ಶಿವಮೊಗ್ಗ,ಮಾ.28: ಸಾರ್ವಜನಿಕ ಸಭೆಗಳಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವೇ ಮಧುಬಂಗಾರಪ್ಪನವರಿಗೆ ಗೊತ್ತಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.
ಅವರು ಇಂದು ಬಿಜೆಪಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ, ಸಂಸ್ಕøತಿ ಇದೆ, ಆದರೆ ಕಾಂಗ್ರೆಸ್ಸಿಗರಿಗೆ ಇದರ ಅರಿವೇ ಇಲ್ಲ. ಚುನಾವಣೆಗಳು ಬಂದಾಗ ಅಭಿವೃದ್ಧಿ, ಸಾಧನೆ, ವೈಪಲ್ಯ ಕುರಿತಂತೆ ಚರ್ಚೆಗಳು ನಡೆಯುವುದು ಸಹಜವೇ. ಆದರೆ, ಈ ಚರ್ಚೆಗಳು ಮತ್ತು ಮಾತುಗಳು ಉಪಯೋಗಿಸುವ ರೀತಿ ಮಾತ್ರ ಬೇರೆಯದೇ ಆಗಿದ್ದು, ಕಾಂಗ್ರೆಸ್ನವರು ತಮ್ಮ ಸಂಸ್ಕøತಿಯನ್ನೇ ಮರೆತಿದ್ದಾರೆ ಎಂದರು.
ಶಿಕಾರಿಪುರದ ಸಭೆಯೊಂದರಲ್ಲಿ ಮಧುಬಂಗಾರಪ್ಪನವರು ಬಿಜೆಪಿ ಕಾರ್ಯಕರ್ತರನ್ನು ಚೇಲಗಳು ಎಂದು ಕರೆದಿದ್ದಾರೆ. ಆದರೆ ಇವರಿಗೆ ನೆನಪಿರಲಿ ಇದೇ ಚೇಲಗಳು ಇವರ ತಂದೆ ಬಂಗಾರಪ್ಪನವರ ಪರವಾಗಿ ಕೆಲಸ ಮಾಡಿದ್ದರು ಎಂದರು.
ಪ್ರಧಾನಿ ಮೋದಿಯವರಿಗೆ ಗೌರವ ಕೊಟ್ಟರೆ ದೇಶ ಭಕ್ತ ಎಂದು ಕರೆದರೆ, ಇವರಿಗೇಕೆ ಸಿಟ್ಟು, ಮಧುಬಂಗಾರಪ್ಪ ಜೆಡಿಎಸ್ನಲ್ಲಿ ಇದ್ದಾಗ ದೇವೇಗೌಡರನ್ನು ದೇವರು ಎಂದು ಕರೆದಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯ 10 ವರ್ಷದ ಸಾಧನೆ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು 68 ವರ್ಷಗಳ ಕಾಲ ಏನು ಮಾಡಿದ್ದೇವೆ ಎಂದು ತಿರುಗಿ ನೋಡಲಿ. ಶಿವಮೊಗ್ಗದಲ್ಲಿ ಆದ ಅಭಿವೃದ್ಧಿಯ ಬಗ್ಗೆ ಇವರಿಗೆ ಮಾತನಾಡುವ ಹಕ್ಕಾದರೂ ಏನಿದೆ? ಸೇತುವೆ, ರೈಲ್ವೆ, ವಿಮಾನ ಇವೆಲ್ಲವೂ ಇವರಿಗೆ ಕಾಣಿಸುದಿಲ್ಲವೇ ಎಂದು ಪುನರುಚ್ಛರಿಸಿದರು.
ಕಾಂಗ್ರೆಸ್ಸ್ನವರ ಟೀಕೆಗೆ ಅವರ ಅಸಭ್ಯತನ ಮಾತುಗಳಿಗೆ ಮತದಾರ ಖಂಡಿತ ಉತ್ತರ ಕೊಡುತ್ತಾನೆ. ಈ ಬಾರಿ ನಾವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಈಗಾಗಲೇ ಲೋಕಸಭೆಯಲ್ಲಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ಸ್ಥಾನವು ಸಿಕ್ಕಿಲ್ಲ. ಮುಂದೆ ಅವರಿಗೆ ಗ್ಯಾಲರಿಯೇ ಗತಿಯಾಗಬಹುದು ಎಂದು ಹಂಗಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರುದ್ರೇಗೌಡ, ಆರ್.ಕೆ.ಸಿದ್ರಾಮಣ್ಣ, ಟಿ.ಡಿ.ಮೇಘರಾಜ್, ಡಿ.ಎಸ್.ಅರುಣ್, ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಬಳಿಗಾರ್, ಗಾಯಿತ್ರಿ ಮಲ್ಲಪ್ಪ, ಶಿವರಾಜ್, ಜಗದೀಶ್ ಸೇರಿದಂತೆ ಹಲವರಿದ್ದರು.
ಬಾಕ್ಸ್ : ಸೂಕ್ತ ಸಮಯದಲ್ಲಿ ಕೆ.ಎಸ್.ಈಶ್ವರಪ್ಪನವರ ಬಗ್ಗೆ ಪಕ್ಷದ ಹಿರಿಯರು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಪ್ರಮಯ ಬರಲಾರದು ಎಂಬ ವಿಶ್ವಾಸ ನನಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಕೆ.ಎಸ್.ಈಶ್ವರಪ್ಪನವರು ಈಗಾಗಲೇ ಬಂಡಾಯ ಎದಿದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆದರು ನಿಮ್ಮ ತಾಳ್ಮೆ ಏಕಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತಾಳ್ಮೆ ಬಹು ಮುಖ್ಯ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಪಕ್ಷದ ಹಿರಿಯರು ಅವರ ಚಟುವಟಿಕೆಯನ್ನು ಗಮನಿಸುತ್ತಿದ್ದಾರೆ. ಖಂಡಿತ ಸೂಕ್ತ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳುತಾರೆ ಎಂದರು.
ಈಶ್ವರಪ್ಪನವರ ಬಗ್ಗೆ ಅವರು ಹಿಂದುತ್ವದ ಬಗ್ಗೆ ನಮಗೂ ಗೌರವಿದೆ. ಹಿಂದುತ್ವಕ್ಕೆ ಬಿ.ಎಸ್.ಯಡಿಯೂರಪ್ಪನವರ ಕೊಡುಗೆ ಏನು ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಅವರಿಗೆ ನೆನಪು ಇರಲಿ, ನಾನುಕೂಡ ಆರ್ಎಸ್ಎಸ್ ಶಾಲೆಯಲ್ಲಿಯೇ ಕಲಿತವನು, ರಾಮಮಂದಿರ ವಿಷಯ ಬಂದಾಗ, ಈದ್ಗಾ ಮೈದಾನ ವಿಷಯ ಬಂದಾಗ, ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಬಿ.ಎಸ್.ಯಡಿಯೂರಪ್ಪನವರು ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮೋದಿಗಿಂತ ಹಿಂದುತ್ವ ಬೇಕಾ, ಅವರು ಹೀಗೆ ಮಾತನಾಡಿದ್ದಕ್ಕೆ ಖಂಡಿತ ಬೇಜರಿದೆ. ಕಾಲ ಹೀಗೆ ಇರುವುದಿಲ್ಲ. ಆದಷ್ಟು ಬೇಗ ಒಳ್ಳೆಯ ದಿನಗಳು ಬರುತ್ತವೆ. ಬೆಳಗಾವಿ ದಾವಣಗೆರೆಯಲ್ಲಿ ಭಿನ್ನಮತ ಶಮನವಾಗಿದೆ. ಶಿವಮೊಗ್ಗದಲ್ಲಿಯೂ ಆಗಲಿದೆ ಎಂದರು.