25 ವರ್ಷಗಳ ನಿರಂತರ ರೈತಪರ ಸೇವಾ ಕೊಡುಗೆಯನ್ನು ಪೂರೈಸಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರವು 2025ಕ್ಕೆ ತನ್ನ 25 ವರ್ಷಗಳ ನಿರಂತರ ರೈತಪರ ಸೇವಾ ಕೊಡುಗೆಯನ್ನು ಪೂರೈಸಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ, ನವಿಲೆ ಆವರಣದಲ್ಲಿ ದಿನಾಂಕ 26 ರಿಂದ 28ನೇ ಏಪ್ರಿಲ್ 2025 ರವರೆಗೆ ‘ಹಣ್ಣು ಮತ್ತು ಆಹಾರ ಮೇಳ’ವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಈ ಮೇಳ ಜರುಗಲಿದ್ದು, ಈ ಮೇಳದಲ್ಲಿ ವೈವಿಧ್ಯಮಯ ಮಾವಿನ ಹಣ್ಣುಗಳು, ಹಲಸು, ಬಾಳೆ ಹಾಗೂ ವಿವಿಧ ಜಾತಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅದರ ರುಚಿ ಚಪ್ಪರಿಸಿದವರೇ ಹೆಚ್ಚು. ಒಳ್ಳೆಯ ತಳಿಯ ಮಾವು ಹುಡುಕಲು ಪರದಾಡಬೇಕಾಗುತ್ತದೆ. ಈ ಮೇಳದಲ್ಲಿ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಲಿದ್ದು, ಒಂದೇ ಸೂರಿನಡಿ 30 ವಿಶಿಷ್ಟ ಮಾವಿನ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಕೇಸರ್, ಮಲಗೋವಾ, ಮಲ್ಲಿಕಾ, ನೀಲಂ, ರಸಪುರಿ, ಸಿಂಧೂರ, ತೋತಾಪುರಿ, ಅಪ್ಪೆ ಮಿಡಿ ಲಭ್ಯವಿದೆ. ಅಲ್ಲದೆ, 20 ವಿವಿಧ ಹಲಸಿನ ತಳಿಗಳಾದ ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ, ಕೆಂಪು, ಚಂದ್ರ ಹಲಸು, ಹೆಬ್ಬಾಳ ಸೇರಿದಂತೆ ಸಖರಾಯಪಟ್ಟಣದ ಸ್ಥಳಿಯ ವಿಶೇಷ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವಿವಿಧ ತಳಿಯ ಬಾಳೆ ಹಣ್ಣುಗಳು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಬಿಜಾಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ಥಾಮ್ಸನ್ ಸೀಡ್‍ಲೆಸ್, ಶರದ್, ಕೃಷ್ಣ ಶರದ್ ಇತ್ಯಾದಿ ತಳಿಯ ರುಚಿಕರ ದ್ರಾಕ್ಷಿ ಹಣ್ಣುಗಳು ಆಗಮಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಭಾಗದಿಂದ ಬೆಂಗಳೂರು ಬ್ಲೂ ದ್ರಾಕ್ಷಿ ಬರಲಿದೆ. ಹೀಗಾಗಿ ದ್ರಾಕ್ಷಿ ಪ್ರಿಯರಿಗೆ ಬಗೆ ಬಗೆಯ ಹಣ್ಣುಗಳು ಲಭಿಸಲಿವೆ. ಅಲ್ಲದೆ, ಗೆಡ್ಡೆ-ಗೆಣಸು ತಳಿಗಳ ಪ್ರದರ್ಶನ ಹಾಗೂ ಬೇಲದ ಹಣ್ಣು, ಅಂಜೂರ ಹಣ್ಣು, ಬಿಜಾಪುರದ ನಿಂಬೆ ಹಣ್ಣು, ಮತ್ತು ಇವುಗಳ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ ಮತ್ತು ರೈತರು ತಾವೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಆಹಾರದ ಮೇಳದ ಅಂಗವಾಗಿ ಬೇಸಿಗೆಯ ಸವಿರುಚಿಗಳಾದ ಮಾವಿನ ಪಾನೀಯ, ಹಲಸಿನ ಹಣ್ಣಿನ ಜೂಸ್, ಜಾಮ್, ಬಾರ್, ಬಾಳೆ ಕಾಯಿ ಚಿಪ್ಸ್, ರುಚಿ-ರುಚಿಯಾದ ದಾವಣಗೆರೆ ಬೆಣ್ಣೆದೋಸೆ, ಮೇಲುಕೋಟೆ ಪುಳಿಯೋಗರೆ, ಹುಬ್ಬಳ್ಳಿ ಮಿರ್ಚಿ ಮಂಡಕ್ಕಿ, ಮಾವಿನ ಉಪ್ಪಿನಕಾಯಿ, ಮಲೆನಾಡು ವಿಶಿಷ್ಟ ಸಿಹಿ ಖಾದ್ಯ ತೊಡೆದೇವು, ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ಸ್ಥಳೀಯ ವಿಶಿಷ್ಟ ಖಾದ್ಯಗಳು, ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು ಈ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
ಈ ಮೇಳದಲ್ಲಿ ಹಣ್ಣಿನ ಸಸಿಗಳ ನರ್ಸರಿ, ಅಲಂಕಾರಿಕ ಗಿಡಗಳು, ತರಕಾರಿ ಮತ್ತು ಹೂವಿನ ಬೀಜಗಳು, ತಾರಸಿ / ಕೈತೋಟದ ಪರಿಕರಗಳ ಮಾರಾಟ ಮಳಿಗೆಗಳು, ಅಲಂಕಾರಿಕ ಮೀನುಗಳು, ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಒಳಗೊಂಡ 150 ಕ್ಕೂ ಅಧಿಕ ಮಳಿಗೆಗಳನ್ನು ಸ್ತಾಪಿಸಲಾಗುತ್ತಿದೆ. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ರುಚಿಕರ ಹಣ್ಣು ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಈ ಮೇಳದ ಉದ್ದೇಶ. ಮುಖ್ಯವಾಗಿ ಈ ಮೇಳವು ರೈತರು, ವ್ಯಾಪಾರಿಗಳು, ರಫ್ತುದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಇನ್ನಿತರ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಆಗಲು, ಸಂಪರ್ಕ ಹೊಂದಲು ಒಳ್ಳೆಯ ವೇದಿಕೆ ಆಗಲಿದೆ.
ಅಲ್ಲದೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಆವರಣದ ಪ್ರಾತ್ಯಕ್ಷಿಕೆಯ ತಾಕುಗಳಾದ ಸಮಗ್ರ ಕೃಷಿ ಪದ್ದತಿ, ಜೇನು ಸಾಕಾಣಿಕೆ ಘಟಕ, ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ, ಜಲ ಕೃಷಿ (ಹೈಡ್ರೋಫೋನಿಕ್ಸ್), ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕೊಳವೆ ಬಾವಿ ಜಲ ಮರುಪೂರಣ ಮಾದರಿ, ತಾರಸಿ ತೋಟ, ಅಲಂಕಾರಿಕ ಮೀನು ಘಟಕಗಳನ್ನು ಸಂದರ್ಶಿಸಿ, ಮಾಹಿತಿ ಪಡೆಯುವಂತೆ ಕರೆ ನೀಡುತ್ತಾ, ರೈತರು, ರೈತಮಹಿಳೆಯರು, ಯುವ ವ್ಯವಸಾಯಗಾರರು, ಉದ್ದಿಮೆದಾರರು, ಗ್ರಾಹಕರು, ವಿದ್ಯಾರ್ಥಿಗಳು, ಯುವಕರು, ಪೋಷಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಭಾಗವಹಿಸಿ, ಉತ್ಪನ್ನಗಳನ್ನು ಖರೀದಿಸಿ, ಸ್ವಾದಿಸಿ, ಆನಂದಿಸಿ.