ಸಮಗ್ರ ಅಭಿವೃದ್ಧಿಯೊಂದಿಗೆ ಸಾರ್ಥಕತೆ ಮೆರೆದ ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗ : ನಗರದಲ್ಲಿ ಮೊಟ್ಟಮೊದಲ ಬಾರಿಗೆ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿದಂತಹ ಯುವ ನಾಯಕ, ಅಭಿವೃದ್ಧಿಯ ಹರಿಕಾರ, ಜನಪ್ರಿಯ ಸಂಸದ ಸನ್ಮಾನ್ಯ ಶ್ರೀ ಬಿ.ವೈ. ರಾಘವೇಂದ್ರ ಅವರಿಗೆ ಶುಕ್ರವಾರ ಜಿಲ್ಲೆಯ ಎಲ್ಲ ಮಠಾಧೀಶರ ಪರವಾಗಿ ಆಶೀರ್ವದಿಸಿ ಅಭಿನಂದಿಸಲಾಯಿತು.
50 ವಸಂತಗಳನ್ನು ಪೂರೈಸಿದ ಬಿ.ವೈ.ರಾಘವೇಂದ್ರ ಅವರಿಗೆ ಸಾರ್ಥಕ ಸುವರ್ಣ ಶಿರೋನಾಮೆಯಡಿ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್ ಹಾಲ್‌ನಲ್ಲಿ ಶುಕ್ರವಾರ ಸಂಜೆ ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ತು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಅವರ ಧರ್ಮಪತ್ರಿ ತೇಜಸ್ವಿನಿ ರಾಘವೇಂದ್ರ ಅವರನ್ನು ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ ಅಧ್ಯಕ್ಷರಾದ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಅಭಿನಂದಿಸಿ, ಆಶೀರ್ವದಿಸಿದರು.
ನಂತರ ಆಶೀರ್ವಚನ ನೀಡಿದ ಶ್ರೀಗಳು, ಸಾಧನೆ ಎಂಬುದು ಯಾರ ಸ್ವತ್ತೂ ಅಲ್ಲ, ಅಲ್ಲದೇ ಸುಮ್ಮನೆ ಕೈ ಕಟ್ಟಿ ಕುಳಿತರೆ ಅದು ಒಲಿಯುವುದಿಲ್ಲ. ಸಾಧನೆಯಿಂದಾಗಿಯೇ ಜೀವನದ ಸಾರ್ಥಕತೆ ಉಳಿದುಕೊಳ್ಳುತ್ತದೆ. ಅದರಲ್ಲೂ ಸಂಸದ ಬಿ.ವೈ.ರಾಘವೇಂದ್ರ ಅವರು ಜನಪ್ರತಿನಿಧಿಯಾಗಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಜನಮಾನಸದಲ್ಲಿ ಉಳಿಯುವಂತಹ ಅನೇಕ ಕೆಲಸಗಳನ್ನು ಮಾಡಿ ತೋರಿಸಿ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಸಾಮಾನ್ಯವಾಗಿ ಸ್ವಾಮೀಜಿಗಳಿಗೆ ಜನರು ಸನ್ಮಾನ ಮಾಡುತ್ತಾರೆ. ಆದರೆ, ಎಲ್ಲ ಮಠಾಧೀಶರೇ ಒಬ್ಬ ಜನಪ್ರತಿನಿಧಿಗೆ ಸನ್ಮಾನಿಸುವುದು ವಿಶೇಷ. ಹಾಗಾಗಿ ಇದು ಅರ್ಥಪೂರ್ಣ ಹಾಗೂ ಅಪರೂಪದ ಕಾರ್ಯಕ್ರಮ ಎಂದು ನುಡಿದ ಅವರು, ಲೋಕಸಭಾ ಸದಸ್ಯ ಎಂಬ ಕಾರಣಕ್ಕೆ ಸನ್ಮಾನ ಮಾಡಲಾಗಿದೆಯೇ ಹೊರತು ಮಠ, ಮನ್ಯಗಳಿಗೆ ಆರ್ಥಿಕ ನೆರವು ನೀಡಿದ್ದಾರೆಂಬ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ವೀರಶೈವ ಸಮಾಜದ ವ್ಯಾಪ್ತಿ ಬಹಳ ದೊಡ್ಡದು. ಸಣ್ಣಪುಟ್ಟ ಎಲ್ಲ ಸಮಾಜಗಳನ್ನೂ ಒಂದಾಗಿ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಸಮಾಜದ ಮೇಲಿದೆ. ಈ ಸಾರ್ಥಕ ಸುವರ್ಣ ಸನ್ಮಾನವು ಕ್ಷೇತ್ರದ ಜನರಿಗೆ ಸಂದ ಗೌರವ. ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ. ಯಾವುದೋ ಜನ್ಮದ ಪುಣ್ಯದ ಫಲ ತಂದೆಗೆ ಜಿಲ್ಲೆಯ ಜನರು ರಾಜಕೀಯ ಶಕ್ತಿ ತುಂಬಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಶಸರಸಿಗೆ ಗುರುಗಳ ಆಶೀರ್ವಾದ ಒಂದೆಡೆಯಾದರೆ, ಕುಟುಂಬ ಮತ್ತು ಮತದಾರರ ಸಹಕಾರ ದೊಡ್ಡದಾಗಿದೆ. ಎಲ್ಲರೂ ಜತೆಗೂಡಿದಾಗ ಮಾತ್ರ ಒಬ್ಬ ಜನಪ್ರತಿನಿಧಿ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನಿಟ್ಟೂರು ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಅವರು, ಸಂಸದ ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಗೆ ಅಭಿವೃದ್ಧಿಯ ಧ್ರುವತಾರೆ ಮತ್ತು ಕಲ್ಪವೃಕ್ಷವಾಗಿದ್ದಾರಲ್ಲದೇ ಮಾದರಿ ಎನಿಸಿದ್ದಾರೆ ಎಂದರು.
ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಮಹಾ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ರಾಘವೇಂದ್ರ ಅವರು ಶಿವಮೊಗ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಮಾದರಿ ಕೆಲಸ ಮಾಡಿದ್ದಾರೆ. ಒಬ್ಬ ರಾಜಕಾರಣಿಗೆ ಜಿಲ್ಲೆಯ ಎಲ್ಲ ಸಮಾಜದ ಮಠಾಧೀಶರು ಮತ್ತು ಎಲ್ಲ ಸಮಾಜದ ಒಂದಾಗಿ ಅಭಿನಂದಿಸುತ್ತಿರುವುದು ವಿಶೇಷ ಎಂದರು.
ಶರಣ ಸಾಹಿತ್ಯ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅವರು ಧಾರ್ಮಿಕ ಮತ್ತು ರಾಜಕೀಯ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ರಾಘವೇಂದ್ರ ಅವರು ರಾಜಕೀಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಿತ್ತುತ್ತಾ ಬಂದಿದ್ದಾರೆ. ರೈಲ್ವೆ, ಹೈವೇ, ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳ ಮೂಲಕ ಅಭಿವೃದ್ಧಿಯ ಹೊಸ ಭಾಷ್ಯಬರೆದಿದ್ದಾರೆ. ಸಂಸ್ಕೃತಿ, ಕಲೆ ಪ್ರಿಯರೂ ಆಗಿದ್ದಾರೆ. ರಾಜಕೀಯ, ಶಿಕ್ಷಣ ಹಾಗೂ ಸಾಮಾಜಿಕವಾಗಿ ಅವರ ಸೇವೆ ಅನನ್ಯವಾಗಿದೆ ಎಂದರು.
ನಿಟ್ಟೂರು ಶ್ರೀ ರೇಣುಕಾನಂದ ಮಹಾಸ್ವಾಮಿಗಳು, ಜಡೆ ಮಠದ ಶ್ರೀ ಮಹಾಂತ ದೇಶೀ ಕೇಂದ್ರ ಮಹಾಸ್ವಾಮೀಜಿ, ಶ್ರೀ ಘನ ಅಮರೇಶ್ವರ ಸ್ವಾಮಿಗಳು, ಬಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಹಾರನಹಳ್ಳಿಯ ಶ್ರೀ ನೀಲಕಂಠ ಸ್ವಾಮಿಗಳು, ಕೋಣಂದೂರು ಮಠದ ಶ್ರೀ ಪಶುಪತಿ ಪಂಡಿತಾರಾದ್ಯ ಸ್ವಾಮೀಜಿ, ಗೊಗ್ಗೆಹಳ್ಳಿ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಾಗಡಿಯ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಗುತ್ತಲದ ಶ್ರೀ ಪ್ರಭು ಸ್ವಾಮಿಗಳು, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮಿಗಳು, ಶ್ರೀ ಗುರು ಶಿವಾಚಾರ್ಯ ಹಾಲಸ್ವಾಮಿಗಳು, ಮೂಲೆಗದ್ದೆ ಸದಾನಂದ ಆಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಶ್ರೀಗಳು ಹಾಜರಿದ್ದರು. ಇದಕ್ಕೂ ಮೊದಲು ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ಅಂಬಯ್ಯ ನುಲಿ ಅವರಿಂದ ವಂಚನ ಸಂಗೀತ ನಡೆಯಿತು.
ಸಾವಿರಾರು ಜನ ಸೇರಿದ್ದ ಈ ಕಾರ್ಯಕ್ರಮದಲ್ಲಿ ಸ್ವಾಗತ, ನಿರೂಪಣೆ, ಪ್ರಾಸ್ತಾವಿಕ ಹಾಗೂ ವಂದನಾರ್ಪಣೆ ಹೀಗೆ ಎಲ್ಲ ಹಂತಗಳನ್ನೂ ವಿವಿಧ ಮಠಾಧೀಶರೇ ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.