವ ಕೃಷಿಗೂ ನೈಸರ್ಗಿಕ ಕೃಷಿಯ ನಡುವೆ ವ್ಯತ್ಯಾಸವಿದೆ.. ಸಾವಯವ ಕೃಷಿ ದೇಸೀ ಬೀಜವನ್ನು ಅವಲಂಬಿಸುತ್ತಿದ್ದು, ಬೀಜದ ಉತ್ಪಾದನೆಗಳ ಕೊರತೆ ಇದೆ. ರೈತರು ಸಾವಯವ ಬೀಜವನ್ನು ಉತ್ಪಾದಿಸಿ ನಮ್ಮ ವಿವಿಗೆ ನೀಡಬಹುದು, ಅದನ್ನು ಸಂರಕ್ಷಣೆ ಮಾಡುವ ವ್ಯವಸ್ಥೆ ಕೂಡ ನಮ್ಮಲ್ಲಿದೆ. ಪ್ರಮುಖ ಬೆಳೆಗಳಾದ ಭತ್ತ, ರಾಗಿ, ಜೋಳ, ಗೋದಿ, ಆಲೂಗಡ್ಡೆ ಇದಕ್ಕೆ ರಾಸಾಯನಿಕಗಳ ಬಳಕೆ ಅಗತ್ಯವಿದೆ. ನಮ್ಮ ವಿವಿಯಲ್ಲೇ 350ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಉತ್ಪಾದಿಸಲಾಗುತ್ತಿದೆ. ದೇಸೀಯ ತಳಿಗಳ ಸಂರಕ್ಷಣೆ ಆಗಬೇಕಾಗಿದೆ ಎಂದರು.
ದೇಸೀ ತಳಿಗಳಲ್ಲಿ ಪೋಷಕಾಂಶ ಹೆಚ್ಚಾಗಿರುತ್ತದೆ. ಅನೇಕ ಸೊಪ್ಪುಗಳ ತಳಿಗಳ ಅಗತ್ಯವಿದೆ. ಬೇಡಿಕೆಯೂ ಇದೆ. ಇದನ್ನು ರೈತರು ಹೆಚ್ಚಾಗಿ ಬೆಳೆಸಿ ಲಾಭ ಮಾಡಿಕೊಳ್ಳಬಹುದು. ನಮ್ಮ ವಿವಿ ವತಿಯಿಂದ ಎಲ್ಲಾ ನೆರವು ನೀಡಲು ನಾವು ಸಿದ್ದವಿದ್ದೇವೆ ಎಂದರು.
ನಮ್ಮ ಜಿಲ್ಲೆಯೊಂದರಲ್ಲೇ 16ಲಕ್ಷ ಟನ್ ಅಡಿಕೆ ಸಿಪ್ಪೆ ಸಿಗುತ್ತಿದ್ದು, 8 ಲಕ್ಷ ಟನ್ ಸಿಪ್ಪೆಯನ್ನು ಸುಟ್ಟುಹಾಕುತ್ತೇವೆ. ಇದರಿಂದ ಉತ್ಕøಷ್ಟ ಗೊಬ್ಬರ ತಯರಾಗುತ್ತದೆ. ಮತ್ತು ಅವರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ. ಸಾವಯವ ಕೃಷಿಯನ್ನು ಉಳಿಸಿ ಬೆಳೆಸಿ ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿಯವರು ಮಣ್ಣಿನಲ್ಲಿ ಬೀಜ ಹಾಕಿ ಉದ್ಘಾಟಿಸಿದ್ದರು. ಸಹಜಸಮೃದ್ಧ ನಿರ್ದೇಶಕರಾದ ಜಿ.ಕೃಷ್ಣಪ್ರಸಾದ್, ಸಾವಯವ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಎಸ್.ಪ್ರದೀಪ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ಐಕಾಂತಿಕ ಸಂಸ್ಥೆಯ ರಾಘವ, ಸಾವಯವ ಕೃಷಿಕರಾದ ನಂದೀಶ್ ಚುರ್ಚಿಗುಂಡಿ, ಶಂಕರ್ ಎಂ.ದೇವೇಂದ್ರಪ್ಪ, ಕುಮಾರ್‍ನಾಯ್ಕ್, ದಿನೇಶ್ ಹೊಸನಗರ, ಸಂತೋಷ್ ಮೊದಲಾದವರು ಇದ್ದರು.