ಶಿವಮೊಗ್ಗ,ಡಿ.26: 2024 ಮಾರ್ಚ್ 31ರೊಳಗೆ ಶುದ್ಧ ತುಂಗ ನದಿಯ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಎಲ್ಲ ಅಧಿಕಾರಿಗಳು ಮತ್ತು ಪರಿಸರ ತಜ್ಞರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದೇವೆ ಎಂದು ಶಾಸಕ ಚೆನ್ನಬಸಪ್ಪ ಹೇಳಿದ್ದಾರೆ.
ಅವರು ಇಂದು ತಮ್ಮ ಕರ್ತವ್ಯ ಭವನದಲ್ಲಿ ಶುದ್ಧ ತುಂಗಾ ನದಿಯ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಚೆನ್ನಬಸಪ್ಪ ತುಂಗಾ ನದಿ ಜಿಲ್ಲೆಯ ಜೀವನಾಡಿಯಾಗಿದ್ದು, ಇಡೀ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದೆ. ಇತ್ತೀಚೆಗೆ ತುಂಗೆಗೆ ಮಲೀನ ನೀರು ಸೇರುತ್ತಿದೆ. ನೀರಿನಲ್ಲಿ ಕುಡಿಯಲು ಯೋಗ್ಯವಲ್ಲದ ಅಂಶಗಳು ಸೇರಿಕೊಂಡಿದೆ. ದೇಹಕ್ಕೆ ಹಾನಿಕಾರಕವಾದ ಅಲ್ಯೂಮಿನಿಯಂ ಅಂಶವಿದೆ ಎಂಬ ವರದಿಯ ಹಿನ್ನಲೆಯಲ್ಲಿ ವಿಧಾನಸಭೆಯಲೂ ಕೂಡ ಕುಲಂಕುಷವಾಗಿ ಶುದ್ಧ ತುಂಗೆ ಮಲೀನವಾಗುತ್ತಿರುವ ಬಗ್ಗೆ ಸದನದ ಗಮನ ಸೆಳೆಯಲಾಗಿತ್ತು.
ಆ ಬಳಿಕ ಸರ್ಕಾರ ಸದ್ಯಕ್ಕೆ ತುಂಗೆಯ ಶುದ್ಧಿಕರಣಕ್ಕೆ ಕೆಲವೊಂದು ಯೋಜನೆಗಳ ಅನುಷ್ಠಾನಕ್ಕೆ ತಾತ್ಕಾಲಿಕವಾಗಿ 40 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಕಳೆದ 30 ವರ್ಷಗಳಿಂದ ಕುಡಿಯುವ ನೀರಿಗೆ ಮತ್ತು ಯುಜಿಡಿಗಾಗಿ ಅನೇಕ ಯೋಜನೆಗಳನ್ನು ಮಾಡುತ್ತ ಬಂದಿದ್ದೇವೆ. ನಗರ ಬೆಳೆದಿದೆ. ಹಳೆಯ ಯುಜಿಡಿ ಹಾಳಾಗಿದೆ. ಇನ್ನೂ ಶೇ.20ರಷ್ಟು ಯುಜಿಡಿ ಸಂಪರ್ಕ ಬಾಕಿಯಿದೆ. ಮಲೀನ ನೀರು ಸುಮಾರು 163 ಕಡೆ ಚಾನಲ್‍ಗಳಿಗೆ ಸೇರುತ್ತಿದೆ ಎಂದು ಗುರುತಿಸಿದ್ದೇವೆ. ಈಗಾಗಲೇ ಮೂರು ನೀರು ಶುದ್ಧೀಕರಣ ಘಟಕಗಳು ಮತ್ತು ಹತ್ತು ವೆಟ್‍ವೆಲ್‍ಗಳ ಮೂಲಕ ಯುಜಿಡಿ ನೀರಿನ್ನು ಸಂಗ್ರಹಿಸಿ ಶುದ್ದೀಕರಿಸುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಎಂದರು.
ಅದೇ ರೀತಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕ ನಿರ್ವಹಣೆಗೆ ಅನುದಾನ ಬಂದಿದೆ. ಅಡಿಗೆ ಮನೆಯ, ಬಚ್ಚಲಿನ ನೀರು ಮತ್ತು ಯುಜಿಡಿ ನೀರು ಎಲ್ಲವನ್ನು ಗುರುತಿಸಿ ಸರಾಗವಾಗಿ ಎಲ್ಲವೂ ಯುಜಿಡಿಗೆ ಬರುವಂತೆ ಕ್ರಮಕೈಗೊಳ್ಳಲಾಗುವುದು. ನಾಗರೀಕರ ಸಹಕಾರ ಬಹಳ ಮುಖ್ಯ ಎಂದರು.
ಎಲ್ಲಿ ಬೇಕಲ್ಲಿ ಕಸ ಬಿಸಾಡುವುದು, ಆಸ್ಪತ್ರೆ ತ್ಯಾಜ್ಯಗಳು, ತ್ಯಾಜ್ಯಗಳನ್ನು ನದಿಗೆ ಬಿಸಾಡುವುದು ಎಲ್ಲವನ್ನು ಕೂಡ ಅಧಿಕಾರಿಗಳು ಗಮನಿಸಿದ್ದಾರೆ. ಅಲ್ಲಲ್ಲಿ ಫಲಕಗಳನ್ನು ಕೂಡ ಅಳವಡಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಪಾಲಿಕೆ ಆಯುಕ್ತ ಮಾಯಣ್ಣಗೌಡ, ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಾ ಅಭಿಯಾನದ ಪ್ರಮುಖರಾದ ಬಿ.ಎಂ. ಕುಮಾರಸ್ವಾಮಿ, ಬಾಲಕೃಷ್ಣನಾಯ್ಡು, ಎಂ.ಶಂಕರ್, ಕೆ.ಯುಡಬ್ಲ್ಯೂಎಸ್ ಅಧಿಕಾರಿಗಳಾದ ಸಿದ್ದಪ್ಪ, ಒಳಚರಂಡಿ ಎಡಬ್ಲ್ಯೂಇ ಮಿಥುನ್, ಎಸ್.ವಿ. ಅಶೋಕ್ ಕುಮಾರ್, ಕಾಂತೇಶ್ ಕದರಮಂಡಲಗಿ ಹಾಗೂ ಇನ್ನಿತರ ಅಧಿಕಾರಿ ಉಪಸ್ಥಿತರಿದ್ದರು.
