ಸಾಗರ : ಶಕ್ತಿ ಯೋಜನೆ ರಾಜ್ಯದ ಮಹಿಳೆಯರಲ್ಲಿ ಹೊಸಚೈತನ್ಯ ಮೂಡಿಸಿದ್ದು, ಅವರ ಸುಖಕರ ಪ್ರಯಾಣಕ್ಕೆ ಅದ್ಯತೆ ಸಿಕ್ಕಿದೆ ಎಂದು ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬುಧವಾರ ಸಾಗರ-ಮಂತ್ರಾಲಯ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡುತ್ತಿದ್ದರು.
ಸಾಗರ ಡಿಪೋದಲ್ಲಿ 90 ಸರ್ಕಾರಿ ಬಸ್‍ಗಳು ಸಂಚರಿಸುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಹೆಚ್ಚಿನ ಬಸ್‍ಗಳು ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗಿದೆ. ಜೂನ್ 11ರಿಂದ ಶಕ್ತಿ ಯೋಜನೆ ಪ್ರಾರಂಭಗೊಂಡಿದ್ದು ಈತನಕ 62 ಲಕ್ಷ ಮಹಿಳೆಯರು ಯೋಜನೆ ಸದುಪಯೋಗಪಡೆದುಕೊಂಡಿದ್ದು 28.28 ಕೋಟಿ ರೂ. ಆದಾಯ ಬಂದಿದೆ. ಪ್ರತಿದಿನ 13ಸಾವಿರ ಮಹಿಳೆಯರು ಪ್ರಯಾಣಿಸುತ್ತಿದ್ದು, 5.88 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿದೆ. ಶಕ್ತಿ ಯೋಜನೆ ದೇಶದಲ್ಲಿ ಹೊಸ ಅಧ್ಯಾಯ ಬರೆದಿದೆ ಎಂದರು.
ಸಾಗರದ ಷಾಹಿ ಗಾರ್ಮೇಂಟ್ಸ್ ಮಹಿಳೆಯರು ಚುನಾವಣಾ ಪೂರ್ವದಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಷಾಹಿ ಗಾರ್ಮೇಂಟ್ಸ್‍ನಿಂದ ಆನಂದಪುರಂ ರಿಪ್ಪನಪೇಟೆ, ಬಟ್ಟೆಮಲ್ಲಪ್ಪ ಇನ್ನಿತರೆ ಭಾಗಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರ ಜೊತೆಗೆ ಮಂತ್ರಾಲಯಕ್ಕೆ ಬಸ್ ಬೇಕೆಂದು ಪ್ರಯಾಣಿಕರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ವರದಹಳ್ಳಿ-ಮಂತ್ರಾಲಯಕ್ಕೆ ನೂತನ ಪಲ್ಲಕ್ಕಿ ಬಸ್ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ರಾಜಪ್ಪ, ನಗರಸಭೆ ಸದಸ್ಯರಾದ ಮಂಡಗಳಲೆ ಗಣಪತಿ, ಮಧುಮಾಲತಿ, ಲಲಿತಮ್ಮ, ಜಾಕೀರ್, ಎಲ್.ಚಂದ್ರಪ್ಪ, ರವಿಕುಮಾರ್, ಉಮೇಶ್, ಪ್ರಮುಖರಾದ ಅಶೋಕ ಬೇಳೂರು, ಅನಿತಾಕುಮಾರಿ, ಉಷಾ ಎನ್., ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು.