ಶಿವಮೊಗ್ಗ, ಜ. 25: ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ, ರಸ್ತೆ, ಬೀದಿ ದೀಪ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ದಿನಾಂಕ ನಿಗದಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಗೋವಿಂದಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಶ್ರಯ ವಸತಿ ಸಮುಚ್ಚಯವನ್ನು ಮಹಾನಗರಪಾಲಿಕೆ ಆಯುಕ್ತರು ಮತ್ತು ಸಂಬಧಿಸಿದ ಇಲಾಖೆಯ ಇಂಜಿನಿಯರ್ ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿ, ಇಂಜಿನಿಯರ್ ಗಳಿಗೆ ಸೂಕ್ತಸಲಹೆ- ಸೂಚನೆ ನೀಡಿದರು.
ಮಹಾನಗರಪಾಲಿಕೆಯ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಗೋವಿಂದಾಪುರದಲ್ಲಿ ಒಟ್ಟು ರೂ.260 ಕೋಟಿ ಅನುದಾನದಲ್ಲಿ 3000 ಮನೆಗಳನ್ನು ನಿರ್ಮಿಸಲಾಗುತ್ತಿದೆ.
ಈಗಾಗಲೇ 624 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ 652 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಮೂಲಭೂತ ಸೌಕರ್ಯಗಳ ಕೆಲಸ ನಡೆಯುತ್ತಿದೆ. ಇದು ಪೂರ್ಣಗೊಂಡ ತಕ್ಷಣ ಫಲಾನುಭವಿಗಳಿಗೆ ಹಂಚಿಕೆ ಮಾಡಲು ದಿನಾಂಕ ನಿಗದಿಗೊಳಿಸಲಾಗುವುದು.
ಈಗಾಗಲೇ ಹಂಚಿಕೆ ಮಾಡಿರುವ ಮನೆಗಳಿಗೆ
ತಾತ್ಕಾಲಿಕ ನೀರು, ವಿದ್ಯುತ್ ನೀಡಲಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಸಂಪರ್ಕ ನೀಡಲು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ತಿಳಿಸಲಾಗಿದೆ. ಶಾಶ್ವತ ವಿದ್ಯುತ್ ಸಂಪರ್ಕ ನೀಡಲು ರೂ. ೧೫ ರಿಂದ ೧೬ ಕೋಟಿ ಅವಶ್ಯಕತೆ ಇದ್ದು ಅಧಿಕಾರಿಗಳೊಂದಿಗೆ ಮಾತನಾಡಿ ಸರ್ಕಾರದ ಗಮನಕ್ಕೆ ತರಲಾಗಿದೆ. ವಸತಿ ಸಚಿವರೊಂದಿಗೂ ಮಾತನಾಡುತ್ತೇನೆ.
ಇನ್ನು 20 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಂಡ ಮನೆಗಳಿಗೆ ತಾತ್ಕಾಲಿಕ ನೀರು, ವಿದ್ಯುತ್, ಹಾಗೂ ರಸ್ತೆ, ಚರಂಡಿ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ.
ಮೂಲಭೂತ ಸೌಕರ್ಯಗಳು ಆದ ತಕ್ಷಣ ವಸತಿ ಹಂಚಿಕೆಗೆ ದಿನಾಂಕ ನಿಗದಿಗೊಳಿಸಲಾಗುವುದು.
ರಸ್ತೆ, ಚರಂಡಿ, ಬೀದಿ ದೀಪ, ಬಸ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಇದೇ ವೇಳೆ ಶಾಸಕರು ಇಲ್ಲಿನ ನಿವಾಸಿಗಳಿಂದ ಮೂಲಭೂತ ಸೌಕರ್ಯಗಳ ಕುರಿತಾದ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು, ಮಹಾನಗರಪಾಲಿಕೆ ಆಯುಕ್ತ ರಾದ ಕವಿತಾ ಯೋಗಪ್ಪನವರ್, ಇಂಜಿನಿಯರ್ ಗಳು, ಅಧಿಕಾರಿಗಳು, ನಿವಾಸಿಗಳು ಹಾಜರಿದ್ದರು.
