ಶಿವಮೊಗ್ಗ, ಮಾರ್ಚ್ 27 ಬರಗಾಲದ ಹಿನ್ನೆಲೆ ಮಾನವೀಯತೆ ದೃಷಿಯಿಂದ ರೈತರಿಗೆ ಎಸ್‍ಆರ್ ದರದಂತೆ ಕೊಳವೆ ಬಾವಿಗಳನ್ನು ಕೊರೆದುಕೊಡಬೇಕು. ಹೆಚ್ಚಿನ ದರಗಳನ್ನು ವಿಧಿಸಿ ರೈತರಿಂದ ಹಣ ಪಡೆಯುವ ಕುರಿತು ದೂರುಗಳು ಬಂದಲ್ಲಿ, ಅಂತಹ ಕೊಳವೆಬಾವಿ ವಾಹನ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.
ಸರ್ಕಾರದ ಇಲಾಖೆಗಳ ವಿವಿಧ ಯೋಜನೆಗಳಡಿ ಹಾಗೂ ಖಾಸಗಿ ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳ ಕೊರೆಯುವ ಕುರಿತು ಜಿಲ್ಲೆಯ ರಿಗ್ ವಾಹನ ಮಾಲೀಕರು ಹಾಗೂ ಏಜೆನ್ಸಿಯವರೊಂದಿಗೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಾ.26 ರಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಇಲಾಖೆಗಳಡಿ ವಿಶೇಷವಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯಡಿ ವಿವಿಧ ಯೊಜನೆಗಳಡಿಯಲ್ಲಿ ಕೊರೆಯುವ ಕೊಳವೆ ಬಾವಿಗಳ ಕಾಮಗಾರಿಗಳನ್ನು ಅನುμÁ್ಟನಗೊಳಿಸಲು ರಿಗ್/ಕೊಳವೆಬಾವಿ ಮಾಲೀಕರು ಕರಾರು ಮಾಡಿಕೊಂಡಿದ್ದು, ಸೂಕ್ತ ಸಮಯದಲ್ಲಿ ಡ್ರಿಲ್ಲಿಂಗ್ ಗಳನ್ನು ಮಾಡದೇ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.
ಪ್ರಸಕ್ತ ಸಾಲಿನಲ್ಲಿ ಬರ ಪರಿಸ್ಥಿತಿ ಇರುವುದರಿಂದ ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ಅತ್ಯಂತ ಆದ್ಯತೆಯ ಹಾಗೂ ತುರ್ತು ಕೆಲಸವಾಗಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲಾ ಕೊಳವೆ ಬಾವಿಗಳನ್ನು ಇನ್ನೆರಡು ದಿನಗಳಲ್ಲಿ ಕೊರೆದು ಪೂರ್ಣಗೊಳಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯತನ ತೋರಿದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಹಾಗೂ ಸೂಕ್ತ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಿದರು.
ಇದಲ್ಲದೇ, ಪ್ರಸಕ್ತ ಸಾಲಿನಲ್ಲಿ ಬರಗಾಲ ಇರುವುದರಿಂದ ರೈತರಿಗೆ ಮಾನವೀಯತೆ ದೃಷಿಯಿಂದ ಅನುಮೋದಿತ ದರ ಪಟ್ಟಿಗಳನ್ವಯ ಕೊಳವೆ ಬಾವಿಗಳನ್ನು ಕೊರೆಯಬೇಕು. ರೈತರಿಂದ ಹೆಚ್ಚಿನ ದರ ಪಡೆದಿರುವ ಕುರಿತು ಹಲವು ದೂರುಗಳು ಬಂದಿದ್ದು, ಪುನಃ ಹೆಚ್ಚಿನ ದರಗಳನ್ನು ರೈತರಿಂದ ಪಡೆಯುವ ಕುರಿತು ದೂರುಗಳು ಬಂದಲ್ಲಿ, ಅಂತಹ ರಿಗ್ ಮಾಲೀಕರು/ಏಜೆನ್ಸಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ವಹಿಸಲಾಗುವುದು. ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನಿಯಮಾನುಸಾರ ರಿಗ್ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುದು ಎಂದರು.
ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಮಧ್ಯವರ್ತಿಗಳ ಸಲಹೆ ಪಡೆಯದೇ ಹಾಗೂ ಮಧ್ಯವರ್ತಿಗಳ ಮುಖಾಂತರ ವ್ಯವಹರಿಸದೇ, ನೇರವಾಗಿ ರಿಗ್ ಮಾಲೀಕರ ಜೊತೆ ವ್ಯವಹರಿಸಿದಲ್ಲಿ ಅನುಮೋದಿತ ಬೆಲೆಯನ್ವಯ ತಮ್ಮ ಕೆಲಸವನ್ನು ಮಾಡಿಕೊಳ್ಳಬಹುದು ಎಂದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ತೀವ್ರತೆಯನ್ನು ಅರಿತುಕೊಂಡು ಕುಡಿಯುವ ನೀರು ಹಾಗೂ ರೈತರ ಜಮೀನಿನಲ್ಲಿ ಕೊಳವೆ ಬಾವಿ ಅಳವಡಿಸುವ ಬಗ್ಗೆ ಹೆಚ್ಚಿನ ಜವಾಬ್ದಾರಿ ಹಾಗೂ ಮಾನವೀಯತೆಯಿಂದ ಹಾಗೂ ಇಲಾಖಾ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಕೊಳವೆಬಾವಿ ಮಾಲೀಕರು/ಏಜೆನ್ಸಿನಗಳು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿ ಬರಪರಿಸ್ಥಿತಿಯನ್ನು ನಿರ್ವಹಿಸಲು ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ರಿಗ್ ಮಾಲೀಕರು /ಏಜೆನ್ಸಿಗಳು ಕೊಳವೆ ಬಾವಿ ಕೊರೆಯಲು ಅಸಮಂಜಸ ದರಗಳನ್ನು ರೈತರಿಗೆ ಬೇಡಿಕೆ ಇಟ್ಟಲ್ಲಿ ಹಾಗೂ ರೈತರಿಗೆ ಕಿರುಕುಳ ನೀಡಿದಲ್ಲಿ, ಅಂಥಹ ರೈತರು/ಬಾಧಿತರು ದೂರುಗಳನ್ನು ಈ ಸಮಿತಿಗೆ ಸಲ್ಲಿಸಲು ಅವಕಾಶ ಇರುತ್ತದೆ. ಸಮಿತಿಯು ಇಂತಹ ದೂರುಗಳನ್ನು ಪರಿಶೀಲಿಸಿ 3 ದಿನಗಳಲ್ಲಿ ಇತ್ಯರ್ಥಪಡಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಕೊಳವೆಬಾವಿ ಮಾಲೀಕರು ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ರನ್ವಯ ಫಾರ್ಮ್ -6 ರಲ್ಲಿ ರಿಗ್ ಯಂತ್ರಗಳ/ಘಟಕಗಳ ನೋಂದಣಿ ಮಾಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಿ ಫಾರ್ಮ್-7ಎ ರಲ್ಲಿ ಏಜೆನ್ಸಿಯ ನೋಂದಣಿಯನ್ನು ಕಡ್ಡಾಯವಾಗಿ ಪಡೆದು ನಂತರ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಅವರು ಈ ಕುರಿತು ನಮೂನೆಗಳನ್ನು ಹಿರಿಯ ಭೂ ವಿಜ್ಞಾನಿಗಳು, ಜಿಲ್ಲಾ ಅಂತರ್ಜಲ ಕಛೇರಿ, ಶಿವಮೊಗ್ಗರವರ ಕಚೇರಿಯನ್ನು ಸಂಪರ್ಕಿಸಬಹುದೆಂದರು.
ರಿಗ್ ಮಾಲೀಕರು ತಾವು ಅನುμÁ್ಟನಗೊಳಿಸುತ್ತಿರುವ ಕೊಳವೆ ಬಾವಿಗಳ ವಿವರಗಳನ್ನು ಪ್ರತಿ ಮಾಹೆ ನಿಗದಿತ ನಮೂನೆಗಳಲ್ಲಿ ಹಿರಿಯ ಭೂ ವಿಜ್ಞಾನಿಗಳು, ಜಿಲ್ಲಾ ಅಂತರ್ಜಲ ಕಚೇರಿ, ಶಿವಮೊಗ್ಗ ಇವರಿಗೆ ಸಲ್ಲಿಸಲು ಸೂಚಿಸಿದರು.
ವಿಫಲವಾದ ಕೊಳವೆ ಬಾವಿಗಳ ಕೇಸಿಂಗ್ ಪೈಪ್ ತೆಗೆದ ನಂತರ ಅದೇ ಸಮಯದಲ್ಲಿ ಸಂಪೂರ್ಣವಾಗಿ ಕೊಳವೆ ಬಾವಿಯನ್ನು ಕಡ್ಡಾಯವಾಗಿ ಸೂಕ್ತ ಕ್ರಮವಹಿಸಿ ಮುಚ್ಚಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಆರ್‍ಡಬ್ಲ್ಯುಎಸ್ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಪ್ರಸಾದ್, ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ನಿರ್ಮಲಾ ನಾದನ್ ಇತರೆ ಇಲಾಖೆ ಅಧಿಕಾರಿಗಳು, ಕೊಳವೆಬಾವಿ/ರಿಗ್ ಮಾಲೀಕರು ಹಾಜರಿದ್ದರು.