ಶಿವಮೊಗ್ಗ: ಮರ ಗಿಡಗಳನ್ನು ನಾಶ ಮಾಡುತ್ತಿರುವುದರಿಂದ ಪ್ರಕೃತಿ ಸಮತೋಲನ ಕಳೆದುಕೊಳ್ಳುತ್ತಿದೆ. ಪರಿಸರ ನಾಶದಿಂದ ಪ್ರಕೃತಿ ವಿನಾಶದತ್ತ ಸಾಗುತ್ತಿದೆ ಎಂದು ಡಿವಿಎಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಚ್.ವಿ.ಅನಿಲ್‌ಕುಮಾರ್ ಹೇಳಿದರು.

ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರ ವಿನಾಶದಿಂದ ಆಗುವ ದುಷ್ಪರಿಣಾಮಗಳು ಕುರಿತು ಮಾತನಾಡಿ, ಇಂದು ಆಧುನೀಕರಣದಿಂದ ಗಿಡಗಳನ್ನು ಬೆಳೆಸಲು ಸ್ಥಳವೇ ಇಲ್ಲವಾಗಿದೆ. ಪ್ರಕೃತಿಯಿಂದ ಸಂಪೂರ್ಣ ಲಾಭ ಪಡೆದು ಪ್ರಕೃತಿಯನ್ನೇ ನಾಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ವಾತಾವರಣ ಹಾಳಾಗುತ್ತಿದೆ. ಉತ್ತಮ ಆಮ್ಲಜನಕ ದೊರೆಯುತ್ತಿಲ್ಲ. ಬದುಕಲು ಪೂರಕವಾದ ಪರಿಸರ ಇಲ್ಲವಾಗಿದೆ. ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳುವುದರ ಮುಖಾಂತರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ದೆಹಲಿ ಸೇರಿದಂತೆ ಬೇರೆ ಕಡೆಗಳಲ್ಲಿ ಬಿಸಿಲಿನ ತಾಪಮಾನ ಮತ್ತು ವಾಯುಮಾಲಿನ್ಯದಿಂದ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸತೀಶ್ ಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವ ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು. ಪರಿಸರ ದಿನದ ಆಶಯ ವರ್ಷಪೂರ್ತಿ ಜಾರಿಗೆ ತರಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ನಂತರ ಸಭಿಕರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಎಚ್.ಬಿ.ಆದಿಮೂರ್ತಿ, ಡಾ. ಪರಮೇಶ್ವರ್ ಶಿಗ್ಗಾವ್, ಅರುಣ್ ದೀಕ್ಷಿತ್, ಡಾ. ಲಲಿತಾ ಭರತ್, ಸಂತೋಷ್, ಎನ್.ಎಚ್.ಶ್ರೀಕಾಂತ್, ಎಸ್.ಗಣೇಶ್, ಕೇಶವಪ್ಪ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್‌ಕುಮಾರ್, ಶಶಿಕಾಂತ್ ನಾಡಿಗ್, ಡಾ. ಧನಂಜಯ್, ಡಾ. ಮಹಾದೇವಸ್ವಾಮಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.

error: Content is protected !!