ಡೆಂಗ್ಯೂ ಜ್ವರ : ರಾಜ್ಯದಲ್ಲಿ ಶಿವಮೊಗ್ಗಕ್ಕೆ 5ನೇ ಸ್ಥಾನ
ಶಿವಮೊಗ್ಗ : ಶಿವಮೊಗ್ಗದಲ್ಲಿ ದಿನೇದಿನೇ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಾ ಇದ್ದು, ರಾಜ್ಯದಲ್ಲಿಯೇ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ 3296 ರಕ್ತ ಮಾದರಿ ಪರೀಕ್ಷಿಸಿದ್ದು, 308 ಪ್ರಕರಣಗಳಿವೆ. ಆಸ್ಪತ್ರೆಯಲ್ಲಿ ದಾಖಲಾದ ಸಕ್ರಿಯ ಪ್ರಕರಣಗಳು 16, ಮರಣ ಪ್ರಕರಣ 01 ದಾಖಲಾಗಿದೆ.

ಡೆಂಗ್ಯೂ ಜ್ವರ ವೈರಸ್‍ನಿಂದ ಉಂಟಾಗುವ ಕಾಯಿಲೆ, ಇದು ಸೋಂಕು ಹೊಂದಿದ ಈಡಿಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. 

ಪ್ರತಿ ಶುಕ್ರವಾರ ಸಾರ್ವಜನಿಕರು ಸ್ವತಃ ತಮ್ಮ ಮನೆಗಳು, ಹಾಘೂ ಸಿಬ್ಬಂದಿ ವರ್ಗದವರು, ಕಚೇರಿಗಳು, ಶಾಲಾ-ಕಾಲೇಜ್‍ಗಳು ಇತ್ಯಾದಿಗಳಲ್ಲಿ ನೀರು ತುಂಬುವ ಪರಿಕರಗಳಾದ ಡ್ರಮ್, ಸಿಮೆಂಟ್ ತೊಟ್ಟಿ, ಬ್ಯಾರೆಲ್ ಇತ್ಯಾದಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವುದರ ಮೂಲಕ ಡೆಂಗ್ಯೂ ಸ್ವರ ನಿಯಂತ್ರಣ ಕ್ರಮದಲ್ಲಿ ಅತಿ ಮುಖ್ಯವಾದ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶ ಮಾಡಬಹುದು.

ಮುಂಜಾಗ್ರತಾ ಕ್ರಮಗಳು :
ಎಲ್ಲಾ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್, ಏರ್‍ಕೂಲರ್ ಇತ್ಯಾದಿಗಳನ್ನು ವಾರಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರ್, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ಡೆಂಗ್ಯೂ ರೋಗದ ಲಕ್ಷಣಗಳು :
• ಇದ್ದಕ್ಕಿದ್ದಂತೆ ತೀವ್ರ ಜ್ವರ
• ವಿಪರೀತ ತಲೆನೋವು
• ಕಣ್ಣುಗಳ ಹಿಂಭಾಗ ನೋವು
• ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು
• ತೀವ್ರ ಸ್ಥಿತಿಯಲ್ಲಿ ಬಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ
• ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ

ಡೆಂಗ್ಯೂ ರೋಗಕ್ಕೆ ಚಿಕಿತ್ಸೆ :
ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಸಾರವಾಗಿ ವೈದ್ಯರಿಂದ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬಹುದು. ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಬೇಕು.

ಡೆಂಗ್ಯೂ ನಿಯಂತ್ರಣ ಕ್ರಮಗಳು :
ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಗ್ಯೂ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್, ಮಣ್ಣಿನ ಮಡಿಕೆ, ಉಪಯೋಗಿಸದ ಒಳಕಲ್ಲು ಮುಂತಾದ ಕಡೆ ಶೇಖರಿಸಿಡುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.

ಡೆಂಗ್ಯೂ ಎಂಬುದು ರೋಗಕಾರಕ ಹರಡುವ ವೈರಲ್ ಕಾಯಿಲೆಯಾಗಿದ್ದು, ಈಡಿಸ್ ಜಾತಿಯ ಹೆಣ್ಣು ಸೊಳ್ಳೆಯಿಂದ ಹರಡುವ ಈ ರೋಗವು ರಾಜ್ಯದಲ್ಲಿ ಈವರೆಗೆ ಶಿವಮೊಗ್ಗ, ಧಾರವಾಡ, ಹಾವೇರಿ, ಬಿಬಿಎಂಪಿ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಹಾಗೂ ಹಾಸನದಲ್ಲಿ ಇಬ್ಬರು, ಒಟ್ಟು 7 ಮಂದಿ ಡೆಂಗ್ಯೂನಿಂದ ಮೃತಪಟ್ಟಿದ್ದಾರೆ. 

====
ಅಡಿಕೆ ಹಾಳೆಯಿಂದ ಡೆಂಗ್ಯೂ :

ಸಾಗರ, ಸೊರಬ, ಶಿವಮೊಗ್ಗ, ಶಿಕಾರಿಪುರ ಈ ನಾಲ್ಕು ತಾಲ್ಲೂಕುಗಳ ಸುತ್ತಾಮುತ್ತಾ ಮಲೆನಾಡು ಭಾಗಗಳಲ್ಲಿ ಅಡಿಕೆಯನ್ನು ಜಾಸ್ತಿ ಬೆಳೆಯುವುದರ ಪರಿಣಾಮವಾಗಿ, ಅಡಿಕೆ ಹಾಳೆಗಳಲ್ಲಿ ಲಾರ್ವಾಗಳು ಹೆಚ್ಚಾಗಿವೆ ಕಾಣಿಸಿಕೊಳ್ಳುತ್ತಿವೆ. ಸಾಗರ ತಾಲ್ಲೂಕಿನ ಒಂದು ಗ್ರಾಮದಲ್ಲಿ ಒಂದು ಅಡಿಕೆ ಹಾಳೆಯಲ್ಲಿಯೇ ಸುಮಾರು 100-200 ಲಾರ್ವಾಗಳು ಕಾಣಿಸಿಕೊಂಡಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.


ಡೆಂಗ್ಯೂ ರಾಜ್ಯಾದ್ಯಂತ ಹೆಚ್ಚಾಗುತ್ತಿದ್ದು, 5ನೇ ಸ್ಥಾನದಲ್ಲಿದೆ. ಪಾಸಿಟಿವ್ ಪ್ರಕರಣ ಇದ್ದಲ್ಲಿ ಸ್ಪೆಷಲ್ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. 15 ದಿನಕ್ಕೊಮ್ಮೆ ರೆಗ್ಯೂಲರ್ ಆಗಿ ಸಮೀಕ್ಷೆ ಮಾಡಲಾಗುತ್ತದೆ. 100 ಮನೆಗಳಷ್ಟು ಮನೆಗಳಿಗೆ ವಾರಕ್ಕೊಮ್ಮೆ ಸರ್ವೆ ಮಾಡಲಾಗುತ್ತದೆ. ಜ್ವರ ಕಂಡು ಬಂದಲ್ಲಿ ಬ್ಲಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತಿದೆ. ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನವನ್ನು ಮಾಡಲಾಗುತ್ತಿದೆ. ಆಗ ಮನೆಯಲ್ಲಿರುವ ನೀರು ಪರಿಕರಗಳಲ್ಲಿ ಸಂಗ್ರಹವಾದ ನೀರನ್ನು ಚೆಲ್ಲಿ, ಅವಶ್ಯಕತೆ ಇದ್ದಲ್ಲಿ ಫಾಗಿಂಗ್ ಔಷಧಿ ಸಿಂಪಡಣೆ ಮಾಡಲಾಗುವುದು.

  • ಡಾ. ಗುಡದಪ್ಪ ಕಸಬಿ,

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ, ಶಿವಮೊಗ್ಗ

ಅಮೃತ ಕೆ ಶಿವಮೊಗ್ಗ

error: Content is protected !!