
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅಭಿಪ್ರಾಯ
ಶಿವಮೊಗ್ಗ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗೋತ್ಸವವನ್ನು ಹಮ್ಮೀಕೊಳ್ಳಲಾಗಿತ್ತು.
ಖ್ಯಾತ ಮಕ್ಕಳ ತಜ್ನರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಹೂಕುಂಡಕ್ಕೆ ನೀರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಭಾರತೀಯ ಇತಿಹಾಸದಲ್ಲಿ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸ ಇದೆ. ಹಿಂದೆ ಋಷಿ ಮುನಿಗಳು ಹಾಗೂ ತಪಸ್ವಿಗಳು ಯಾವುದೇ ಕಾಯಿಲೆ ಇಲ್ಲದೇ ಯೋಗದ ಮುಖಾಂತರ ಮಾತ್ರ ಗುಣಮಾಡಿಕೊಂಡು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದರು.
ಯೋಗಾಸನ ಬುದ್ದಿ, ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಒಂದು ದಿವ್ಯ ಶಕ್ತಿಯನ್ನು ಹೊಂದಿದೆ, ಔಷಧಿಗಳು ಕೇವಲ ಶೇ. 20 ರಷ್ಟು ದೇಹದಲ್ಲಿ ಕೆಲಸ ಮಾಡಿದರೆ ಯೋಗವು ಶೇ 100 ರಷ್ಟು ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ, ಅಲ್ಲದೆ ಯೋಗದಿಂದ ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಆಯುಷ ಅಧಿಕಾರಿ ಡಾ. ಲಿಂಗರಾಜ್ ಮಾತನಾಡಿ, ಜೂನ್ 10 ರಿಂದ 20 ನೇ ತಾರೀಕಿನವರೆಗೆ ಪೂರ್ವಭಾವಿ ಕಾರ್ಯಕ್ರಮ ಯೋಗೋತ್ಸವವನ್ನು ಇಂದು ಆಚರಿಸುತ್ತಿದ್ದು ಈ ವಷದ ಧ್ಯೇಯವಾಕ್ಯ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬುದಾಗಿದೆ. ಆಯುಷ್ ಇಲಾಖೆಯ ಮಹೇಂದ್ರ ಬಿ.ಆರ್ ಮತ್ತು ಕು. ಮೋನಿಕಾ ಸಿ.ಎಸ್. ಕೆಲವು ಆಸನಗಳನ್ನು ಮಾಡಿ ತೋರಿಸಿ ಮಕ್ಕಳಿಂದ ಮಾಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲೆಯ ಮುಖ್ಯ ಆಯುಕ್ತರಾದ ಕೆ.ಪಿ.ಬಿಂದುಕುಮಾ ಮಾತನಾಡಿ, ಪ್ರತಿ ನಿತ್ಯವೂ ಯೋಗ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಸ್ವಾಗತಿಸಿದರು. ಡಾ.ಅನಿಲ್ ಕುಮಾರ ವಂದಿಸಿದರು. ಸಭಾ ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಡಾಯಸ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ನಿರ್ವಹಿಸಿದರು. ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ ಜಂಟಿ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ಡಾ. ಸುರೇಂದ್ರ, ಆಯುಷ್ ಇಲಾಖೆಯ ಶಿಬ್ಬಂದಿ ವರ್ಗದವರು, ವಿಜಯಕುಮಾರ, ಹೆಚ್.ಶಿವಶಂಕರ, ಗೀತಾ ಚಿಕ್ಕಮಠ, ರಾಜೇಶ ಅವಲಕ್ಕಿ, ಕೃಷ್ಣಸ್ವಾಮಿ, ಮಲ್ಲಿಕಾರ್ಜುನ ಮತ್ತಿತರ ಹಿರಿಯರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ ಡಾ.ಧನಂಜಯ ಸರ್ಜಿ ಅವರನ್ನು ಗೌರವಿಸಲಾಯಿತು.