ಮಹಾತ್ಮ ಗಾಂಧೀಜಿಯವರ ಸ್ವಚ್ಚ ಭಾರತ ಕನಸಿನ ಸಾಕಾರಕ್ಕೆ ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಅಭಿಯಾನ ದೇಶದಾದ್ಯಂತ ಮುನ್ನಡೆದಿದೆ. ಮಹಾತ್ಮ ಗಾಂಧೀಜಿಯವರು ಸ್ವಚ್ಚತೆಯಲ್ಲಿ ಮಾತ್ರ ದೇವರು ನೆಲಸಿದ್ದಾರೆ ಎಂದು ಹೇಳುತ್ತಿದ್ದರು. ದೇಶದಾದ್ಯಂತ ಈ ಯೋಜನೆ ವ್ಯವಸ್ಥಿತವಾಗಿ ಮುನ್ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯ ವಿಶಿಷ್ಟ ಯೋಜನೆ ಇದಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಈ ಯೋಜನೆಯನ್ನು ಅರ್ಥ ಪೂರ್ಣವಾಗಿ ಮುನ್ನಡೆಸಲಾಗುತ್ತಿದೆ. ಬಹಳ ಮುಖ್ಯವಾಗಿ ಗ್ರಾ.ಪಂ.ವ್ಯಾಪ್ತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದ್ದು, ಒಣ ಕಸ ಮತ್ತು ಹಸಿಕಸ ಸಂಗ್ರಹಿಸಿಕೊಡುವ ಕುರಿತಂತೆ ಅರಿವು, ಅಭಿಯಾನ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‍ಪೇಟೆ ಗ್ರಾ.ಪಂ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದು, ಊರಿನ ಸ್ವಚ್ಚತೆಯಲ್ಲಿ ಮುಂಚೂಣಿಯಲ್ಲಿದೆ.
ರಿಪ್ಪನ್‍ಪೇಟೆ ಗ್ರಾ.ಪಂ 3 ಎಕರೆ ಜಾಗದಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿದ್ದು, ಕೇಂದ್ರ ಸರ್ಕಾರದ ಸ್ವಚ್ಚ ಭಾರತ್ ಯೋಜನೆಯಲ್ಲಿ 20 ಲಕ್ಷ ಅನುದಾನವನ್ನು ಪಡೆದಿದ್ದು, ಇನ್ನು ಹೆಚ್ಚಿನ ಅನುದಾನಕ್ಕೆ ಸರ್ಕಾರವನ್ನು ಕೋರಿದೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉದ್ಯಾನವನವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿರುವುದಲ್ಲದೇ ಸಂಗ್ರಹಿಸಿದ ಕಸವನ್ನು ಪರಿಷ್ಕರಿಸಿ ಗೊಬ್ಬರ ತಯಾರಿಸಿ ಕೂಡ ಮಾರಾಟ ಮಾಡುತ್ತಿದ್ದಾರೆ. ಗ್ರಾ.ಪಂ.ಗೆ ಇದು ಉತ್ತಮ ಆದಾಯವನ್ನು ತಂದುಕೊಡುತ್ತಿದೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಸ್ಥಳೀಯ ಸರ್ಕಾರ ಹೆಚ್ಚಿನ ಸಹಕಾರ ನೀಡಿದೆ.
ಮಧುಸೂದನ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ರಿಪ್ಪನ್‍ಪೇಟೆ : ಕೇಂದ್ರ ಸರ್ಕಾರದ ಸ್ವಚ್ಚ ಭಾರತ್ ಯೋಜನೆಯಡಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿದ್ದೇವೆ. ಆರಂಭದಲ್ಲಿ 20 ಲಕ್ಷ ಅನುದಾನ ನಮಗೆ ನೀಡಲಾಗಿದ್ದು, ಇದನ್ನು ಇನ್ನು ಸುಸಜ್ಜಿತವಾಗಿ ಕಟ್ಟಲು ನೀಲಿ ನಕ್ಷೆಯನ್ನು ತಯಾರಿಸಲಾಗಿದೆ. 3 ಎಕರೆ ವಿಸ್ತೀರ್ಣದ ಈ ಪ್ರದೇಶದಲ್ಲಿ ಸಾಕಷ್ಟು ಗಿಡಗಳನ್ನು ನೆಟ್ಟಿದ್ದೇವೆ, ಮುಂಬರುವ ದಿನಗಳಲ್ಲಿ ಆದಾಯ ಬರಲಿ ಎನ್ನುವ ಹಿನ್ನೆಲೆಯಲ್ಲಿ ಅಡಿಕೆ, ತೆಂಗು ಸಸಿಗಳನ್ನು ನೆಟ್ಟಿದ್ದೇವೆ. ಇನ್ನೊಂದು ಮಾದರಿ ಉದ್ಯಾನವನ ನಿರ್ಮಿಸಬೇಕು ಎನ್ನುವುದು ನಮ್ಮ ಆಶಯ.
ಸುಧೀಂದ್ರ ಪೂಜಾರಿ, ರಿಪ್ಪನ್‍ಪೇಟೆ. : ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಂಕ್ಷೆ ಚಿಂತನೆಯ ಸ್ವಚ್ಚ ಭಾರತ್ ಯೋಜನೆಯಡಿ ನಮ್ಮ ರಿಪ್ಪನ್‍ಪೇಟೆ ಗ್ರಾಂ.ಪಂ.ವ್ಯಾಪ್ತಿಯಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಜನರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದು, ಸರ್ಕಾರ ಇನ್ನಷ್ಟು ಅನುದಾನ ನೀಡಿದರೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕು ಎನ್ನುವುದು ನಮ್ಮ ಚಿಂತನೆಯಾಗಿದೆ.
ಸಾವಿತ್ರಮ್ಮ, ಕಸ ಸಂಗ್ರಾಹಕರು( ಸಿಬ್ಬಂದಿ): ಕಳೆದ 10 ವರ್ಷಗಳಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರುತ್ತಿದ್ದೇವೆ. ಪಂಚಾಯಿತಿ ವ್ಯಾಪ್ತಿಯ ಜನತೆ ಹಸಿಕಸ ಮತ್ತು ಓಣಕಸ ಬೇರ್ಪಡಿಸಿ ಕೊಡುತ್ತಿರುವುದರಿಂದ ನಮ್ಮ ಕೆಲಸಕ್ಕೆ ಸಹಕಾರಿಯಾಗಿದೆ. ಇದರಿಂದ ಉತ್ತಮ ಗೊಬ್ಬರವು ಲಭ್ಯವಾಗುತ್ತಿದೆ.