ದಿ:೨೭-೧೦-೨೦೨೩. ಬೆಳಗಟ್ಟ. ಬಹು ಸಂಸ್ಕೃತಿಯ ನೆಲೆಯಾದ ಬೃಹತ್ ಭಾರತ ದೇಶಕ್ಕೆ ಸಾಮಾಜಿಕ, ಕೌಟುಂಬಿಕ, ಧಾರ್ಮಿಕ, ರಾಜಕೀಯ, ಆಧ್ಯಾತ್ಮಿಕ ಮೌಲ್ಯಗಳನ್ನು ರೂಪಿಸಿದ ಮಹರ್ಷಿ ವಾಲ್ಮೀಕಿ ಭಾರತೀಯ ಸಂಸ್ಕೃತಿಯ ಹರಿಕಾರ ಎಂದು ಶ್ರೀ ಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಸಂಸ್ಥಾಪಕ ಅಧ್ಯಕ್ಷರಾದ ಅಮ್ಮ ಮಹದೇವಮ್ಮ ಅವರು ಅಭಿಪ್ರಾಯ ಪಟ್ಟರು.
ಅವರು ಶ್ರೀ ಮಠದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು. ವಾಲ್ಮೀಕಿ ಮಹರ್ಷಿಗಳು ಆದರ್ಶ ರಾಜ, ಸತಿ, ಭಕ್ತ, ಸಹೋದರತ್ವದ ಮೌಲ್ಯಗಳ ನಿಧಿಗಳಾದ ರಾಮ, ಸೀತೆ,ಆಂಜನೇಯ, ಲಕ್ಷ್ಮಣ್, ಭರತ ಪಾತ್ರಗಳ ಮೂಲಕ ಉತ್ಕೃಷ್ಟ ಭಾರತೀಯ ಸಂಸ್ಕೃತಿಯನ್ನು ಲೋಕಕ್ಕೆ ಸಾರಿದ ಮಹಾತ್ಮ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿ ಮಹರ್ಷಿ ವಾಲ್ಮೀಕಿ ಅಮರ ಕವಿ. ವ್ಯಕ್ತಿ ಮತ್ತು ಸಮಾಜ ಹೇಗಿರಬೇಕೆಂಬ ನೀತಿಯ ಚೌಕಟ್ಟನ್ನು ರೂಪಿಸಿದ ಮಹಾಪುರುಷರು ಮಹಾಕವಿ ವಾಲ್ಮೀಕಿ. ಇವರು ಮನುಕುಲದ ದೀಪ. ಜ್ಞಾನದ ಬೆಳಕನ್ನು ಬಿತ್ತಿ ಬೆಳೆದ ಬೆಳೆಗಾರರು ಎಂದು ಅಭಿಪ್ರಾಯ ಪಟ್ಟರು. ಅನಿತಾ ಅವರು ಪ್ರಾರ್ಥನೆ ಸಲ್ಲಿಸಿದರು.