ಶಿವಮೊಗ್ಗ, ಫೆ.10 :ಕಾಯಕ ಶರಣರು ನಡೆ-ನುಡಿಗೆ ಅಂತರವಿಲ್ಲದAತೆ ಬದುಕಿದವರು. ತಮ್ಮ ವಿವಿಧ ಕಾಯಕಗಳ ಮೂಲಕ ಕಾಯಕ ನಿಷ್ಟೆಯಿಂದ ಸಮಾಜ ಸುಧಾರಣೆಯಲ್ಲಿ ಪಾಲ್ಗೊಂಡವರು ಇವರು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಶರಣರು ಕೇವಲ ತಮ್ಮ ಉದ್ಧಾರಕ್ಕಾಗಿ ಅಲ್ಲ. ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದವರು. ಕಾಯಕದ ಮೂಲತತ್ವ ಅರಿತು ಕಾರ್ಯವೆಸಗಿದವರು ಈ ಕಾಯಕ ಶರಣರು. 12 ನೇ ಶತಮಾನ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ಯುಗ. ಕಾಯಕ ಶರಣು ಸೇರಿದಂತೆ ಶರಣರು ತಮ್ಮ ವೃತ್ತಿ ಜೊತೆಗೆ ಸಮಾಜ ಸುಧಾರಕರಾಗಿ ಕೊಡುಗೆ ನೀಡಿದ್ದಾರೆ. ವಚನಗಳ ಮೂಲಕ ಸಮಾನತೆ ತತ್ವ ಸಾರಿದರು.
ಕಾಯಕ ಮಾಡ್ತಾ ಮಾಡ್ತಾ ಅದಕ್ಕೆ ಪೂರಕವಾಗಿ ವಚನ ಬರೆಯುತ್ತಾ. ಜನರಿಗೆ ತಿಳುಸುತ್ತಾ ಹೋದ ಸಾಧಕರು ಇವರು. ಇಂತಹ ವಚನಗಳನ್ನು, ಶರಣರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವ್ಯವಸ್ಥೆಯನ್ನು ನಾವು ಮಾಡಬೇಕು.
ತುಳಿತಕ್ಕೊಳಗಾದ ಸಮಾಜದ ಏಳ್ಗೆಗೆ ಶ್ರಮಿಸಿದವರು, ಸಮಾಜದಲ್ಲಿನ ಅಂಕು ಡೊಂಕು ತಿದ್ದಿದವರು, ಕಾಯಕವೇ ಶ್ರೇಷ್ಠ ಎಂದು ಸಾರಿದವರು ಕಾಯಕ ಶರಣರು. ಕಾಯಕದ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದವರು. ಜಾತಿ, ಮತ ಮೀರಿ ಮುಂದೆ ಸಾಗಬೇಕೆಂದು ತಿಳಿಸಿದ ಐದು ಕಾಯಕ ಶರಣರ ಜಯಂತಿ ಅರ್ಥಪೂರ್ಣ ವಾಗಲಿ ಎಂದು ಹಾರೈಸಿದ ಅವರು ಮುಂದಿನ ದಿನಗಳಲ್ಲಿ ಜಯಂತಿಗೆ ಹೆಚ್ಚಿನ ಜನರು ಪಾಲ್ಗೊಳ್ಳುತ್ತಾರೆಂಬ ನಂಬಿಕೆ ಇದೆ ಎಂದರು.

ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಸೋಮಶೇಖರ್ ಹೆಚ್.ಶಿಮೊಗ್ಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ, ಗುಡ್ಡಯ್ಯ ಇನ್ನೂ ಮುಂತಾದ ಶರಣರು ತಳ ಸಮುದಾಯದ ಪ್ರತಿನಿಧಿಗಳು. ವಿವಿಧ ವರ್ಗಗಳಿಂದ ಬಂದ ಇವರು ವಿವಿಧ ಕಾಯಕದಲ್ಲಿ ನಿಷ್ಟರಾಗಿ ದುಡಿಯುತ್ತಾ, ಕಾಯಕದ ಮೂಲಕ, ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದವರು.
12 ನೇ ಶತಮಾನ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಹೋರಾಟದ ಮಹತ್ವವನ್ನು ತೋರಿದ ಸಮಯವಾಗಿದೆ. ಅಸಮಾನತೆ ತೊಡೆಯುವ ಚಳವಳಿಯಾಗಿತ್ತು. ಇಂದಿನ ಯುವಜನತೆಗೆ ಚಳವಳಿ ಮತ್ತು ಹೋರಾಟ ಎಂದರೇನು ಎಂದು ಅರ್ಥವಾಗಬೇಕು. ತಿಳುವಳಿಕೆ ಮೂಡಬೇಕಿದೆ.
ಬಹುತೇಕ ಎಲ್ಲ ವಚನಗಳಲ್ಲಿ ನಾವು ಬಹಳ ಮುಖ್ಯವಾಗಿ ಹಸಿವು, ಬಡತನ ಮತ್ತು ಆಧ್ಯಾತ್ಮಿಕ ಪರಿವರ್ತನೆಯನ್ನು ಕಾಣಬಹುದು. ಅನ್ನದ ಬಗ್ಗೆ ಅಂದಿನ ವಚನಗಳಾದಿಯಾಗಿ ಪ್ರಸುತದಲ್ಲಿ ಬೇಂದ್ರೆಯವರು ಅನ್ನ ದೇವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅನ್ನ ಜಗತ್ತಿನ ಪ್ರಾಣ ಎಂದಿದ್ದಾರೆ.
ವಚನ ಸಾಹಿತ್ಯ ನಮ್ಮ ಸಮಾಜಕ್ಕೆ ಒಂದು ವಿಶೇಷ ಕೊಡುಗೆಯಾಗಿದೆ. ಸ್ಥಾವರ ಸಂಸ್ಕೃತಿಯನ್ನು ಅಂದಿನ ಬಸವಾದಿ ಶರಣರು ವಿರೋಧಿಸಿದ್ದರು. ಅದನ್ನು ಇಂದು ವಿಜೃಂಭಿಸಲಾಗುತ್ತಿದೆ. ಅದರರ್ಥ ವಚನಗಳನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲವೆAದು ತೋರುತ್ತದೆ. ಹಿಂದೆ ದಲಿತ ವಚನಕಾರರಗಿಂತ ಹಿಂದುಳಿದ ವಚನಕಾರರು ಮತ್ತು ದಲಿತ ವಚನಗಾರ್ತಿಯರು ಹೆಚ್ಚು ಪರಿಣಾಮಕಾರಿಯಾಗಿ ಸಮಾಜದ ಅಂಕುಡೊAಕುಗಳನ್ನು ಪ್ರಶ್ನಿಸಿರುವುದು ಗೋಚರಿಸುತ್ತದೆ. ತಳ ಸಮುದಾಯದ ಕಾಳವ್ವೆ, ಸತ್ಯಕ್ಕ ಭಿನ್ನವಾದ ಸ್ವರ ಎತ್ತಿದವರು ಎಂದರು.
ದಲಿತ, ಹಿಂದುಳಿದ ಸಮುದಾಯದ ವಚನಕಾರರು ಎತ್ತಿದ ಪ್ರಶ್ನೆಗಳು ಚರ್ಚೆಗೆ ಒಳಪಡಬೇಕಿದೆ. ಜಾತಿಯ ಅಸಮಾನತೆಯನ್ನು ತೊಡೆದು ಹಾಕುವ ಕೆಲಸ ಮಾಡಿದ ವಚನ ಸಾಹಿತ್ಯ ಮತ್ತು ತಳ ಸಮುದಾಯದ ಶರಣರ ವಚನಗಳನ್ನು ಮರು ಓದಿಗೆ ಒಳಪಡಿಸಬೇಕಿದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್ ಮಾತನಾಡಿ, ಕಾಯಕಕ್ಕೆ ಯಾವುದೇ, ಜಾತಿ ಧರ್ಮ ಇಲ್ಲ. ಮನಃಪೂರ್ತಿಯಾಗಿ, ಜೀವನದ ಅಭಿವೃದ್ಧಿಗಾಗಿ ಮಾಡುವುದೇ ಕಾಯಕ. ಕಾಯಕಕ್ಕೆ ನಿಷ್ಟರಾಗಿರಬೇಕು, ದುಡಿದು ತಿನ್ನಬೇಕೆಂದು ಸಾರಿದವರು ಕಾಯಕ ಶರಣರು. ಸಮಾಜದಲ್ಲಿ ಶ್ರಮಜೀವಿಗಳಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಶ್ರಮಜೀವಿಗಳ ಅಭಿವೃದ್ಧಿ ಯಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದರು.
ಎಸಿ ಸತ್ಯನಾರಾಯಣ ಮಾತನಾಡಿ, ಕಾಯಕ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಏಳ್ಗೆಯಲ್ಲಿ ಪಾಲ್ಗೊಳ್ಳೋಣ ಎಂದರು.
ಸಮಗಾರ ಸಮಾಜದ ಕೆ.ಎನ್ ಅಶೋಕಕುಮಾರ್ ಹರಳಯ್ಯನವರ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.
(ಫೋಟೊ ಇದೆ)