ಶಿವಮೊಗ್ಗ, ಅಕ್ಟೋಬರ್ 01:
ರಾಜ್ಯ ಸರ್ಕಾರ ನಡೆದಂತೆ ನುಡಿದು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಾಧಿಕಾರದೊಂದಿಗೆ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ತಿಳಿಸಿದರು.
ಮಂಗಳವಾರ ಜಿ.ಪಂ.ಸಭಾAಗಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಬಡ ಮತ್ತು ಮಧ್ಯಮ ವರ್ಗದವರ ಶ್ರೇಯೋಭಿವೃದ್ದಿಗಾಗಿ ಜಾರಿಗೊಳಿಸಲಾದ ಈ ಯೋಜನೆಗಳು ಹೊಸದಾದ್ರೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನ ಪರಿಣಾಮಕಾರಿಯಾಗಿಸಲು ಪ್ರಾಧಿಕಾರ ರಚನೆಯಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರೂ. 52 ಸಾವಿರ ಕೋಟಿ ಹಣವನ್ನು ಈ ಯೋಜನೆಗಳ ಅನುಷ್ಠಾನಕ್ಕಾಗಿ ಮೀಸಲಿಟ್ಟಿದ್ದಾರೆ.
ನೇರವಾಗಿ ಫಲಾನುಭಿವಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರಾಧಿಕಾರದ ಕಚೇರಿ ತೆರೆಯಲಾಗಿದೆ. ತಾಲ್ಲೂಕುಗಳಲ್ಲಿ ಇಓ ಗಳು ಕಚೇರಿ ಮತ್ತು ಸಿಬ್ಬಂದಿ ಹಾಗೂ ಗ್ಯಾರಂಟಿ ಯೋಜನೆಗಳ ಪ್ರಗತಿ ಮಾಹಿತಿಯನ್ನು ಅಧ್ಯಕ್ಷರಿಗೆ ನೀಡಬೇಕು. ಸರ್ಕಾರಿ ಕಾರ್ಯಕ್ರಮಗಳಿಗೆ ತಾಲ್ಲೂಕು ಸಮಿತಿ ಅಧ್ಯಕ್ಷರಿಗೆ ಆಹ್ವಾನ ನೀಡಬೇಕು. ಶಿಕಾರಿಪುರದಲ್ಲಿ ಇನ್ನೂ ಕಚೇರಿ ಲಭ್ಯವಿಲ್ಲ. ಒದಗಿಸಲು ಕ್ರಮ ವಹಿಸಬೇಕೆಂದರು. ಅಧಿಕಾರಿಗಳು ಮತ್ತು ಪ್ರಾಧಿಕಾರದ ಅಧ್ಯಕ್ಷರು, ಪದಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕೆಂದರು.
ಜಿ.ಪಂ ಸಿಇಓ ಎನ್.ಹೇಮಂತ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ 383374 ಕಾರ್ಡುಗಳ ನೋಂದಣಿಯಾಗಿದ್ದು, 1686787 ಸದಸ್ಯರು ಸೌಲಭ್ಯ ಪಡೆಯುತ್ತಿದ್ದಾರೆ. ತಾಂತ್ರಿಕ ಕಾರಣದಿಂದ 8066 ಜನರ ಡಿಬಿಟಿ ಬಾಕಿ ಇದೆ. ಯೋಜನೆ ಪ್ರಾರಂಭದಿAದ 257,09,26,320 ಲಕ್ಷ ವೆಚ್ಚ ಮಾಡಲಾಗಿದೆ ಎಂದರು.
ಶಿಕಾರಿಪುರ ತಾಲ್ಲೂಕು ಸಮಿತಿ ಅಧ್ಯಕ್ಷರಾದ ನಾಗರಾಜ ಗೌಡ ಮಾತನಾಡಿ, ಪಡಿತರ ಚೀಟಿಯಲ್ಲಿ ಹೊರಗಡೆ ಇರುವ ಮಕ್ಕಳ ಹೆಸರು ತೆಗೆದುಹಾಕಿ ತಂದೆ, ತಾಯಿಗೆ ಪ್ರತ್ಯೇಕ ಕಾರ್ಡು ಮಾಡಿಸಲು ಅವಕಾಶ ಮಾಡಿಕೊಡಬೇಕು ಎಂದರು. ಸದಸ್ಯರಾದ ಶಿವಾಜಿ, ಎನ್‌ಪಿಸಿಎಲ್ ಲಿಂಕ್ ತಾಂತ್ರಿಕ ತೊಂದರೆಯಿAದ ಬಾಕಿ ಇರುವವರ ಪಟ್ಟಿಯನ್ನು ನೀಡುವಂತೆ ತಿಳಿಸಿದರು.
ಸದಸ್ಯರಾದ ಶಿವಾನಂದ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ವೇಳೆ ವಯಸ್ಸಾದವರ ಬಯೋಮೆಟ್ರಿಕ್ ಪಡೆಯಲು ಸಾಧ್ಯವಾಗದೇ ಪಡಿತರ ನೀಡಲಾಗುತ್ತಿಲ್ಲ್ಲ. ಇದನ್ನು ಸರಿಪಡಿಸಬೇಕು. ಹಾಗೂ ಬಡವರ ಬಿಪಿಎಲ್ ಕಾರ್ಡ್ನ್ನು ರದ್ದುಪಡಿಸಲಾಗಿದೆ ಇದನ್ನು ಸರಿಪಡಿಸಬೇಕು ಎಂದರು.
ಆಹಾರ ಇಲಾಖೆ ಉಪನಿರ್ದೇಶಕ ಅವಿನ್ ಪ್ರತಿಕ್ರಿಯಿಸಿ, ರೂ.1.20 ಲಕ್ಷ ಆದಾಯ ಮಿತಿ ಮೀರಿದ ಹಾಗೂ ಐಟಿ ಪಾವತಿಸಿದ 2395 ಕಾರ್ಡುದಾರರ ಕಾರ್ಡನ್ನು ರದ್ದುಪಡಿಸಲಾಗಿದೆ. ಬಯೋಮೆಟ್ರಿಕ್ ಬರದೇ ಇದ್ದರೆ ಅವರಿಗೆ ವಿನಾಯಿತಿ ನೀಡಲಾಗುತ್ತದೆ. ಹಾಗೂ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಹಾಕಿ ಬಾಕಿ ಇರುವ 3000ಅರ್ಜಿಗಳನ್ನು ಅ.1 ರಿಂದ 10 ರೊಳಗೆ ವಿಲೇವಾರಿ ಮಾಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಮಾತನಾಡಿ, ಎನ್‌ಪಿಸಿಎಲ್ ಲಿಂಕ್ ಆಗದೇ ಬಾಕಿ ಇರುವ ಫಲಾನುಭವಿಗಳ ಸಮಸ್ಯೆ ಬಗೆಹರಿಸಿ ಸೌಲಭ್ಯ ನೀಡಬೇಕು. ಇಓ ಮತ್ತು ತಹಶೀಲ್ದಾರರು ನ್ಯೂನ್ಯತೆಗಳನ್ನು ಪರಿಹರಿಸಲು ಕ್ರಮ ವಹಿಸಬೇಕು. ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರು ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಹಾಗೂ ಮುಂದಿನ ಸಭೆಯೊಳಗೆ ವಯಸ್ಸಾದವರ ಬಯೋಮೆಟ್ರಿಕ್ ಸಮಸ್ಯೆಯನ್ನು ಗುರುತಿಸಿ ವಿನಾಯಿತಿ ನೀಡಿ ಅವರು ಪಡಿತರ ಪಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಗೃಹಲಕ್ಷಿö್ಮಯಲ್ಲೂ ಎನ್‌ಪಿಸಿಎಲ್ ತಾಂತ್ರಿಕ ಕಾರಣದಿಂದ ಹಣ ಜಮೆಯಾಗದ ಫಲಾನುಭವಿಗಳ ಸಂಖ್ಯೆಯನ್ನು ತೆಗೆದುಕೊಂಡು ಸರಿಪಡಿಸಬೇಕು. 15 ದಿನಗಳ ಒಳಗೆ ಈ ಕೆಲಸ ಆಗಬೇಕು. ಪ್ರಾಧಿಕಾರದ ಜಿಲ್ಲಾಧ್ಯಕ್ಷರು ಪ್ರತಿದಿನ ಅನುಸರಣೆ ಕೈಗೊಳ್ಳಬೇಕು ಎಂದರು. ಹಾಗೂ ಮರಣ ಹೊಂದಿದ ಫಲಾನುಭವಿಗಳಿಗೆ ಹಣ ಹೋಗದಂತೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಮತ್ತು ಸಿಡಿಪಿಓ ಗಳಿಂದ ಮರಣ ಹೊಂದಿದವರ ಮಾಹಿತಿ ಪಡೆದು ಕ್ರಮ ವಹಿಸಬೇಕು ಎಂದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 470458 ಕುಟುಂಬಗಳು ಸೌಲಭ್ಯ ಪಡೆಯುತ್ತಿದ್ದು, ಯೋಜನೆ ಜಾರಿಯಾದ ಮೇಲೆ ಸರಾಸರಿ ಶೇ.18 ರಷ್ಟು ಬಳಕೆ ಹೆಚ್ಚಿದೆ ಎಂದರು.
ಶಿಕಾರಿಪುರ ತಾಲ್ಲೂಕು ಸಮಿತಿ ಅಧ್ಯಕ್ಷರಾದ ನಾಗರಾಜಗೌಡ ಮಾತನಾಡಿ, ಶಿಕಾರಿಪುರ ತಾಲ್ಲೂಕಿನಲ್ಲಿ ಶಕ್ತಿ ಯೋಜನೆಯನ್ನು ಇನ್ನೂ ಬಲಪಡಿಸಬೇಕಿದೆ. ಹಳೆಯ ಬಸ್‌ಗಳನ್ನು ತಾಲ್ಲೂಕಿಗೆ ನೀಡಲಾಗಿದೆ. ಹಳ್ಳಿಗಳಿಗೆ ಸರಿಯಾದ ವೇಳೆಗೆ ಬಸ್‌ಗಳು ಬರುತ್ತಿಲ್ಲವೆಂಬ ದೂರು ಇದೆ. ಖಾಸಗಿ ಬಸ್‌ಗಳ ಲಾಬಿ ಹೆಚ್ಚಿದ್ದು, ಕೆಎಸ್‌ಆರ್‌ಟಿಸಿ ಬಸ್ ಹೆಚ್ಚುವರಿಯಾಗಿ ಬೇಕಿದೆ ಎಂದರು.
ಹೊಸನಗರ ತಾಲ್ಲೂಕು ಸಮಿತಿ ಅಧ್ಯಕ್ಷರು ಮಾತನಾಡಿ, ಹೊಸನಗರದಲ್ಲಿ ಶಕ್ತಿ ಯೋಜನೆಯಿಂದ ಏನು ಉಪಯೋಗ ಆಗುತ್ತಿಲ್ಲ. ಇಲ್ಲಿಗೆ ಸರ್ಕಾರಿ ಬಸ್ ಸೇವೆ ವಿಸ್ತರಿಸಬೇಕೆಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸೂರಜ್ ಎಂ.ಎನ್.ಹೆಗಡೆ ಮಾತನಾಡಿ, ಶಕ್ತಿ ಯೋಜನೆ ಜಾರಿಯಾದಾಗಿನಿಂದ ಕೆಎಸ್‌ಆರ್‌ಟಿಸಿ ಆದಾಯದಲ್ಲಿ ಹೆಚ್ಚಳವಾಗಿದೆ. ಪ್ರವಾಸೋದ್ಯಮ ಮತ್ತು ಉದ್ಯೋಗ ಕ್ಷೇತ್ರ ಉತ್ತೇಜನಗೊಂಡಿದೆ ಎಂದರು.
ಯುವನಿಧಿ ಯೋಜನೆಯಡಿ ಈವರೆಗೆ ಒಟ್ಟು 2836 ಫಲಾನುಭವಿಗಳಿಗೆ ರೂ.32856000 ಕೋಟಿ ವೆಚ್ಚ ಮಾಡಲಾಗಿದೆ ಎಂದು ಜಿ.ಪಂ ಸಿಇಓ ತಿಳಿಸಿದರು.
ಪ್ರಾಧಿಕಾರದ ರಾಜ್ಯ ಅಧ್ಯಕ್ಷರು ಮಾತನಾಡಿ, ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಜಾರಿಯಾಗಿ 6 ತಿಂಗಳಾದರೂ ಕೌಶಲ್ಯಾಭಿವೃದ್ದಿ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಒಂದೂ ಕೌಶಲ್ಯಾಭಿವೃದ್ದಿ ತರಬೇತಿ ನೀಡಿಲ್ಲ. ಭತ್ಯೆ ಪಡೆದವರಿಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡಿ ಅವರ ಮುಂದಿನ ಜೀವನಕ್ಕೆ ಸಹಕಾರಿಯಾಗಬೇಕು. ಉದ್ಯೋಗಾಧಿಕಾರಿ ಮತ್ತು ಕೌಶಲ್ಯಾಭಿವೃದ್ದಿ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಯೋಜನೆಯ ಧ್ಯೇಯ ಸಾಕಾರಗೊಂಡಿಲ್ಲ ಎಂದು ಅಸಮಾಧಾಯ ವ್ಯಕ್ತಪಡಿಸಿ, ತರಬೇತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹಾಗೂ ಈ ಕುರಿತು ವರದಿ ನೀಡುವಂತೆ ಸಿಇಓ ಅವರಿಗೆ ಸೂಚನೆ ನೀಡಿದರು.
ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಸಂಬAಧಿಸಿದAತೆ ಇರುವ ತೊಂದರೆಗಳು, ಸಮಸ್ಯೆಗಳ ಕುರಿತು ಮಾಹಿತಿಯನ್ನು ತಾಲ್ಲೂಕು ಮತ್ತು ಜಿಲ್ಲಾ ಅಧ್ಯಕ್ಷರಿಗೆ ಅಧಿಕಾರಿಗಳು ನಿಯಮಿತವಾಗಿ ನೀಡಬೇಕು. ಹಾಗೂ ಅವರು ಸದರಿ ಸಮಸ್ಯೆಗಳನ್ನು ಪರಿಹರಿಸಲು ಸಹಕಾರ ನೀಡಬೇಕು.
ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮಾತು..
- ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿಯ ಮಮತಾ ಗಜೇಂದ್ರ ಮಾತನಾಡಿ, ಅನ್ನಭಾಗ್ಯ ಯೋಜನೆಯಿಂದ ತಮ್ಮ ಕುಟುಂಬ ನಡೆಯುತ್ತಿದ್ದು, ಐದು ಗ್ಯಾರಂಟಿ ಯೋಜನೆಗಳು ಜೀವನ ಸುಧಾರಣೆ ಮಾಡಿವೆ. ಯೋಜನೆಗಳನ್ನು ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದರು.
- ಶಿವಮೊಗ್ಗದ ತಬಸ್ಸುಮ್ ಮಾತನಾಡಿ, ನಾನೊಬ್ಬ ಏಕಪೋಷಕಿ ಆಗಿದ್ದು ಅನ್ನಭಾಗ್ಯ ಯೋಜನೆಯಿಂದ 15 ಕೆಜಿ ಅಕ್ಕಿ, ರೂ.510 ಬರುತ್ತಿದ್ದು, ನನ್ನ ಕುಟುಂಬದ ಹೊಟ್ಟೆ ತುಂಬುತ್ತಿದೆ. ಮಕ್ಕಳನ್ನು ಓದಿಸಲು ಸಾಧ್ಯವಾಗಿದೆ. ನೇರವಾಗಿ ನನಗೆ ಹಣ ಬರುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜೀವನದಲ್ಲಿ ನೆಮ್ಮದಿ ಮತ್ತು ತೃಪ್ತಿ ಸಿಕ್ಕಿದೆ ಎಂದರು.
- ಹೊಸನಗರದ ಶರ್ಮಿಳಾ ಮಾತನಾಡಿ, ಗೃಹಲಕ್ಷಿö್ಮಯ ರೂ.2000, ಅನ್ನಭಾಗ್ಯ, ಶಕ್ತಿ ಮತ್ತು ಗೃಹಜ್ಯೋತಿಯಿಂದ ನನ್ನಂತ ಬಡವರ ಕುಟುಂಬಕ್ಕೆ ಬಹಳ ಸಹಾಯ ಆಗಿದೆ ಎಂದರು
- ಬಿಕ್ಕೋನಹಳ್ಳಿಯ ಮೀನಾಕ್ಷಿ ಮಾತನಾಡಿ, ಗೃಹಲಕ್ಷ್ಮಿ ಶಕ್ತಿ ಇತರೆ ಗ್ಯಾರಂಟಿ ಯೋಜನೆಗಳಿಂದಾಗಿ ಈಗ ನಾವು ಮನೆಯ ಗಂಡಸರ ಹತ್ತಿರ ಪದೇ ಪದೇ ಹಣ ಕೇಳದೆ ಸ್ವಾವಲಂಬನೆಯಿAದ ಮಕ್ಕಳ ಶುಲ್ಕ, ಆಸ್ಪತ್ರೆ ಇತರೆ ಖರ್ಚು ತೂಗಿಸುತ್ತೇನೆ ಎಂದರು.
- ಬೆಳಲಕಟ್ಟೆಯ ಗಿರೀಶ್ ಮಾತನಾಡಿ ನಾಲ್ಕು ಯೋಜನೆಗಳ ಫಲವನ್ನು ತಾವು ಪಡೆಯುತ್ತಿದ್ದು ತುಂಬಾ ಅನುಕೂಲವಾಗಿದೆ. ಜೀವನ ಮಟ್ಟ ಸುಧಾರಿಸುತ್ತಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಸೂಡಾ ಅಧ್ಯಕ್ಷರಾದ ಸುಂದರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿ.ಪಂ.ಸಿಇಓ ಎನ್.ಹೇಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ತಾಲ್ಲೂಕು ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಫಲಾನುಭವಿಗಳು ಹಾಜರಿದ್ದರು.