ಶಿವಮೊಗ್ಗ ಜೂನ್.27: ಡೆಂಗ್ಯೂ ಜ್ವರವು ಮಾರಕ ಖಾಯಿಲೆಯಾಗಿದ್ದು ಇದರಿಂದ ಜೀವಹಾನಿ ಸಹ ಸಂಭವಿಸಬಹುದಾದ್ದರಿಂದ ಯಾವದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಚಿಕಿತ್ಸೆ ಪಡೆಯಬೇಕು ಹಾಗೂ ಎಲ್ಲರೂ ಸೇರಿ ನಿಯಂತ್ರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ನಟರಾಜ್ ಕೆ.ಎಸ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಹಯೋಗದೂಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂ.27 ರಂದು ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಡೆಂಗ್ಯೂ ಕುರಿತಾದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಯಾವುದೆ ಖಾಯಿಲೆ ಬಂದರೆ ಅದು ಆರೋಗ್ಯ ಇಲಾಖೆಗೆ ಮಾತ್ರ ಸಂಬಂಧ ಪಟ್ಟಿರುವುದು ಎಂಬ ಮನೋಭಾವ ಬೆಳೆದಿದೆ. ಆದರೆ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯ ದಂತಹ ಸೋಂಕಿನ ವಿರುದ್ದ ಎಲ್ಲರೂ ಸೇರಿ ಹೋರಾಟ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ಡೆಂಗ್ಯು ನಿಯಂತ್ರಣದಲ್ಲಿ ನಮ್ಮ ಮುಖ್ಯ ಉದ್ದೇಶ ಲಾರ್ವಾಗಳ ನಿರ್ಮೂಲನೆ ಮಾಡುವುದಾಗಿದೆ. ಇದರಲ್ಲಿ ಶಿಕ್ಷಕರ ಪಾತ ಬಹ್ರು ಮುಖ್ಯವಾಗಿದ್ದು, ನೀವು ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡುದಪ್ಪ ಕಸಬಿ ಮಾತನಾಡಿ ಸೊಳ್ಳೆ ಉತ್ಪಾದನೆ ನಿಯಂತ್ರಣ ಮಾಡಿದರೆ ಮಾತ್ರ ಡೆಂಗ್ಯೂ ಕಡಿಮೆ ಮಾಡಬಹುದು. ಸೊಳ್ಳೆಗಳು ಕೇವಲ ಚರಂಡಿಯಿಂದ ಮಾತ್ರ ಬರುವುದಿಲ್ಲ ಮನೆಯ ಒಳಗಡೆ ನಿಂತ ಸ್ವಚ್ಚ ನೀರಿನಲ್ಲಿಯೂ ಉತ್ಪಾದನೆ ಆಗುತ್ತದೆ. ಪಾಟ್, ನೀರಿನಲ್ಲಿ ಬೆಳೆಯುವ ಗಿಡಗಳಲ್ಲಿ ಕೂಡ ಸೊಳ್ಳೆ ಉತ್ಪತ್ತಿಯಾಗುತ್ತವೆ. ಬ್ಯಾಟರಿ ಬೆಳಕಿನ ಮೂಲಕ ಲಾರ್ವಾಗಳ ಓಡಾಟವನ್ನು ನೋಡಬಹುದು. ಸೊಳ್ಳೆಯು 500 ಮೀ ಓಡಾಡುವುದರಿಂದ ನಿಮ್ಮ ಸುತ್ತ ಮುತ್ತಲಿನ ಪ್ರದೇಶದಿಂದ ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ವಾರಕೊಮ್ಮೆ ಮನೆಯ ಸುತ್ತಮುತ್ತ ಸ್ವಚ್ಛತೆ ಮಾಡಿ, ಪಕ್ಕದವರಿಗೂ ಮಾಹಿತಿ ನೀಡಿ ಎಂದರು. ಮಕ್ಕಳು ಶಾಲೆಯಲ್ಲಿ ಹೆಚ್ಚು ಕಾಲ ಕಳೆಯುವ ಕಾರಣ ಶಾಲೆಯ ಸುತ್ತ ಮುತ್ತ ಮತ್ತು ನೀರಿನ ಮೂಲಗಳನ್ನು ಸ್ವಚ್ಛ ಮಾಡಬೇಕು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಿ ಸುರಕ್ಷತಾ ಕ್ರಮವಹಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ. ಚಂದ್ರಶೇಖರ್ ಜಿ.ಬಿ ಮಾತನಾಡಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಜೂನ್ ನಂತರದಲ್ಲಿ ಇದು ಹೆಚ್ಚಾಗುತ್ತಾ ಹೋಗುತ್ತದೆ. ಇಲಾಖೆಗಳ ಸಹಕಾರದಿಂದ ಇದನ್ನು ತಡೆಯಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಕ್ರಮವಹಿಸಿ ಕೆಲಸ ಮಾಡಬೇಕು. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಇದರ ಅರಿವು ತುಂಬಾ ಮುಖ್ಯವಾಗಿತ್ತದೆ. ಡೆಂಗ್ಯೂ, ಮಲೆರಿಯಾ, ಚಿಕುನ್ಗುನ್ಯ ಖಾಯಿಲೆಗಳು ಸೊಳ್ಳೆಯಿಂದಲೇ ಬರುವುದರಿಂದ ಸೊಳ್ಳೆ ನಿಯಂತ್ರಣ ಮಾಡಲೇಬೇಕಿದೆ. ನಿಮ್ಮ ಮನೆಯ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಟೈರ್ಗಳು, ಒಡೆದ ಮಡಕೆಗಳು, ನೀರಿನ ತೊಟ್ಟಿಗಳು ಮತ್ತು ವ್ಯವಸಾಯದ ಜಮೀನಿನಲ್ಲಿನ ತ್ಯಾಜ್ಯದಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುವಿಕೆ ಹೆಚ್ಚಿರುತ್ತದೆ. ಆದ್ದರಿಂದ ಅವನ್ನು ಸ್ವಚ್ಚಗೊಳಿಸಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಾಗಾರದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಹಸೇನ್ ಸಾಬ್ ಹೆಚ್.ಕೆ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಕಿರಣ್ ಎಸ್. ಕೆ, ಪ್ರೌಢಶಾಲಾ ಶಿಕ್ಷಕರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದರರು ಹಾಜರಿದ್ದರು.