ಶಿವಮೊಗ್ಗ, ಸೆ .21 ಇಲಾಖೆಗಳಲ್ಲಿ ಯಾವುದೇ ಅನುದಾನ ತಪ್ಪಿ ಹೋಗದಂತೆ ನಿಗದಿತ ಅವಧಿಯೊಳಗೆ ಶೇ.100 ಪ್ರಗತಿ ಸಾಧಿಸುವ ಮೂಲಕ ಅಧಿಕಾರಿಗಳು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಫಲಾನುಭವಿ ಪ್ರಧಾನವಾದ ಕಾರ್ಯಕ್ರಮಗಳನ್ನು ಬದ್ದತೆಯಿಂದ ಮಾಡಬೇಕು, ಎಲ್ಲ ಇಲಾಖೆಯ ಅಧಿಕಾರಿಗಳು ಕ್ರಿಯಾತ್ಮಕವಾಗಿ, ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಯಾವುದೇ ಕಾರ್ಯಕ್ರಮಗಳ ಅನುದಾನ ತಪ್ಪಿ ಹೋಗದಂತೆ, ವಿಳಂಬರಹಿತವಾಗಿ ನಿಗದಿತ ಅವಧಿಯೊಳಗೆ ಅನುದಾನದ ಸದ್ಬಳಕೆ ಆಗಬೇಕು. ಎಸ್ಸಿಪಿ/ಟಿಎಸ್ಪಿ ಅನುದಾನ ಶೇ.100 ಬಳಕೆ ಆಗಬೇಕು. ಜಿಲ್ಲಾಡಳಿತ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳು ಸಮರ್ಪಕವಾಗಿ ಅನುದಾನ ಬಳಕೆ, ಫಲಾನುಭವಿಗಳ ಆಯ್ಕೆ ಮಾಡಬೇಕು. ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಬೇಕು. ಸಿವಿಲ್ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾAತರ ಕಲ್ಯಾಣ ಇಲಾಖೆಗಳು ವಿವಿಧ ಕಾರ್ಯಕ್ರಮಗಳು ಮತ್ತು ಅಭಿವೃದ್ದಿ ಕೆಲಸಗಳನ್ನು ಇನ್ನೂ ಪರಿಣಾಮಗೊಳಿಸಬೇಕು. ಎಲ್ಲ ಇಲಾಖೆಗಳು ಸಮಸ್ಯೆಗಳನ್ನು ಕಂಡು ಹಿಡಿಸು ಸುಧಾರಣೆ ಕಡೆ ಗಮನ ಹರಿಸಿ, ನಿಯಮಾನುಸಾರ ಕ್ರಮ ವಹಿಸಬೇಕು. ಶೇ.100 ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ಮಾತನಾಡಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಳೆ ರೋಗ ಕಂಡು ಬಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಳೆ ರೋಗ ಪತ್ತೆಯಾಗಿದೆ. ಈ ಕುರಿತು ಪರಿಹಾರ ಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು ಅವರು ಸರ್ಕಾರದ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದರು.
ಡಿಡಿಪಿಐ ಮಂಜುನಾಥ್ ಮಾತನಾಡಿ, ಸೊರಬ, ಶಿಕಾರಿಪುರ ಮತ್ತು ತೀರ್ಥಹಳ್ಳಿಯಲ್ಲಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಬೇಡಿಕೆ ಇದೆ. ನಿಯೋಜನೆ ಶಿಕ್ಷಕರಿಗೆ ಸಂಬAಧಿಸಿದ ಸಮಸ್ಯೆಗಳು ಇವೆ ಎಂದರು.
ಉಸ್ತುವಾರಿ ಕಾರ್ಯದರ್ಶಿಗಳು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶಾಲೆ ಬಿಟ್ಟ ಮಕ್ಕಳ ಸರ್ವೇ ಆಗಬೇಕು. ತಾಲ್ಲೂಕು ಹಂತದಲ್ಲಿ ಸರ್ವೇ ನಡೆಸಿ ಮಕ್ಕಳನ್ನು ಶಾಲೆಗೆ ಕರೆ ತರಲು ಕ್ರಮ ಕೈಗೊಳ್ಳಬೇಕು ಎಂದರು.
ಡಿಹೆಚ್ಓ ಡಾ.ನಟರಾಜ್ ಮಾತನಾಡಿ, ಒಟ್ಟು 600 ಡೆಂಗ್ಯು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜುಲೈ ಮಾಹೆಯಲ್ಲಿ 167, ಆಗಸ್ಟ್ 115 ಮತ್ತು ಸೆಪ್ಟೆಂಬರ್ಲ್ಲಿ 35 ಪ್ರಕರಣ ದಾಖಲಾಗಿದ್ದು ಇದೀಗ ಪ್ರಕರಣ ಕಡಿಮೆಯಾಗಿದೆ. ಬೆಳಗಿನ ಜಾವ ಸರ್ವೇಕ್ಷಣೆ, ಇತರೆ ನಿಯಂತ್ರಣ ಕ್ರಮಗಳಿಂದ ಡೆಂಗ್ಯು ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. ಆದರೆ ಸೊರಬ ಮತ್ತು ಹೊಸನಗರದಲ್ಲಿ ತಜ್ಞ ವೈದ್ಯರ ಕೊರತೆ ಎಂದರು.
ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಆಗುತ್ತಿದ್ದು ಜುಲೈ ವರೆಗೆ ಮೊಟ್ಟೆ ಹಣಪಾವತಿ ಆಗಿದೆ. ರೂ.2.05 ಕೋಟಿ ಹಾಲಿನ ಪೌಡರ್ ಹಣ ಬಾಕಿ ಇದೆ ಎಂದು ಅಕ್ಷರ ದಾಸೋಹ ಅಧಿಕಾರಿಗಳು ತಿಳಿಸಿದರು.
ಕ್ಷೀರ ಭಾಗ್ಯ ಯೋಜನೆಯಡಿ ಸಕ್ಕರೆ ಸರಬರಾಜು ಆಗಿಲ್ಲ. ರೂ.40 ಕೆ.ಜಿ ಗೆ ನಿಗದಿಯಾಗಿದ್ದು ಈ ನಿಗದಿತ ಹಣಕ್ಕೆ ಸಕ್ಕರೆ ಲಭ್ಯವಾಗದ ಕಾರಣ ಸರಬರಾಜು ಸಾಧ್ಯವಾಗಿಲ್ಲ. ರೂ. 50 ನಿಗದಿ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಜಿ.ಪಂ ಸಿಇಓ ಎನ್.ಹೇಮಂತ್ ತಿಳಿಸಿದರು.
ಆಹಾರ ಇಲಾಖೆ ಉಪನಿರ್ದೇಶಕ ಅವಿನ್ ಮಾತನಾಡಿ, 3.80 ಲಕ್ಷ ಬಿಪಿಲ್ ಕಾರ್ಡುದಾರರು ಇದ್ದು, ಈ ಪೈಕಿ 6 ತಿಂಗಳು ಸತತವಾಗಿ ಪಡಿತರ ಪಡೆಯದ 8000 ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಇ-ಜನ್ಮ್ ಪೋರ್ಟಲ್ ಮಾಹಿತಿ ಮೇರೆಗೆ ಮರಣ ಹೊಂದಿದ 5000 ಕಾರ್ಡುದಾರರ ಹೆಸರನ್ನು ತೆಗೆದುಹಾಕಲಾಗಿದೆ. ಇನ್ನೂ ರದ್ದುಪಡಿಸುವ 1500 ಜನರ ಪಟ್ಟಿ ಇದೆ. 58 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಪಡಿಸಿ ದಂಡ ವಿಧಿಸಲಾಗಿದೆ. 2395 ಐಟಿ ಪಾವತಿದಾರರ ಬಿಪಿಎಲ್ ನ್ನು ಎಪಿಎಲ್ಗೆ ಪರಿವರ್ತನೆ ಮಾಡಲಾಗಿದೆ. ಕುಟುಂಬದ ವಾರ್ಷಿಕ ವರಮಾನ 1.20 ಲಕ್ಷ ಇರುವ 53,342 ಕಾರ್ಡುಗಳು ಇವೆ. ಇವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕದೆ. ಹೊಸದಾಗಿ ಪಡಿತರ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದ 4963 ರಲ್ಲಿ 2489 ನೀಡಲಾಗಿದೆ. 980 ತಿರಕಸ್ಕರಿಸಲಾಗಿದ್ದು ಉಳಿದವನ್ನು ಮುಂದೆ ಪೋರ್ಟಲ್ ಓಪನ್ ಆದಾಗ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಮಾತನಾಡಿ, ಕಳೆದ ವರ್ಷದ ಅನುದಾನ ಶೇ.50 ಮಾತ್ರ ಬಿಡುಗಡೆಯಾಗಿದೆ. ಶಿಕಾರಿಪುರ ಮತ್ತು ಆನವಟ್ಟಿಯಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಜಾಗದ ಸಮಸ್ಯೆ ಇದೆ. ಆನವಟ್ಟಿಯಲ್ಲಿ ಸಮಸ್ಯೆ ಪರಿಹಾರ ಹಂತದಲ್ಲಿದ್ದು, ಶಿಕಾರಿಪುರದಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಅಮೃತ್ ಯೋಜನೆ ಫೇಸ್ 01 ಮುಗಿದಿದ್ದು ಫೇಸ್ 02 ಆರಂಭವಾಗಬೇಕಿದೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಅಧಿಕಾರಿ ದಿನೇಶ್ ಮಾತನಾಡಿ, ಶೇ. 42.8 ಆದಾಯ ಶಕ್ತಿ ಯೋಜನೆಯಿಂದ ಬರುತ್ತಿದ್ದು, ಶೇ.60.5 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಯೋಜನೆ ಜಾರಿಯಾದಾಗಿನಿಂದ ಹೆಚ್ಚುವರಿ ಬಸ್ಗಳು ಮತ್ತು ರೂಟ್ಗಳ ಬೇಡಿಕೆ ಹೆಚ್ಚಿದೆ. 365 ಬಸ್ಗಳು ಓಡಾಡುತ್ತಿದ್ದು, 215 ರೂಟ್ ಬೇಡಿಕೆ ಇದೆ ಎಂದರು.
ಗೃಹಜ್ಯೋತಿ ಯೋಜನೆಯಡಿ 19 ಕೋಟಿ ಸಬ್ಸಿಡಿ ಮೆಸ್ಕಾಂ ಗೆ ಬರುತ್ತಿದೆ. ಸರ್ಕಾರಿ ಇಲಾಖೆಗಳಿಂದ ಸಾಕಷ್ಟು ಪ್ರಮಾಣದ ಬಿಲ್ ಬಾಕಿ ಇದೆ. ಗ್ರಾ.ಪಂ ಮತ್ತು ಬೀದಿ ದೀಪ, ನೀರಿನ ಸರಬರಾಜಿನಿಂದ ರೂ.52 ಕೋಟಿ ಬಿಲ್ ಬಾಕಿ ಇದೆ. ಎಂಪಿಎA ನಿಂದ ರೂ.300 ಕೋಟಿ ಬಾಕಿ ಇದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಣ್ಣ ನೀರಾವರಿ ಇಲಾಖೆಗೆ ಪದೇ ಪದೇ ಕರೆಂಟ್ ಸರಬರಾಜು ನಿಲ್ಲಿಸಬಾರದು. ರೈತರಿಗೆ ಅನಾನುಕೂಲವಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಮೆಸ್ಕಾಂ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕೆಂದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ ಮಾಹೆವರೆಗೆ 2836 ಫಲಾನುಭವಿಗಳಿಗೆ ರೂ.84,72,000 ಹಣ ಪಾವತಿಯಾಗಿದೆ ಎಂದು ಉದ್ಯೋಗಾಧಿಕಾರಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಅಧ್ಯಕ್ಷರು, ಎಲ್ಲ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ನಿಗದತ ಅವಧಿಯೊಳಗೆ ಅನುದಾನ ಬಳಕೆಯಾಗಬೇಕು. ಗುಣಮಟ್ಟದ ಕಾಮಗಾರಿಗಳು ಆಗಬೇಕು. ಸ್ಥಳೀಯ ಸಂಸ್ಥೆಗಳು, ಪಂಚಾಯತ್ ರಾಜ್ ವಿಭಾಗ ಸೇರಿದಂತೆ ಎಲ್ಲ ಇಲಾಖೆಗಳು ನಿಗದಿತ ವೇಳೆಯೊಳಗೆ ಗುರಿ ಸಾಧಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಎನ್.ಹೇಮಂತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.