ಶಿವಮೊಗ್ಗ : ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ್ ಅಕ್ಕಿ ಯೋಜನೆಗೆ ಬುಧವಾರ ವಿನೋಬನಗರದ ಶಿವಾಲಯದ ಆವರಣದಲ್ಲಿ ನಡೆಯುತ್ತಿರುವ ಧರ್ಮಸಭೆ ಕಾರ್ಯಕ್ರಮದಲ್ಲಿ ಉಜ್ಜಯಿನಿ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವಾತ್ಪಾದರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆ ಇದು. ಬಡ ಮತ್ತು ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ಕೇವಲ 290 ರೂ.ಗಳಿಗೆ ನೀಡಲಾಗುತ್ತದೆ. ಒಂದು ಕೆಜಿ ಅಕ್ಕಿಗೆ 29 ರೂ. ಇದೆ. ಇದೇ ಅಕ್ಕಿ ಮಾರುಕಟ್ಟೆಯಲ್ಲಿ 60 ರೂ.ಗೆ ಮಾರಾಟವಾಗುತ್ತದೆ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಈ ಯೋಜನೆ ಜರಿಗೆ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳು ಎಂದರು.
ಶಿವಮೊಗ್ಗಕ್ಕೆ ಪ್ರತಿದಿನ 10 ಲೋಡ್ ಅಕ್ಕಿ ಬರುತ್ತದೆ. ಪ್ರತಿ ಲೋಡ್ ನಲ್ಲಿ 10 ಕೆಜಿಗಳ 2500 ಬ್ಯಾಗ್ ಇರುತ್ತವೆ. ತಮ್ಮ ಮೊಬೈಲ್ ನಂಬರ್ ನೀಡಿ ಅಕ್ಕಿಯನ್ನು ಸಾರ್ವಜನಿಕರು ಖರೀದಿಸಬಹುದು. ಇದಕ್ಕೆ ಯಾವುದೇ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದರು.
ಈ ಸಂದರ್ಭ ಬಿಳಕಿ ಹಿರೇಮಠದ ಶ್ರೀ.ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲವೆ ದುರ್ಗ ಮಠದ ಶ್ರೀ ರಾಜಗುರು ಮರುಳ ಸಿದ್ಧಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಪ್ರಮುಖರಾದ ಪಟ್ಟಾಭಿರಾಮ್, ಅತಿರುದ್ರ ಮಹಾಯಾಗ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಝಯ ಸರ್ಜಿ, ಎಸ್.ಎಸ್.ಜ್ಯೋತಿ ಪ್ರಕಾಶ್, ಎನ್.ಜೆ. ರಾಜಶೇಖರ್, ಮೋಹನ್, ರೆಡ್ಡಿ, ಗನ್ನಿ ಶಂಕರ್, ಮಹೇಶ್, ಕೆ.ಇ. ಕಾಂತೇಶ್ ಮೊದಲಾದವರಿದ್ದರು.