‘ಸಾಧಕರು,ಉಳ್ಳವರಿಂದ ಸರ್ಕಾರಿ ಶಾಲೆಗಳ ಭವಿಷ್ಯ ಉಜ್ವಲ’

ಶಿವಮೊಗ್ಗ: ‘ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಸಾಧಕರು, ಉಳ್ಳವರು ಮನಸ್ಸು ಮಾಡಿದರೆ, ಸರ್ಕಾರಿ ಶಾಲೆಗಳ ಭವಿಷ್ಯ ಬದಲಿಸಬಹುದು. ಈ ಬದಲಾವಣೆಗೆ ಕುಬಟೂರು ಗ್ರಾಮದ ಸರ್ಕಾರಿ ಶಾಲೆಯಿಂದ ಮುನ್ನುಡಿ ಬರೆಯಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಮಧುಬಂಗಾರಪ್ಪ ಹೇಳಿದರು.

ಸರ್ಕಾರದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಶುಕ್ರವಾರ ಇಲ್ಲಿನ ಸೊರಬ ತಾಲ್ಲೂಕಿನ ಸ್ವಗ್ರಾಮ ಕುಬಟೂರು ಕೆರೆಗೆ ಬಾಗಿನ ಅರ್ಪಿಸಿ, ಬಳಿಕ ಕುಬಟೂರು ಸರ್ಕಾರಿ ಶಾಲಾಭಿವೃದ್ಧಿಗೆ ₹10 ಲಕ್ಷ ವೈಯಕ್ತಿಕವಾಗಿ ದೇಣಿಗೆ ನೀಡುವ ಕಾರ್ಯಕ್ರಮಕ್ಕೆ, ಪತ್ನಿ ಅನಿತಾ ಮಧುಬಂಗಾರಪ್ಪ ಅವರ ಜತೆಗೂಡಿ ಚಾಲನೆ ನೀಡಿ ಮಾತನಾಡಿದರು‌.

ಶಾಲೆಗೆ ನೀಡಿದ ದೇಣಿಗೆ ಮೊತ್ತ ₹10 ಲಕ್ಷ ಇರಬಹುದು. ಆದರೆ, ಇದು ಮುಂದಿನ ದಿನದಲ್ಲಿ ಕೋಟಿಗೆ ವಿಸ್ತರಣೆ ಆಗಲಿದೆ. ಇದರಿಂದ, ಸರ್ಕಾರಿ ಶಾಲೆಗಳ ಏಳಿಗೆ ಸಾಧ್ಯವಾಗಲಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಶಯ ಸಕಾರಗೊಂಡಿದೆ ಎಂದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ನನ್ನ ಪೂಜ್ಯ ತಂದೆಯವರಾದ ಎಸ್.ಬಂಗಾರಪ್ಪ ಅವರ ಭವಿಷ್ಯ ರೂಪಿಸಿದ್ದು, ಇದೇ ಕುಬಟೂರು ಸರ್ಕಾರಿ ಶಾಲೆ. ಆದರೆ, ಸರ್ಕಾರಿ ಶಾಲೆಯಲ್ಲಿ ಓದುವ ಸೌಭಾಗ್ಯ ನನಗೆ ಸಿಗದಿರುವ ಕುರಿತ ಬೇಸರವಿದೆ. ಇಲ್ಲಿ ಅಕ್ಷರ ಕಲಿತ ಬಂಗಾರಪ್ಪ ಅವರು ರಾಜ್ಯದ ಭವಿಷ್ಯ ರೂಪಿಸಲು ಸಾಕ್ಷಿಯಾದರು. ಜನ ಸಾಮಾನ್ಯರ ನಾಡಿ ಮಿಡಿತಕ್ಕೆ ಹತ್ತಿರವಾದರು. ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಹೊಸ ರೂಪ ಪಡೆದುಕೊಂಡಿದೆ ಎಂದರು.

ಅಕ್ಷರ ಕಲಿಸಿದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ಕಾರದ ಜತೆಗೆ ಎಲ್ಲರೂ ಕೈಜೋಡಿಸಬೇಕು. ಇದರಿಂದ, ಸರ್ಕಾರಿ ಶಾಲೆಗಳ ಅಸ್ಥಿತ್ವ ಸುಧಾರಣೆ ಕಾಣಲು ಸಾಧ್ಯ. ಮುಂದಿನ ಒಂದು ವರ್ಷದಲ್ಲಿ
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ
₹೧ ಸಾವಿರ ಕೋಟಿ ದೇಣಿಗೆ ಹರಿದು ಬರುವ ನಿರೀಕ್ಷೆ ಇದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕುಬಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುನಿತಾ ಮಾತನಾಡಿ, ಕುಬಟೂರು ಸರ್ಕಾರಿ ಶಾಲೆಗೆ ೧೫೦ ವರ್ಷದ ಪ್ರಾಚೀನ ಇತಿಹಾಸವಿದೆ. ಸ್ವಾತಂತ್ರ್ಯ ಬಳಿಕ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಗ್ರಾಮವನ್ನು ಅಗ್ರ ಸ್ಥಾನಕ್ಕೆ ಏರಿಸಿದರು. ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ಮಧುಬಂಗಾರಪ್ಪ ಅವರು ಸಾಗುತ್ತಿದ್ದಾರೆ.
ಶಾಲೆಗೆ ಎರಡು ಟಿವಿ, ಕಂಪ್ಯೂಟರ್, ಮಕ್ಕಳಿಗೆ ಕೂರಲು ಕುರ್ಚಿ ಹಾಗೂ ಟೇಬಲ್, ಫ್ಯಾನ್ ಸೇರಿ ₹10 ಲಕ್ಷ ಮೌಲ್ಯದ ಪರಿಕರಗಳನ್ನು ದೇಣಿಗೆ ನೀಡಿದ್ದಾರೆ. ಈ ರೀತಿಯ ಮನೋಭಾವ ಎಲ್ಲರೂ ರೂಢಿಸಿಕೊಳ್ಳಬೇಕು
ಎಂದರು.

ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಎಸ್ ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಬಎಂ.ಡಿ.ಶೇಖರ್, ದಯಾನಂದ ಕಲ್ಲೆ, ನಾಗರಾಜ ಗೌಡ, ಗಣಪತಿ, ನಾಗರಾಜ, ಅರುಣ್ ಕುಮಾರ್, ರಾಜಶೇಖರ, ಮಂಜುನಾಥ, ಹುಚ್ಚಪ್ಪ, ಪ್ರಕಾಶ್ ಇದ್ದರು.

ಬಾಕ್ಸ್
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಕ್ಕಳಿಗೆ ಕನ್ನಡ ಕಲಿಸಬೇಕು. ಅದೇ, ರೀತಿ ಶಿಕ್ಷಕರು ಸಹ ಕನ್ನಡ ಭಾಷೆಯಲ್ಲಿ ಪಕ್ವವಾಗಬೇಕು. ಗ್ರಾಮಾಂತರ ಭಾಗ ಸೇರಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಜೆ ತರಗತಿ ನಡೆಸಲು ಶಿಕ್ಷಕರು ಮುಂದಾಗಬೇಕು. ಇದರಿಂದ, ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.

ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಯಾವುದೇ ಹಕ್ಕು ಪೋಷಕರಿಗಿಲ್ಲ. ಆದ್ದರಿಂದ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು- ಮಧುಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು,

ಮಧು ಅಂಕಲ್ ಶಾಲೆಗೆ ಟಿವಿ ಕೊಟ್ಟಿದ್ದಾರೆ. ಖುಷಿ ಆಗುತ್ತಿದೆ. -ಅನುಶ್ರೀ, ವಿದ್ಯಾರ್ಥಿನಿ, ಒಂದನೇ ತರಗತಿ

ತುಂಬಾ ಸಂತೋಷ ಆಗುತ್ತಿದೆ. ಟಿವಿಯ ಮೂಲಕ ಪಾಠಗಳನ್ನು ಕೇಳಿಸಿಕೊಳ್ಳುವ ಜತೆಗೆ ನೋಡಬಹುದು. ಮಧು ಅಂಕಲ್ ಗೆ ಧನ್ಯವಾದ- ಎಂ.ಎ.ಮಲತೇಶ್, ವಿದ್ಯಾರ್ಥಿ, ಮೂರನೇ ತರಗತಿ

error: Content is protected !!