ಶಿವಮೊಗ,ಜು.೩೧: ಶಿವಮೊಗ್ಗದ ಎನ್‌ಯು ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ ಕಿಡ್ನಿ ಟ್ರಾನ್ಸ್ ಪ್ಯಾಂಟ್ (ಮೂತ್ರಪಿಂಡ ಕಸಿ) ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ಪ್ರವೀಣ್ ಮಾಳವದೆ ಹೇಳಿದರು.
ಅವರು ಇಂದು ಮಾಚೇನಹಳ್ಳಿಯಲ್ಲಿರುವ ಎನ್‌ಯು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ ಕಿಡ್ನಿ ಟ್ರಾನ್ಸ್ ಪ್ಯಾಂಟ್ (ಮೂತ್ರಪಿಂಡ ಕಸಿ) ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಮಹತ್ತರ ಸಾಧನೆಯನ್ನು ಮಾಡಿದ್ದೇವೆ ಇದು ಮಲೆನಾಡು ಭಾಗದಲ್ಲಿಯೇ ಪ್ರಥಮವಾಗಿದ್ದು, ಮೂತ್ರ ಪಿಂಡ ಕಾಯಿಲೆಗಳ ರೋಗಿಗಳಿಗೆ ಭರವಸೆ ಮೂಡಿಸಿದೆ ಎಂದರು.
೬೫ ವರ್ಷ ವಯಸ್ಸಿನ ಅಜ್ಜಿ ೨೧ ವರ್ಷದ ಮೊಮ್ಮಗಳಿಗೆ ತನ್ನ ಮೂತ್ರಪಿಂಡವನ್ನು ದಾನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎನ್‌ಯು ಆಸ್ಪತ್ರೆಯ ಹೆಗ್ಗಳಿಕೆಯೆಂದರೆ ದಾನಿಯ ಹಾಗೂ ರೋಗಿಯ ರಕ್ತದ ಗುಂಪು ಬೇರೆ ಬೇರೆಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿ ನವೀನ ತಂತ್ರಜ್ಞಾನಗಳನ್ನು ಬಳಸಿ ಚಿಕಿತ್ಸೆಯನ್ನು ಎನ್‌ಯು ಆಸ್ಪತ್ರೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದರು.
ಯುವತಿಯು (ರೋಗಿ) ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಳು. ಮೇ ೨೦೨೩ರಲ್ಲಿ ಆಕೆಗೆ ಕಿಡ್ನಿ ಸಮಸ್ಯೆ ಇರುವುದನ್ನು ವೈದ್ಯರು ದೃಢಪಡಿಸಿದ್ದರು. ಆಕೆಗೆ ೨೦೨೩ರ ಡಿಸೆಂಬರ್ ನಲ್ಲಿ ಡಯಾಲಿಸಿಸ್ ಪ್ರಕ್ರಿಯೆಯನ್ನು ವೈದ್ಯರು ಪ್ರಾರಂಭಿಸಿದ್ದಾರೆ. ರೋಗಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲಾಗುತ್ತಿತ್ತು ಇದನ್ನು ಮನಗಂಡ ಆಕೆಯ ಅಜ್ಜಿ ಕಿಡ್ನಿ ನೀಡಲು ಮುಂದಾದರು. ಅಜ್ಜಿ ಹಾಗೂ ಮೊಮ್ಮಗಳು ಇಬ್ಬರೂ ವಿಭಿನ್ನ ರಕ್ತದ ಗುಂಪನ್ನು ಹೊಂದಿದ್ದರೂ ಕೂಡ ಹಲವಾರು ಸವಾಲುಗಳ ನಡುವೆಯೇ ಚಿಕಿತ್ಸೆಯನ್ನು ೨೦೨೪ರ ಏಪ್ರಿಲ್‌ನಲ್ಲಿ ಕೈಗೊಳ್ಳಲಾಯಿತು ಎಂದರು.
ಈ ಶಸ್ತç ಚಿಕಿತ್ಸೆಗೆ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಪ್ರದೀಪ್ ಎಂ.ಜಿ., ಡಾ.ಕಾರ್ತಿಕ್, ಡಾ.ಅನುಷಾ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಗಳು, ಶಸ್ತç ಚಿಕಿತ್ಸೆಯ ನಂತರ ಇಬ್ಬರು ಕೂಡ ಆರೋಗ್ಯವಾಗಿದ್ದು, ಮೂತ್ರಪಿಂಡವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಶಸ್ತçಚಿಕಿತ್ಸೆಯನ್ನು ಹೊರತುಪಡಿಸಿದರೆ ಈ ಪ್ರಕರಣ ಒಂದು ಕೌಟುಂಬಿಕ ಪ್ರೀತಿ, ಪರಸ್ಪರ ವಿಶ್ವಾಸವನ್ನು ಮೂಡಿಸುತ್ತಿದೆ. ದಾನಿಗಳನ್ನು ಕೂಡ ಪ್ರೇರೆಪಿಸುತ್ತದೆ. ಎಷ್ಟೋ ಜನರು ರಕ್ತದ ಗುಂಪು ಬೇರೆಯಾದರೇ ದಾನಮಾಡಲು ಬರುವುದಿಲ್ಲ ಎಂದು ತಿಳಿದುಕೊಂಡಿದ್ದರು. ಆದರೆ ಈಗ ಅದು ಬದಲಾಗಿದೆ. ಹೊಸ ತಂತ್ರಜ್ಞಾನಗಳು ಹಲವು ಜೀವಗಳನ್ನು ಉಳಿಸುತ್ತವೆ ಎಂದರು.
ಹೆಚ್ಚಿನ ಮಾಹಿತಿಗಾಗಿ ೬೩೬೪೪೦೯೬೫೧, ೬೩೬೪೪೬೬೨೪೦ ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅರವಳಿಕೆ ತಜ್ಞ ಡಾ.ಕಾರ್ತಿಕ್ ಶಸ್ತç ಚಿಕಿತ್ಸಾ ತಜ್ಞ ಡಾ.ಪ್ರದೀಪ್, ಡಾ.ಅನುಷಾ, ಮೃಣಾಲ್, ಕಾವ್ಯ ಇದ್ದರು.
