ಶಿವಮೊಗ್ಗ, ಡಿಸೆಂಬರ್ 01 : ಮುಂಬರುವ ದಿನಗಳಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರು ಹಾಗೂ ಜಾನುವಾರು ಮೇವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಯೋಜನೆ ರೂಪಿಸಿ, ಕ್ರಮ ಕೈಗೊಳ್ಳಬೇಕೆಂದು ಅಧಿಕಾಗಳಿಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಸೂಚನೆ ನೀಡಿದರು.
ಇಂದು ಸಾಗರದ ಐ ಬಿ ಯಲ್ಲಿ ಏರ್ಪಡಿಸಲಾಗಿದ್ದ ಸಾಗರ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರಗಾಲದ ಹಿನ್ನೆಲೆ ಜನರು ಸಂಕಷ್ಟದಲ್ಲಿದ್ದು ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಬೇಕು. ರಾಜ್ಯ ಸರ್ಕಾರ ಈ ಯೋಜನೆಯಡಿ ಮಾನವ ದಿನಗಳನ್ನು 19 ಕೋಟಿಗೆ ಹೆಚ್ಚಿಸಿದೆ. ಕಾರ್ಮಿಕರಿಗೆ ಕನಿಷ್ಟ 150 ಮಾನವ ದಿನಗಳನ್ನು ನೀಡಲಾಗುವುದು. ಇದರಿಂದ ಅವರಿಗೆ ಆರ್ಥಿಕ ಸಹಕಾರ ದೊರಕಲಿದ್ದು ಅಗತ್ಯ ಇರುವವರಿಗೆ ಕೆಲಸ ನೀಡುವಂತೆ ಸಂಬಂಧಿಸಿದ ಪಿಡಿಓ/ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಗರ ಉಪವಿಭಾಗದ ಎಸಿ ಪಲ್ಲವಿ ಸಾತೇನಹಳ್ಳಿ ಮಾತನಾಡಿ, ತಾಲ್ಲೂಕಿನಲ್ಲಿ ಈ ಬಾರಿ ಶೇ.31 ಮಳೆ ಕೊರತೆ ಇದೆ. ಅಂತರ್ಜಲ ಮಟ್ಟು 6 ಮೀಟರ್ ನಿಂದ 13 ಮೀಟರ್ ಗೆ ಕುಸಿದಿದೆ. ಕೆರೆಗಳಲ್ಲಿ ಶೇ. 40 ರಿಂದ 50 ನೀರಿದೆ.
ಜಾನುವಾರುಗಳಿಗೆ 29 ವಾರಗಳಿಗೆ ಅಂದರೆ 6 ತಿಂಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದೆ. ಬಿತ್ತನೆ ಬೀಜಗಳಿಗೆ ಕೊರತೆ ಇಲ್ಲ. 4 ಗೋಶಾಲೆಗಳಿದ್ದು ಸರ್ಕಾರದಿಂದ 23 ಲಕ್ಷ ಅನುದಾನ ಬಿಡುಗಡೆ ಆಗಿದೆ.
12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 2, 200 ಹೆ. ಪ್ರದೇಶದಲ್ಲಿ ಮೆಕ್ಕೆ ಜೋಳ ಬಿತ್ತನೆಯಾಗಿದ್ದು, 10 ಸಾವಿರ ಹೆಕ್ಟೇರ್ ಭತ್ತ ಮತ್ತು 1723 ಹೆ. ಮೆಕ್ಕೆಜೋಳ ಹಾನಿಗೊಳಗಾಗಿದೆ.
ತಾಲ್ಲೂಕಿನಲ್ಲಿ 269 ಗ್ರಾಮಗಳಿದ್ದು 177 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದಾಗಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ನಗರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಕಸಬ, ಆವಿನಹಳ್ಳಿ ಹೋಬಳಿಯಲ್ಲಿ 8 ತಿಂಗಳಿನಿಂದ ಜಾರಿಯಲ್ಲಿದೆ. ಆನಂದಪುರ, ತಾಳಗುಪ್ಪ ಹೋಬಳಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಎಂ.ವಿ.ಎಸ್. ಹಾಗೂ ಬೋರ್ ಯಶಸ್ವಿಯಾಗದ ಕೆಲ ಗ್ರಾಮಗಳಲ್ಲಿ ಕೆರೆ ನೀರಿಗೆ ಜಾಕ್ವೆಲ್ ನಿರ್ಮಿಸಿದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸಚಿವರು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಖಾಸಗಿ ಬೋರ್‍ವೆಲ್ ಮೂಲಕ ನೀರು ನೀಡಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಅನಿವಾರ್ಯವಾದರೆ ಮಾತ್ರ ಟ್ಯಾಂಕರ್ ಮೂಲಕ ನೀರು ನೀಡಲು ವ್ಯವಸ್ಥೆ ಮಾಡಬೇಕು. ಎಲ್ಲ ಪಿಡಿಓ ಗಳು ತುರ್ತಾಗಿ ತಮ್ಮ ವ್ಯಾಪ್ತಿಯ ವಾಸ್ತವತೆ ಅರಿತು ವರದಿ ನೀಡಬೇಕು. ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ವಹಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳಬೇಕೆಂದರು.
ಪಿಡಿ ಖಾತೆಯಲ್ಲಿ ಅನುದಾನದ ಲಭ್ಯತೆ ಇರುವಂತೆ ನೋಡಿಕೊಂಡು ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಿ ಸೂಕ್ತ ಕ್ರಮ ವಹಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸೇರ್ಪಡೆಯಾಗದ ಗ್ರಾಮಗಳನ್ನು ಸೇರ್ಪಡೆಗೊಳಿಸಬೇಕು, ಜಲಜೀವನ್ ಮಿಷನ್ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ ನೀರು ಕೊಡಬೇಕು. ಹಾಗೂ ಬಹುಗ್ರಾಮ, ಇತರೆ ಯೋಜನೆ, ಬೋರ್‍ವೆಲ್ ಯಶಸ್ವಿಯಾಗದ ಪ್ರದೇಶದಲ್ಲಿ ಜಾಕ್ವೆಲ್ ಮೂಲಕ ಕೆರೆ ನೀರು ಬಳಕೆ ಮಾಡಲು ವ್ಯವಸ್ಥೆ ಮಾಡಬೇಕು. ಜಾಕ್ವೆಲ್ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ ಪಟ್ಟಿ ಮಾಡಿ ಶಾಸಕರ ಅನುಮೋದನೆ ಪಡೆದು ಅಂದಾಜು ಪಟ್ಟಿ ನೀಡುವಂತೆ ತಿಳಿಸಿದರು. ಇಂತಹ ಕಡೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
ಮೆಸ್ಕಾಂ ನವರು ಟ್ರಾನ್ಸ್‍ಮಿಟರ್ ಸುಟ್ಟು ಹೋಗಿರುವುದು ಸೇರಿದಂತೆ ವಿದ್ಯುತ್ ವ್ಯತ್ಯಯಗಳ ದೂರು ಬಂದ ತಕ್ಷಣ ಸೂಕ್ತ ಕ್ರಮ ವಹಿಸಬೇಕು. ಹಾಗೂ ಪಿಡಿಓ ಗಳು ಸಹ ಶೀಘ್ರವಾಗಿ ಸ್ಪಂದಿಸಬೇಕೆಂದು ಸೂಚಿಸಿದರು.
ಇದೇ ವೇಳೆ ನರೇಗಾದಡಿ ಬಿಟ್ಟುಹೋಗಿರುವ ಕಾಲುಸಂಕ ಮತ್ತು ಜಾನುವಾರು ತೊಟ್ಟಿಗಳ ಕಾಮಗಾರಿಗಳನ್ನು ಸೇರಿಸುವಂತೆ ಮನವಿ ಮಾಡಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ, ತಾ.ಪಂ.ಇಓ ನಾಗೇಶ್ ಬಾಲ್ಯಾಳ್, ತಹಶೀಲ್ದಾರ್ ಚಂದ್ರಶೇಖರ್, ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.