ಶಿವಮೊಗ್ಗ : ಜನವರಿ 23 : ಈಗಾಗಲೇ ಭದ್ರಾವತಿಯಲ್ಲಿ ವ್ಯವಸ್ಥಿತವಾದ ಆಕಾಶವಾಣಿ ಕೇಂದ್ರವಿದ್ದು, ಅದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ ಉದ್ದೇಶಿತ ಎಫ್.ಎಂ. ರೇಡಿಯೋ ಕೇಂದ್ರದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಧ್ವನಿಮುದ್ರಣ ಘಟಕ ಆರಂಭಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರದಿಂದ ಒದಗಿಸಿಕೊಟ್ಟು, ಅತ್ಯಲ್ಪ ಅವಧಿಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ಹೇಳಿದರು.
ಅವರು ಇಂದು ನಗರದ ಎಂ.ಆರ್.ಎಸ್.ಸಮೀಪದಲ್ಲಿರುವ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ಎಫ್.ಎಂ.ರೇಡಿಯೋ ಆರಂಭಿಸಲು ಕೆನಡಾದಿಂದ ತರಿಸಲಾಗಿದ್ದ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್‍ಮೀಟರ್ ಅಳವಡಿಕೆ ಹಾಗೂ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು, ನಂತರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ದೇಶದ ಎಲ್ಲಾ ಆಕಾಶವಾಣಿ ಕೇಂದ್ರಗಳನ್ನು ಜನರ ಆಶೋತ್ತರಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಕಳೆದ ಸಾಲಿನಲ್ಲಿ 2500ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ, ಮೂಲಭೂತ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ತಂತ್ರಾಂಶಗಳನ್ನು ಅಳವಡಿಸಿದೆ ಎಂದ ಅವರು, ಪ್ರಸ್ತುತ ರಾಜ್ಯದ ಕೋಲಾರ, ರಾಣೆಬೆನ್ನೂರು, ಬೀದರ್ ಮತ್ತು ಉಡುಪಿ ಜಿಲ್ಲೆಗಳಿಗೂ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್‍ಮೀಟರ್‍ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಆಕಾಶವಾಣಿ ಕೇಂದ್ರಗಳನ್ನು ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಲಿವೆ ಎಂದರು.
ಆಕಾಶವಾಣಿಯು ಈ ದೇಶದ ಸಾಂಪ್ರದಾಯಿಕ, ಕಲೆ, ಸಾಹಿತ್ಯ, ಸಂಗೀತವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಮಹತ್ವ ಕಾರ್ಯನಿರ್ವಹಿಸುತ್ತಿದೆ ಮಾತ್ರವಲ್ಲ ಸ್ಥಳೀಯ ಕಲಾವಿದರಿಗೆ ವೇದಿಕೆಗಳನ್ನು ಒದಗಿಸಿ, ಅವರ ಕಲೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ. ಇದರೊಂದಿಗೆ ಇಂದಿನ ಜನಾಂಗಕ್ಕೆ ಪೂರಕವಾದ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ, ಪ್ರಸಾರಗೊಳಿಸಲು ಆಕಾಶವಾಣಿ ಬದ್ದವಾಗಿದೆ. ದೂರದ ಗುಡ್ಡ-ಬೆಟ್ಟ ಪ್ರದೇಶಗಳಲ್ಲಿಯೂ ಆಕಾಶವಾಣಿ ತನ್ನ ಇರುವಿಕೆಯನ್ನು ಮತ್ತೆಮತ್ತೆ ಪರಿಚಯಿಸಲಿದೆ ಎಂದರು.
ಇಲ್ಲಿನ ಕ್ರಿಯಾಶೀಲ ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಾಸೆಯಂತೆ ಎಫ್.ಎಂ.ರೇಡಿಯೋ ಕೇಂದ್ರವನ್ನು ಅಭಿವೃದ್ಧಿಪಡಿಸಲು ಅಗತ್ಯ ಸಹಕಾರವನ್ನು ನೀಡಲಾಗುವುದು. ಅವರ ಜನಪರ ಕಳಕಳಿಯಂತೆ ಸಾಮಾನ್ಯವೆನಿಸುವ ಕಾರ್ಯಗಳನ್ನು ನಿರ್ಲಕ್ಷಿಸದೇ ಕೈಗೆತ್ತಿಕೊಳ್ಳುವ ಅವರ ಸ್ವಭಾವ ಪ್ರಶಂಸನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಪ್ರಸ್ತುತ ಭದ್ರಾವತಿ ಕೇಂದ್ರದಲ್ಲಿ 1ಕಿ.ವ್ಯಾ. ಸಾಮಥ್ರ್ಯದ ಟ್ರಾನ್ಸ್‍ಮೀಟರನ್ನು ಅಳವಡಿಸಲಾಗಿದೆ. ನಗರದ ಈ ನೂತನ ಪ್ರಸಾರ ಕೇಂದ್ರದಲ್ಲಿ 10ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕೆನಡಾದಿಂದ 10ಕಿ.ವ್ಯಾ. ಸಾಮಥ್ರ್ಯದ ಟ್ರಾನ್ಸ್‍ಮೀಟರ್‍ನ್ನು ಅಳವಡಿಸಲಾಗುತ್ತಿದ್ದು, ಸುಮಾರು 100ಕಿ.ಮೀ. ಪ್ರದೇಶದ ವ್ಯಾಪ್ತಿಯವರೆಗೆ ಯಾವುದೇ ಡಾಟಾ ಕೇಬಲ್‍ಗಳ ಸಹಾಯವಿಲ್ಲದೇ ರೇಡಿಯೋವನ್ನು ಆಲಿಸಬಹುದಾಗಿದೆ ಅಲ್ಲದೇ ತಮ್ಮ ಮೊಬೈಲ್‍ನಲ್ಲಿಯೂ ಎಫ್.ಎಂ. ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. ಭದ್ರಾವತಿ ಆಕಾಶವಾಣಿ ವಜ್ರಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಎಫ್.ಎಂ.ಆರಂಭಗೊಳ್ಳುತ್ತಿರುವುದು ಶುಭ ಸಂಕೇತ ಎಂದರು.
ಆಕಾಶವಾಣಿ ನಾಡಿನ ಸುದ್ದಿಗಳನ್ನು ಮಾತ್ರವಲ್ಲದೇ ಮನೋರಂಜನಾ ಮಾಧ್ಯಮವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಜನರ ಸಂಪರ್ಕ ಮಾಧ್ಯಮವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ, ಪ್ರಸಾರ ಮಾಡುವ ಮೂಲಕ ಪರಿಚಿತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ್, ಆಕಾಶವಾಣಿ ವಿಭಾಗೀಯ ಮುಖ್ಯಸ್ಥ ಸಂಜೀವ್, ಉಪನಿರ್ದೇಶಕ ಡಾ.ರಘು, ಕಾರ್ಯಕ್ರಮ ಸಂಯೋಜಕ ಸುಬ್ರಾಯಭಟ್ ಸೇರಿದಂತೆ ಆಕಾಶವಾಣಿಯ ಅಧಿಕಾರಿ-ಸಿಬ್ಬಂಧಿಗಳು, ಗಣ್ಯರು ಉಪಸ್ಥಿತರಿದ್ದರು.