ಯೋಗಾಭ್ಯಾಸದಿಂದ ಅಂತಃಶಕ್ತಿ ಹಾಗೂ ಆತ್ಮಸ್ಥೈರ್ಯ ವೃದ್ಧಿ

ಜಡೆ ಮಹಾ ಸಂಸ್ಥಾನ ಮಠದ ಶ್ರೀ ಡಾ.ಮಹಾಂತ ಸ್ವಾಮೀಜಿ ಅಭಿಪ್ರಾಯ

ಶಿವಮೊಗ್ಗ : ಯೋಗ, ಧ್ಯಾನ ಹಾಗೂ ಪ್ರಾಣಾಯಾಮದಿಂದ ದೇಹದಲ್ಲಿ ಅಂತಃಶಕ್ತಿ ಹಾಗೂ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ಜಡೆ ಮಹಾ ಸಂಸ್ಥಾನ ಮಠದ ಶ್ರೀ ಡಾ.ಮಹಾಂತ ಸ್ವಾಮಿಗಳು ಹೇಳಿದರು.

ಅಶ್ವತ್ಥ ನಗರದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಶಿವಶಕ್ತಿ ಯೋಗ ಕೇಂದ್ರ ಸಹಕಾರದೊಂದಿಗೆ ಜೆಸಿಐ ಶಿವಮೊಗ್ಗ ವಿವೇಕ್‌ ಸಂಸ್ಥೆಯು ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ನಿರಂತರ ಯೋಗ ತರಬೇತಿಗೆ ಸೂರ್ಯ ದೇವನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಶರೀರವು ನಮ್ಮ ನಿಯಂತ್ರಣದಲ್ಲಿರುತ್ತದೆ, ನಾವು ಹೇಳಿದಂತೆ ಶರೀರ ಕೇಳಬೇಕೆ ಹೊರತು ಶರೀರ ಹೇಳಿದಂತೆ ನಾವು ಕೇಳುವಂತಿರಬಾರದು, ನಿತ್ಯ ಯೋಗದಲ್ಲಿ ತೊಡಗಿಸಿಕೊಂಡರೆ ಆಯಸ್ಸು ಕಳೆದದ್ದೇ ಗೊತ್ತಾಗುವುದಿಲ್ಲ, ಆರೋಗ್ಯವೂ ಸದೃಢವಾಗಿರುತ್ತದೆ, ಹಾಗಾಗಿ ಪ್ರತಿಯೊಬ್ಬರೂ ದಿನವೂ ಒಂದು ತಾಸು ಯೋಗಾಭ್ಯಾಸಕ್ಕಾಗಿ ಮೀಸಲಿಡುವಂತೆ ಸಲಹೆ ನೀಡಿದರು.

ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಸದೃಢ ಆರೋಗ್ಯಕ್ಕೆ ಶುದ್ಧ ಗಾಳಿ, ನೀರು ಹಾಗೂ ಗ್ಲುಕೋಸ್‌ ಬಹಳ ಮುಖ್ಯ.ನಾವು ಸೇವಿಸುವ ನೀರು,ಗಾಳಿ ಹಾಗೂ ಆಹಾರ ಕಲುಷಿತವಾಗಿದೆ,ಇದು ಸಹಜವಾಗಿಯೇ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಹಾಗಾಗಿ ಪರಿಸರ ಸಂಕ್ಷಣೆಯೂ ಎಲ್ಲರ ಮೊದಲಾದ್ಯತೆ ಆಗಬೇಕು ಎಂದು ಹೇಳಿದರು.

ಭಗವಂತನ ಸೃಷ್ಟಿಯೇ ಒಂದು ಅದ್ಭುತ, ನಮಗೆ ಭಗವಂತ ಎರಡು ಶ್ವಾಸಕೋಶವನ್ನು ಕರುಣಿಸಿದ್ದಾನೆ, ಇವುಗಳ ಆರೋಗ್ಯವನ್ನು ಕಾಪಾಡಿಕೊಂಡರೆ ದೀರ್ಘಕಾಲ ಜೀವಿಸಬಹುದು, ಯಾಕೆಂದರೆ 3 ಮಿಲಿಯನ್‌ನಷ್ಟು ಜೀವಕೋಶಗಳಿರುವ ಶ್ವಾಸಕೋಶಕ್ಕೆ 150 ವರ್ಷಗಳಷ್ಟು ಬದುಕುವ ಸಾಮರ್ಥ್ಯವಿದೆ, ಪ್ರತಿನಿತ್ಯವೂ ತಪ್ಪದೇ ದೀರ್ಘ ಉಸಿರಾಟ ಮತ್ತು ಯೋಗ, ಧ್ಯಾನ, ಪ್ರಾಣಾಯಾಮವನ್ನು ರೂಢಿಸಿಕೊಂಡರೆ ಶ್ವಾಸಕೋಶಕ್ಕೆ 200 ವರ್ಷ ಸದೃಡವಾಗಿರುವ ಶಕ್ತಿ ಹೆಚ್ಚುತ್ತದೆ ಎಂದ ಅವರು, ತರಕಾರಿ, ಸೊಪ್ಪು ಹೆಚ್ಚು ಬಳಸುವ ಜೊತೆಗೆ ಹಿತ-ಮಿತ ಆಹಾರ ರೂಢಿಸಿಕೊಂಡರೆ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಸಾಧ್ಯ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯಇ.ವಿಶ್ವಾಸ್‌ ಮಾತನಾಡಿ, ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಯೋಗ ಭವನ ನಿರ್ಮಾಣದ ಕನಸು ಎಲ್ಲರ ಸಹಕಾರದಿಂದೊಂದಿಗೆ ನನಸಾಗಿದೆ, ಶಿವಮೊಗ್ಗದಲ್ಲೇ ವ್ಯವಸ್ಥಿತ ಯೋಗ ಮಂದಿರ ಇದಾಗಿದೆ, ಪ್ರತಿಯೊಬ್ಬರೂ ಇದರ ಲಾಭವನ್ನು ಪಡೆದುಕೊಳ್ಳಬೇಕು. ಕೊರೊನಾ ಅಪ್ಪಳಿಸಿದಾಗ ಅನೇಕರನ್ನು ನಾವು ಕಳೆದುಕೊಂಡೆವು, ಆ ವೇಳೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದವರು ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಎದುರಿಸಲಿಲ್ಲ, ಹಾಗಾಗಿ ನಾವು ಎಷ್ಟೇ ಸಂಪಾದನೆ ಮಾಡಿದರೂ ಆರೋಗ್ಯವೇ ಇಲ್ಲವೆಂದಾಗ ಎಲ್ಲವೂ ಶೂನ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿತ್ಯವೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ದೇಹ ಮತ್ತು ಮನಸರ‍ಸು ಆರೋಗ್ಯಕರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಯೋಗಾಚಾರ್ಯ ಚಿ.ಸಿ.ರುದ್ರಾದ್ಯರು, ಡಾ.ಎನ್‌.ಎಲ್‌.ನಾಯಕ್‌, ಜೆಸಿಐ ವಿವೇಕ್‌ ಶಿವಮೊಗ್ಗ ಅಧ್ಯಕ್ಷ ಸಂಜಯ್‌, ಶ್ರೀ ಬಸವೇಶ್ವರ ವೀರಶೈವ ಸಮಾಜ ಅಧ್ಯಕ್ಷರಾದ ಎಸ್‌.ಎಸ್‌.ಜ್ಯೋತಿಪ್ರಕಾಶ್‌, ಮುಖಂಡರಾದ ಎನ್‌.ಜೆ.ರಾಜಶೇಖರ್‌, ಡಾ.ಪರಿಸರ ನಾಗರಾಜ್‌,ಉದ್ಯಮಿ ಹರ್ಷ ಕಾಮತ್, ಕಾಟನ್‌ ಜಗದೀಶ್‌, ಸತೀಶ್‌ ಹಾಗೂ ಅಶ್ವತ್ಥ ನಗರ, ಎಲ್ ಬಿಎಸ್ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.

error: Content is protected !!