ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ , ಶಿವಮೊಗ್ಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ಬಿ. ಎಸ್ಸಿ. ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಚಿಕ್ಕಜೇನಿ ಯಲ್ಲಿ ಆರಂಭಿಸಲಾಗಿದ್ದು, ಇಂದು ಸಿಹಿಜೇನಿ ತಂಡದವರು “ಶ್ರೀ ಪದ್ಧತಿಯಲ್ಲಿ ಭತ್ತದ ಬೇಸಾಯ” ಎಂಬ ವಿಷಯದ ಮೇಲೆ ಗುಂಪು ಚರ್ಚೆ ಆಯೋಜಿಸಿದ್ದರು. ಬೇಸಾಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯವರಾದ ಡಾ. ಸುಜಾತ ರವರ ನೇತೃತ್ವದಲ್ಲಿ ಈ ಗುಂಪು ಚರ್ಚೆಯನ್ನು ಏರ್ಪಡಿಸಲಾಗಿತ್ತು.
ಇತರೆ ಬೆಳೆಗಳಂತೆ ಅರೆನೀರಾವರಿಯಲ್ಲಿ 4-5 ದಿನಗಳಿಗೊಮ್ಮೆ ನೀರು ಹಾಯಿಸಿ ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಂಡು ಯಶಸ್ವಿಯಾಗಿ ಭತ್ತದ ಬೆಳೆಯನ್ನು ಬೆಳೆಯಬಹುದು. ಈ ರೀತಿ ಭತ್ತ ಬೆಳೆಯುವ ಒಂದು ವಿಶಿಷ್ಟ ಪದ್ಧತಿಯೇ ಮಡಗಾಸ್ಕರ್/ ಶ್ರೀ ಪದ್ಧತಿಯಾಗಿದೆ. ಭತ್ತದ ಬೇಸಾಯದಲ್ಲಿ ಶೇ. 30 ರಷ್ಟು ನೀರಿನ ಬಳಕೆ ಕಡಿಮೆ ಮಾಡಬಹುದು. ಒಂದು ಎಕರೆಗೆ 2 kg ಬೀಜದ ಪ್ರಮಾಣ ಸಾಕಾಗುತ್ತದೆ. ಎಳೆ ಪೈರನ್ನು ( 8-12 ದಿನಗಳಲ್ಲಿ ) ನಾಟಿ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಬೆಳೆಯಬಹುದಾಗಿದೆ. ಒಂದು ಗುಣಿಗೆ ಒಂದೇ ಸಸಿ ನಾಟಿ ಮಾಡುವುದರಿಂದ ಸಸ್ಯಗಳ ನಡುವೆ ಯಾವುದೇ ಪೈಪೋಟಿ ಇಲ್ಲದೆ ಸಮೃದ್ಧವಾಗಿ ಬೆಳೆಯುತ್ತದೆ. ನೀರನ್ನು ನಿಲ್ಲಿಸದೆ ಬೆಳೆಯುವುದರಿಂದ ಪೋಷಕಾಂಶಗಳ ಲಭ್ಯತೆ ಹೆಚ್ಚಾಗಿರುತ್ತದೆ. ಭತ್ತದ ಸಸಿಗಳ ನಡುವೆ 25 ಸೆಂ. ಮೀ. * 25 ಸೆಂ. ಮೀ. ಅಂತರ ಇರುವುದರಿಂದ ಗಾಳಿ, ಬೆಳಕು ಚೆನ್ನಾಗಿರುತ್ತದೆ, ಮತ್ತು ಸಸಿಗಳ ನಡುವೆ ಪೋಷಕಾಂಶ ಸರಿಯಾಗಿ ಪೂರೈಕೆಯಾಗುತ್ತದೆ. ಸಸಿಗಳ ಸಾಂದ್ರತೆ ಕಡಿಮೆ ಇರುವುದರಿಂದ ತೆಂಡೆಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಶೇ.10-15 ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ. ಮೀಥೇನ್ ಅನಿಲ ಉತ್ಪಾದನೆ ಕಡಿಮೆಯಾಗುತ್ತದೆ ಎಂದು ನೆರೆದಿದ್ದ ರೈತರೊಂದಿಗೆ ಚರ್ಚಿಸಲಾಯಿತು.