ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಚಿಗುರು ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ, ಗವಟೂರು ಗ್ರಾಮದಲ್ಲಿ “ಜೀವಜಲ – ಪ್ರತಿಯೊಂದು ಹನಿಯೂ ಅತ್ಯಮೂಲ್ಯ“ ಎಂಬ ಜಲ ಜಾಗೃತಿಯ ಬಗೆಗಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಗವಟೂರಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ನೀರಿನ ಸಂರಕ್ಷಣೆಯ ಬಗ್ಗೆ ಘೋಷಣೆಯನ್ನು ಕೂಗಿ ಮೆರವಣಿಗೆ ನಡೆಸಿದರು. ನಂತರ ಅವರ ಗ್ರಾಮೀಣ ಕೃಷಿ ಕಾರ್ಯಾನುಭವಕ್ಕೆ ಸಹಕರಿಸಿದ ಎಲ್ಲಾ ಗ್ರಾಮಸ್ಥರಿಗೆ ಧನ್ಯವಾದ ಹೇಳಲು “ಬಾಂಧವ್ಯದ ಹಣತೆ” ಎಂಬ ಕೃತಜ್ಞತಾ ಅಭಿವ್ಯಕ್ತಿ ಕಾರ್ಯಕ್ರಮವನ್ನು ಗ್ರಾಮದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯಿತಿ ರಿಪ್ಪನ್ಪೇಟೆಯ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಯವರು ಆಗಮಿಸಿದ್ದರು. ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾಗಾರದ ಅನುಭವದ ಬಗ್ಗೆ ವಿದ್ಯಾರ್ಥಿಗಳು ಮತ್ತು ಗ್ರಾಮದ ರೈತರು ಮನದಾಳದ ಮಾತುಗಳನ್ನಾಡಿದರು.
ವಿದ್ಯಾರ್ಥಿನಿಯರು ತಮ್ಮ 3 ತಿಂಗಳ ಗ್ರಾಮೀಣ ಕೃಷಿ ಅನುಭವವನ್ನು ಒಂದು ಸಣ್ಣ ವಿಡಿಯೋ ಮೂಲಕ ಗ್ರಾಮಸ್ಥರಿಗೆ ತೋರಿಸಿ ಅವರ ಮನಗೆದ್ದರು. ಗ್ರಾಮದಲ್ಲಿದ್ದ ಎಲ್ಲಾ ವಿದ್ಯಾರ್ಥಿನಿಯರೂ ಈ ಗ್ರಾಮದಲ್ಲಿ ಕಲಿತಿರುವ ಸಂಗತಿಗಳನ್ನು ಮರೆಯದೆ, ತಮ್ಮ ಉಜ್ವಲ ಭವಿಷ್ಯದ ಕಡೆ ಗಮನ ಹರಿಸಬೇಕೆಂದು ಹಾರೈಸಿ ತುಂಬು ಹೃದಯದಿಂದ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡುವ ಮೂಲಕ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ರಿಪ್ಪನ್ಪೇಟೆ ಪಂಚಾಯಿತಿ ಸದಸ್ಯರಾದ ಶ್ರೀ ಗಣಪತಿ, ಶ್ರೀ ಮಲ್ಲಿಕರ್ಜುನ, ಶ್ರೀ ಪ್ರಕಾಶ್, ದೇವಸ್ಥಾನದ ಕಾರ್ಯದರ್ಶಿಯಾದ ಶ್ರೀ ಚಂದ್ರಶೇಖರ್, ಗ್ರಾಮದ ಹಿರಿಯ ರೈತರಾದ ಶ್ರೀ ದೇವರಾಜ್, ಶ್ರೀ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.