ಶಿವಮೊಗ್ಗ: ಅನಾಮಧೇಯ ವ್ಯಕ್ತಿಯು ಅನಾಮಧೇಯ ಪತ್ರದೊಂದಿಗೆ ಹೊಸ ವರ್ಷದ ಶುಭಾಶಯ ಹೇಳುವ ನೆಪದಲ್ಲಿ ಕಹಿಯಾದ ಸಿಹಿ ತಿಂಡಿಯನ್ನು ನಗರದ ಮೂವರು ಗಣ್ಯರಿಗೆ ಕಳಿಸಿದ ಕಿಡಿಗೇಡಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತನಿಖೆ ಚುರುಕುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್ ಅವರ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಮುಖಂಡರ ನಿಯೋಗವು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಕೆ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿತು.

ಅನಾಮಧೇಯ ವ್ಯಕ್ತಿಯೊಬ್ಬ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಹೊಸ ವರ್ಷದ ಶುಭಾಶಯಗಳು ಕೋರಿರುವಂತಹ ಪತ್ರದೊಂದಿಗೆ ಕಹಿಭರಿತ ಸಿಹಿತಿಂಡಿಯನ್ನು ಕೆಲವು ಮುಖಂಡರಿಗೆ ಹಾಗೂ ಗಣ್ಯರಿಗೆ ಕಳುಹಿಸಿ, ಡಾ.ಧನಂಜಯ ಸರ್ಜಿ ಅವರ ಹೆಸರಿಗೆ ಮಸಿ ಬಳಿಯುವ ಕೃತ್ಯ ನಡೆಸಿರುವುದು ಖಂಡನೀಯ. ಈ ಬಗ್ಗೆ ದೂರು ದಾಖಲು ಮಾಡಲಾಗಿದ್ದು. ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಅನಾಮಧೇಯ ವ್ಯಕ್ತಿಯ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿ, ಆಗ್ರಹಿಸಲಾಯಿತು.

ಈ ವೇಳೆ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹರಿಕೃಷ್ಣ, ಸಿ.ಎಚ್.ಮಾಲತೇಶ್, ಮುಖಂಡರಾದ ಮಾಜಿ ಸೂಡಾ ಅಧ್ಯಕ್ಷ ನಾಗರಾಜ್, ಮುಖಂಡರಾದ ಜ್ಞಾನೇಶ್ವರ್, ಗ್ರಾಮಾಂತರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೋಹಿಣಿ, ದರ್ಶನ್,ಅನಿಲ್ ಕುಮಾರ್, ಸಂದೀಪ್ ಬೇಡರಹೊಸಳ್ಳಿ, ಹರೀಶ್, ಸಂಜು ಹಿಟ್ಟೂರು ಮತ್ತಿತರರು ಹಾಜರಿದ್ದರು.


ಆರೋಪಿಗೆ ತಕ್ಕ ಶಿಕ್ಷೆ ಆಗಲಿ

ಕಹಿ ಭರಿತ ಸಿಹಿ ಬಾಕ್ಸ್ ಕೊಟ್ಟ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ಒಂದು ದಿನದೊಳಗೆ ಆರೋಪಿಯನ್ನು ಬಂಧಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ಕಹಿಭರಿತ ಸಿಹಿ ಮಕ್ಕಳೇನಾದರೂ ಸೇವಿಸಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು.

-ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಶಾಸಕ

ಹಬ್ಬ-ಹರಿದಿನಗಳಲ್ಲಿ ಬೇವು – ಬೆಲ್ಲ, ಎಳ್ಳು- ಬೆಲ್ಲವನ್ನು ಹಂಚುವ ಮೂಲಕ ಸಾಮರಸ್ಯ ಬಿತ್ತುವ ಕೆಲಸವನ್ನು ಶಾಸಕ ಡಾ.ಧನಂಜಯ ಸರ್ಜಿ ಅವರು ಮಾಡಿಕೊಂಡು ಬಂದಿದ್ದಾರೆ, ಆದರೆ, ಈ ಕಹಿ ಘಟನೆ ಅವರ ಮನಸ್ಸಿಗೆ ಆಘಾತವನ್ನುಂಟು ಮಾಡಿದೆ. ಹಾಗಾಗಿ ಈ ಘಟನೆಯನ್ನು ಅತ್ಯಂತ ಗಂಬೀರವಾಗಿ ಪರಿಗಣಿಸಿ ಕಿಡಿಗೇಡಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಆತನನ್ನು ಬಂಧಿಸಬೇಕು.

– ಎಸ್. ಎನ್. ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕ

Leave a Reply

error: Content is protected !!