
ಆರೋಗ್ಯಕರ ಸಮಾಜಕ್ಕೆ ಗಿಡಮೂಲಿಕೆಗಳನ್ನಾಧರಿಸಿದ ಸುಸ್ಥಿರ ಔಷಧೀಯ ಉತ್ಪನ್ನಗಳು ಅಗತ್ಯ: ಥಾಯ್ಲೆಂಡ್ ವಿವಿಯ ಪ್ರೊ. ಸುಕಾಡಾ ಸುಕ್ರೋಂಗ್
ಶಂಕರಘಟ್ಟ, ಏ. 10: ಗಿಡಮೂಲಿಕೆಗಳನ್ನು ಆಧರಿಸಿದ ಔಷಧೀಯ ಉತ್ಪನ್ನಗಳು ಆರೋಗ್ಯಕರ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಭವಿಷ್ಯದಲ್ಲಿ ಇತರೆ ಔಷಧೀಯ ವಿಧಾನಗಳಿಗೆ ಪರ್ಯಾಯವಾಗಿ ಬೆಳೆಯಲಿದೆ ಎಂದು ಥಾಯ್ಲೆಂಡ್ ನ ಚುಲಾಲೊಂಗೋಂ ವಿಶ್ವವಿದ್ಯಾಲಯದ ಔಷಧ ಶಾಸ್ತ್ರ ವಿಭಾಗದ ನಿರ್ದೇಶಕಿ ಪ್ರೊ. ಸುಕಾಡಾ ಸುಕ್ರೋಂಗ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ‘ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯತೆಯ ಸುಸ್ಥಿರ ಬಳಕೆ’ ಕುರಿತು ಗುರುವಾರ ಆರಂಭವಾದ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಜಗತ್ತಿನಾದ್ಯಂತ ಸಿಂಥೆಟಿಕ್ ಔಷಧೀಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಫಾರ್ಮಾ ಕಂಪನಿಗಳು ಗಿಡಮೂಲಿಕೆಗಳ ಸತ್ವವನ್ನು ಒಳಗೊಂಡ ಮತ್ತು ಅಡ್ಡ ಪರಿಣಾಮಗಳಿಲ್ಲದ ಸುಸ್ಥಿರವಾದ ಔಷಧೀಯ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವುದರತ್ತ ಗಮನಹರಿಸುತ್ತಿವೆ ಎಂದು ಅವರು ಹೇಳಿದರು.
ಚೀನಾದ ವಿದ್ಯುನ್ಮಾನ ಮತ್ತು ಜೀವವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೊ. ಸಜೀವಾ ಮಹಾಚಿಗುಂಬುರ ಮಾತನಾಡಿ, ಆಧುನಿಕ ವಿಜ್ಞಾನ ಕೂಡ ಆಯುರ್ವೇದ ಮತ್ತು ಸಾವಯವ ಗಿಡಮೂಲಿಕೆಗಳ ಮಹತ್ವವನ್ನು ಅರಿತಿದ್ದು, ವಿವಿಧ ಜಾಗತಿಕ ಸಂಸ್ಥೆಗಳು ನೋನಿಯಂತಹ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿವಿಧ ರೋಗಗಳಿಗೆ ಪರಿಹಾರಹುಡುಕುತ್ತಿವೆ. ಎಂದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಅಪ್ಪಾರಾವ್ ಪೊಡಿಲೆ ಮಾತನಾಡಿ, ಸುಸ್ಥಿರ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಅದೃಶ್ಯ ಸೂಕ್ಷ್ಮ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದರ ಜೊತೆಗೆ ಸಮರ್ಪಕವಾದ ಕೃಷಿ ಚಟುವಟಿಕೆಯನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದರು.
ಸುಸ್ಥಿರ ಕೃಷಿ ಪ್ರಕ್ರಿಯೆ ಮತ್ತು ಆರೋಗ್ಯಕರವಾದ ಸಾವಯವ ಬೆಳೆಗೆ ಭೂಮಿಯ ಮೇಲಿನ ರಾಸಾಯನಿಕ ಅಥವಾ ಸಾವಯವ ಗೊಬ್ಬರ ಎಷ್ಟು ಮುಖ್ಯವೋ, ಮಣ್ಣಿನ ಒಳಗಿನ ಸೂಕ್ಷ್ಮ ಜೀವಾಣುಗಳು ಕೂಡ ಅಷ್ಟೇ ಮುಖ್ಯ ಎಂದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಆಯುರ್ವೇದ ಔಷಧಿಗಳು ಜನಪ್ರಿಯವಾಗುತ್ತಿವೆ. ಸಂಶ್ಲೇಷಿತ (ಸಿಂಥೆಟಿಕ್) ಔಷಧಗಳಿಗೆ ಹೋಲಿಸಿದರೆ ಆಯುರ್ವೇದದ ಔಷಧ ಚಾಲ್ತಿಗೆ ಬಂದಿದೆ.
ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಆಯುರ್ವೇದ ಉತ್ಪನ್ನಗಳು ಅಡ್ಡಪರಿಣಾಮಗಳನ್ನು ಹೊಂದಿರುವ ಬಗ್ಗೆ ಕೆಲ ಸಂಶೋಧನೆಗಳು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ಆಯುರ್ವೇದ ಉತ್ಪನ್ನಗಳ ಬಗ್ಗೆ ಎಚ್ಚರಿಗೆ ಅಗತ್ಯ ಎಂದರು.
ಯಾವುದೇ ಸಂಶೋಧನೆ ಕೇವಲ ವಿಶ್ವವಿದ್ಯಾಲಯದ ಪ್ರಯೋಗಾಲಯಗಳಿಗೆ ಸೀಮಿತವಾಗದೆ ಸಮಾಜಮುಖಿಯಾಗಿರಬೇಕು. ಸಂಶೋಧನೆಗಳ ಅನ್ವಯಿಕತೆಯ ಪ್ರಯೋಜನ ಈ ಸಮ್ಮೇಳನದ ಮೂಲಕ ವಿದ್ಯಾರ್ಥಿಗಳಿಗೆ ದೊರಕುವಂತಾಗಲಿ ಎಂದು ಆಶಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್. ಸಿ. ಜಗದೀಶ್, ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ಡಾ. ಎ. ಕೆ. ಶ್ರೀನಿವಾಸ ಮೂರ್ತಿ, ಪ್ರೊ. ವಿ. ಕೃಷ್ಣ, ಪ್ರೊ. ಜೆ. ನಾರಾಯಣ, ಪ್ರೊ. ಬಿ. ತಿಪ್ಪೇಸ್ವಾಮಿ, ಡಾ. ಎಚ್. ಎಸ್. ಸಂತೋಷ್ ಕುಮಾರ್, ಪ್ರೊ. ವಿಜಯಕುಮಾರ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ದೇಶ ವಿದೇಶಗಳ ಸಂಶೋಧಕರು, ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ವಿ. ಕೃಷ್ಣ ಅವರ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಆ್ಯಂಟಿ ಏಜಿಂಗ್ ಕ್ರೀಮ್ ಅನ್ನು ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ಸಹಯೋಗದಲ್ಲಿ ಬಿಡುಗಡೆಮಾಡಲಾಯಿತು. ಸ್ಥಳೀಯ ರೈತರಿಗೆ ಸಹಕಾರಿಯಾಗಲೆಂದು ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಜೆ. ನಾರಾಯಣ ಅವರು ಅಭಿವೃದ್ಧಿಪಡಿಸಿರುವ ಸಾವಯವ ಗೊಬ್ಬರವನ್ನು ಕೂಡ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.