ಶಿವಮೊಗ್ಗ ಮಾ,೦೩
ಜಿಲ್ಲೆಯ ೦ ಯಿಂದ ೫ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು. ಈ ಮೂಲಕ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಕರೆ ನೀಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿವಮೊಗ್ಗ ನಗರದ ಎಲ್ಲಾ ರೋಟರಿ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಳಘಟ್ಟ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಮಿಳಘಟ್ಟ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೨೦೧೧ ರಿಂದ ಭಾರತ ದೇಶದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಭಾರತ ಪೋಲಿಯೋ ಮುಕ್ತ ದೇಶವಾದರೂ ಆಫ್ಘಾನಿಸ್ತಾನ, ಪಾಕಿಸ್ತಾನ ಇತರೆ ಕೆಲವು ದೇಶಗಳಲ್ಲಿ ಇನ್ನೂ ಭೀತಿ ಇರುವ ಕಾರಣ ನಮ್ಮ ದೇಶದಲ್ಲೂ ಮರುಕಳಿಸಬಹುದೆಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾಡಲಾಗುತ್ತಿದ್ದು ಪ್ರತಿ ಬಾರಿಯೂ ಮಕ್ಕಳಿಗೆ ೨ ಹನಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು.
ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಮಕ್ಕಳಿಗೆ ಇಂದು ಪೋಲಿಯೋ ಲಸಿಕೆ ಹಾಕಿಸಿರಿ. ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಅತ್ಯಂತ ಜವಾಬ್ದಾರಿಯಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಡಿಹೆಚ್ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ , ಶಿವಮೊಗ್ಗ ಜಿಲ್ಲೆಯಲ್ಲಿ ೧೯೯೭ ರಿಂದ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ. ಆದರೆ ಕೆಲವು ದೇಶಗಳಲ್ಲಿ ಇನ್ನೂ ಪೋಲಿಯೋ ಭೀತಿ ಇರುವುದರಿಂದ ಪೋಲಿಯೋ ಅಭಿಯಾನ ನಡೆಸಲಾಗುತ್ತಿದೆ. ಇಂದು ಜಿಲ್ಲೆಯ ೦ ಯಿಂದ ೫ ವರ್ಷದೊಳಗಿನ ೧೨೦೬೨೬ ಮಕ್ಕಳಿಗೆ ಒಟ್ಟು ೧೦೩೭ ಬೂತ್ಗಳಲ್ಲಿ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ರೋಟರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ. ಪೋಲಿಯೋ ಹಾಕಿಸಿದ ಪೋಷಕರು ತಮ್ಮ ಅಕ್ಕಪಕ್ಕದ ಮನೆಗಳಿಗೂ ಈ ಬಗ್ಗೆ ತಿಳಿಸಬೇಕು ಎಂದರು.
ಡಾ.ಪಿ.ನಾರಾಯಣ್ ಮಾತನಾಡಿ, ಮೊದಲು ಪೋಲಿಯೋ ಭೀಕರತೆ ಹೆಚ್ಚಿತ್ತು. ವರ್ಷಕ್ಕೆ ಸುಮಾರು ೧ ಸಾವಿರ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಈಗ ೧೦ ರಿಂದ ೧೨ ಮಕ್ಕಳು ಬಲಿಯಾಗುತ್ತಿದ್ದಾರೆ. ಭಾರತ ಪೋಲಿಯೋ ಮುಕ್ತವಾದರೂ ಕೆಲ ದೇಶಗಳಲ್ಲಿ ಇದು ಇರುವ ಭೀತಿಯಿಂದಾಗಿ ನಾವು ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು. ೦ ಯಿಂದ ೫ ರೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಹಾಕಿಸಿದ್ದರೂ ಮತ್ತೆ ಪೋಲಿಯೋ ಹನಿ ಹಾಕಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಡಾ.ವಿವೇಕ್ ದೊರೈ, ಆರ್ಸಿಹೆಚ್ ಅಧಿಕಾರಿ ಡಾ.ನಾಗರಾಜ್ನಾಯ್ಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ, ಟಿಹೆಚ್ಓ ಡಾ.ಚಂದ್ರಶೇಖರ್, ರೋಟರಿ ಸಂಸ್ಥೆಯ ರಾಜೇಂದ್ರ ಪ್ರಸಾದ್, ಕೋಟೊಜಿ ರವಿ, ವಿಜಯಕುಮಾರ್, ಇತರರು, ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪೋಷಕರು, ಮಕ್ಕಳು ಹಾಜರಿದ್ದರು.