ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಮತ್ತು ಐಸಿಎಆರ್ -ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 13.05.2024 ರಂದು ಬೇಕರಿ ಹಾಗೂ ಕನ್ಫೆಕ್ಷನರೀಸ್ ಮತ್ತು ಹೈಟೆಕ್ ಅಣಬೆ ಬೇಸಾಯ ಕುರಿತ 10 ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಬಿ. ಹೇಮಲ ನಾಯಕ್, ಶಿಕ್ಷಣ ನಿರ್ದೇಶಕರು, ಇರುವಕ್ಕಿ, ಶಿವಮೊಗ್ಗ ಇವರು ರೈತರಿಗೆ, ಮುಖ್ಯವಾಗಿ ಯುವಕ ಯುವತಿಯರಿಗೆ ಬದುಕು ಕಟ್ಟಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರವನ್ನು ಹೊಂದಿರುತ್ತವೆ ಎಂದು ಅಭಿಪ್ರಾಯಪಟ್ಟರು ಹಾಗೆಯೇ ಆರೋಗ್ಯಕರ ತಿಂಡಿ ತಿನಿಸುಗಳನ್ನು ಮಾಡಲು ಬೇಕರಿ ಉದ್ಯಮ ಮತ್ತು ಅಪೌಷ್ಟಿಕತೆಯನ್ನು ನಿರ್ವಹಣೆ ಮಾಡುವಲ್ಲಿ ಅಣಬೆ ಬೇಸಾಯ ಉದ್ಯಮಗಳು ಬಹಳ ಪ್ರಾಮುಖ್ಯತೆಯನ್ನು ಗಳಿಸುತ್ತವೆ. ಪೂರಕ ಮಾರುಕಟ್ಟೆ ಸಂಪರ್ಕದೊಂದಿಗೆ ರೈತ ಮತ್ತು ರೈತ ಮಹಿಳೆಯರು ಯಶಸ್ವಿ ಉದ್ಯಮಿಗಳು ಆಗಬಹುದೆಂದು ಹರಸಿದರು
ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಆರ್. ಸಿ. ಜಗದೀಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವವಿದ್ಯಾಲಯವು ಜ್ಞಾನ ಕೇಂದ್ರವಿದ್ದಂತೆ, ಈ ಜ್ಞಾನವನ್ನು ಸಮುದಾಯಕ್ಕೆ ತಲುಪಿಸುವುದು ವಿಶ್ವವಿದ್ಯಾಲಯದ ಕರ್ತವ್ಯ. ಸುಮಾರು 4 ಲಕ್ಷ ರೈತರಿಗೆ ಕೃಷಿ ಹಾಗೂ ಕೃಷಿಯೇತರ ತಂತ್ರಜ್ಞಾನಗಳನ್ನು ತಲುಪಿಸುವುದು ವಿಶ್ವವಿದ್ಯಾಲಯದ ಗುರಿಯಾಗಿದೆ. ಅದರಲ್ಲಿ ಶೇಕಡ 15.20 ರಷ್ಟು ಮಂದಿ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಸ್ಥೂಲಕಾಯ ಹಾಗೂ ಮಧುಮೇಹಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿರುವುದರಿಂದ ಪೋಷಕಾಂಶಯುಕ್ತ ಆಹಾರದ ಅವಶ್ಯಕತೆಯೂ ಬಹಳಷ್ಟಿದೆ. ಬದಲಾದ ಜೀವನ ಶೈಲಿಯಿಂದ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಮತೋಲನ ಆಹಾರ ಹಾಗು ಔಷಧಿ ಯುಕ್ತ ಆಹಾರಗಳ ಸೇವೆಯೊಂದೆ ಮಾರ್ಗ. ಈ ನಿಟ್ಟಿನಲ್ಲಿ ಬೇಕರಿ ಮತ್ತು ಅಣಬೆ ಉದ್ಯಮಗಳು ಸ್ವ ಉದ್ಯೋಗವನ್ನು ಸೃಷ್ಟಿಸುವುದಲ್ಲದೇ ಗ್ರಾಹಕರ ಬೇಡಿಕೆಗೆ ತಕ್ಕಂತ ಆಹಾರಗಳನ್ನು ಪೂರೈಸಲು ಉದ್ಯಮಿಗಳಿರುವ ಬಹು ದೊಡ್ಡ ಸವಾಲುಗಳು. ಹೀಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಯು ಸುಸ್ಥಿರ ಜೀವನಕ್ಕಾಗಿ ಬಹಳ ಅತ್ಯಗತ್ಯವಾಗಿದೆ. ಬೇಕರಿಯಲ್ಲಿ ಕೇವಲ ಮೈದಾ ಹಿಟ್ಟು ಹಾಗೂ ಗೋಧಿ ಹಿಟ್ಟಿನ ಬದಲಾಗಿ ಇತರ ಪೋಷಕಾಂಶಯುಕ್ತ ಪದಾರ್ಥಗಳು ಮತ್ತು ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕು. ಹಾಗೆಯೇ ಅಣಬೆಯ ಕುರಿತು ಜನರಿಗೆ ಸ್ವ ಉದ್ಯೋಗದ ಬಗ್ಗೆ ಹಾಗೂ ಮೌಲ್ಯವರ್ಧನೆಯ ಬಗ್ಗೆ ಯುವಕ ಯುವತಿಯರಲ್ಲಿ ಜ್ಞಾನವನ್ನು ಹೆಚ್ಚಿಸುವುದರೊಂದಿಗೆ, ಸ್ವ-ಉದ್ಯೋಗ ಪ್ರಾರಂಭಿಸಲು ದೊರೆಯುವ ಹಣಕಾಸಿನ ಸೌಲಭ್ಯಗಳು, ಖರ್ಚು-ವೆಚ್ಚಗಳ ನಿರ್ವಹಣೆ, ಮಾರುಕಟ್ಟೆಯ ಮಾರ್ಗಗಳ ಬಗ್ಗೆ ತರಬೇತಿಯಲ್ಲಿ ಶಿಬಿರಾರ್ಥಿಗಳು ಆಸಕ್ತಿಯಿಂದ ಕಲಿಯಬೇಕು ಮತ್ತು ತರಬೇತಿಯನ್ನು ಪಡೆದ ನಂತರ ಇತರರಿಗೂ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಬಹುದೆಂದು ತಿಳಿಸಿದರು.
ಕೃಷಿ ವಿಸ್ತರಣ ನಿರ್ದೇಶಕರಾದಂತಹ ಡಾ. ಕೆ. ಟಿ. ಗುರುಮೂರ್ತಿ ಯವರು ಶುಲ್ಕ ಸಹಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವುದು ವಿಶ್ವವಿದ್ಯಾಲಯದ ಹಲವು ವರ್ಷಗಳ ಪರಿಶ್ರಮವಾಗಿದೆ. ಹಾಗಾಗಿ ಈ ತರಬೇತಿಯಿಂದ ಸಿಗುವ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದ ಉದ್ಯಮ ಶೀಲಿಗಳಾಗಿ ಹೊರಹೊಮ್ಮಿರೆಂದು ಆಶಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ರೂವಾರಿಗಳಾದಂತಹ ಡಾ. ಎಮ್. ದಿನೇಶ್ ಕುಮಾರ್, ಡೀನ್ (ಸ್ನಾತಕೋತ್ತರ), ಇರುವಕ್ಕಿ, ಶಿವಮೊಗ್ಗ. ಪದಾರ್ಥಗಳನ್ನು ತಯಾರಿಸುವ ನಾವಿನ್ಯತೆಯನ್ನು ಅಳವಡಿಸಿಕೊಂಡು ಗ್ರಾಹಕರ ಬೇಡಿಕೆಗೆ ಪೂರಕವಾದಂತಹ ಆಹಾರಗಳನ್ನು ಪೂರೈಸಿ ಸಮಾಜಕ್ಕೆ ಉತ್ತಮ ಆರೋಗ್ಯ ಕಲ್ಪಿಸುವ ಜವಾಬ್ದಾರಿ ಶಿಬಿರಾರ್ಥಿಗಳ ಮೇಲಿದೆ. ತರಬೇತಿಯು ಸಂಪೂರ್ಣವಾಗಿ ಸ್ವಯಂ ಕಲಿಕೆಯಿಂದ ಪ್ರೇರಿತವಾಗಿರುವುದರಿಂದ ಶಿಬಿರಾರ್ಥಿಗಳು ತಲ್ಲೀನರಾಗಿ ವಿಷಯಗಳನ್ನು ಕಲಿಯಬೇಕೆಂದು ಸಲಹೆ ನೀಡಿದರು.
ಈ ತರಬೇತಿ ಕಾರ್ಯಕ್ರಮದ ಆಯೋಜಕರಾದಂತಹ ಡಾ. ನಂದೀಶ್ ಎಂ. ಎಸ್., ಡಾ. ಸುಧಾರಾಣಿ, ಎನ್. ಮತ್ತು ಡಾ. ಜಿ. ಕೆ. ಗಿರಿಜೇಶ್ ರವರು ಉಪಸ್ಥಿತರಿದ್ದರು. ಡಾ. ಅಂಜಲಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಸಭಿಕರನ್ನು ವಂದಿಸಿದರು. ಒಟ್ಟು 20 ಆಸಕ್ತ ಶಿಬಿರಾರ್ಥಿಗಳು ಭದ್ರಾವತಿ, ಶಿಕಾರಿಪುರ, ತೀರ್ಥಹಳ್ಳಿ , ಸಾಗರ ಮತ್ತು ಶಿವಮೊಗ್ಗ ತಾಲೂಕುಗಳಿಂದ ಭಾಗವಹಿಸಿದ್ದರು .