ಶಿವಮೊಗ್ಗ, ಮೇ 15 ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಇಓ ಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್‍ಗಳು ಸಮನ್ವಯ ಸಾಧಿಸಿ, ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮೇ 15 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತಹಶೀಲ್ದಾರ್, ಇಓ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಇತರೆ ಅಧಿಕಾರಿಗಳೊಂದಿಗೆ ಬರ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸ ಅವರು ಮಾತನಾಡಿದರು.
ಪ್ರತಿ ತಾಲ್ಲೂಕುಗಳ ಪ್ರಗತಿ ಪರಿಶೀಲಿಸಿದ ಅವರು ತಾಲ್ಲೂಕುಗಳಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಕುಡಿಯುವ ನೀರು ಸರಬರಾಜು ಟ್ಯಾಂಕರ್‍ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲು ತಿಳಿಸಲಾಗಿದೆ. ಅಳವಡಿಸದೇ ಇರುವ ಟ್ಯಾಂಕರ್‍ಗಳಿಗೆ ಜಿಪಿಎಸ್ ಅಳವಡಿಸಬೇಕು. ಪ್ರತಿ 15 ದಿನಗಳಿಗೆ ಒಮ್ಮೆ ತಾಲ್ಲೂಕುಗಳ ತಹಶೀಲ್ದಾರ್, ಇಓ ಮತ್ತು ಎಇಇ ಬಿಲ್‍ಗಳನ್ನು ದೃಢೀಕರಿಸಿ ಕಳುಹಿಸಿಕೊಡಬೇಕು. ಯಾವುದೇ ಬಿಲ್‍ಗಳನ್ನು ಬಾಕಿ ಇಟ್ಟುಕೊಳ್ಳಬಾರದು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್‍ಗಳು ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು. ಹಾಗೂ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ವಾರಕ್ಕೊಮ್ಮೆ ನೀರಿನ ಪರೀಕ್ಷೆಯನ್ನು ಮಾಡಿಸಬೇಕೆಂದು ಸೂಚಿಸಿದರು.
ಈಗ ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡಲು ಅನುಮೋದನೆ ಪಡೆದ ಪ್ರದೇಶಗಳನ್ನು ಬಿಟ್ಟು ಬೇರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಹೆಚ್ಚುವರಿ ನೀರಿನ ಬೇಡಿಕೆ ಇದ್ದರೆ ಈ ಕೂಡಲೇ ಅವುಗಳನ್ನು ಗುರುತಿಸಿ, ಅನುಮೋದನೆ ಪಡೆದು ಕ್ರಮ ವಹಿಸುವಂತೆ ಸೂಚಿಸಿದರು.
ಪ್ರಸ್ತುತ ಸೊರಬ, ಸಾಗರ, ತೀರ್ಥಹಳ್ಳಿ ಮತ್ತು ಕೆಲವೆಡೆ ಮಳೆ ಬಂದಿದೆ. ಸಮಸ್ಯೆ ಸ್ವಲ್ಪ ಕಡಿಮೆ ಇರಬಹುದು. ಆದರೆ ಮುಂದಿನ ವಾರದಲ್ಲಿ ಮಳೆ ಬಾರದಿದ್ದರೆ ಸಮಸ್ಯೆಯಾಗಬಹುದು. ಆದ್ದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದಾದ ಪ್ರದೇಶಗಳನ್ನು ಗುರುತಿಸಿ ಈಗಲೇ ಕುಡಿಯುವ ನೀರು ಸರಬರಾಜಿಗೆ ಸಿದ್ದತೆ ಮಾಡಿಟ್ಟುಕೊಳ್ಳಬೇಕೆಂದು ಸೂಚನೆ ನೀಡಿದರು.
ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಯಾವುದಾದರೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಅವಶ್ಯಕತೆ, ಬೇಡಿಕೆ ಇದ್ದಲ್ಲಿ ಗುರುತಿಸಿ ಅನೋದನೆ ಪಡೆದುಕೊಳ್ಳಬೇಕು. ಬಾಕಿ ಇರುವ ಬಿಲ್ಲನ್ನು ಕಳುಹಿಸಿಕೊಡಬೇಕು. ಎಲ್ಲ ಗ್ರಾ.ಪಂ ಗಳಲ್ಲಿ ಸಾಕಷ್ಟು ಅನುದಾನ ಇರುವುದಿಲ್ಲ. ಆದ್ದರಿಂದ ಎನ್‍ಡಿಆರ್‍ಎಫ್ ಅಡಿಯಲ್ಲಿ ಬಿಲ್ ಭರಿಸಲು ಕ್ರಮ ವಹಿಸಬೇಕು ಎಂದರು.
ಮುಂಗಾರು ಸಿದ್ದತೆಗೆ ಡಿಸಿ ಸೂಚನೆ :
ಪ್ರಸಕ್ತ ಸಾಲಿನ ಮುಂಗಾರು ಮಳೆಗೆ ಸಂಬಂಧಿಸಿದಂತೆ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಇಓ ಗಳು, ಮುಖ್ಯಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆಯವರು ಸಮೇರಿದಂತೆ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಸಭೆ ನಡೆಸಿ, ಮಳೆಗಾಲದ ಮುನ್ನ ಚರಂಡಿಗಳನ್ನು ಸ್ವಚ್ಚಗೊಳಿಸುವು, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸುವುದು ಸೇರಿದಂತೆ ಪ್ರವಾಹ ಸಂಭವಿಸಿದರೆ ಅದನ್ನು ನಿರ್ವಹಿಸಲು ಅಗತ್ಯವಾದ ತಂಡ ರಚನೆ, ಪರಿಕರ ಲಭ್ಯತೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಳೆದ 5 ವರ್ಷಗಳಲ್ಲಿ ಮಳೆಯಿಂದ ಸಮಸ್ಯೆ ಎದುರಿಸಿದ ಪ್ರದೇಶಗಳನ್ನು ಪಟ್ಟಿ ಮಾಡಿ, ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿಕೊಳ್ಳಬೇಕು. ಈಗಾಗಲೇ ಡೆಂಗ್ಯು ಪ್ರಕರಣಗಳು ಕಾಣಿಸುತ್ತಿದ್ದು, ಮಳೆಗಾಲದಲ್ಲಿ ಬರಬಹುದಾದ ಕೀಟಜನ್ಯ ಸೋಂಕುಗಳ ವಿರುದ್ದ ಕ್ರಮ ಕೈಗೊಳ್ಳಲು ಮೇ ತಿಂಗಳಿನಲ್ಲೇ ಸಿದ್ದತೆಗಳನ್ನು ಮಾಡಿಕೊಳ್ಳಬೇಕು.
ಹಲವೆಡೆ ಮಳೆ, ಗಾಳಿಯಿಂದ ಮರಗಳು ಬೀಳುವ, ಭೂಕುಸಿತ, ಇತರೆ ಪ್ರಕರಣದಿಂದ ಸಾವು ನೋವು ಸಂಭವಿಸಬಹುದಾಗಿದ್ದು ಇದನ್ನು ತಪ್ಪಿಸಲು ಆರ್‍ಎಫ್‍ಓ, ಅಭಿಯಂತರರು ಮತ್ತು ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಉಪವಿಭಾಗಾಧಿಕಾರಿಗಳು ಸಹ ಈ ಕುರಿತು ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಂದ್ರ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಇಓ ಗಳು, ಎಇಇ, ಇತರೆ ಅಧಿಕಾರಿಗಳು ಹಾಜರಿದ್ದರು.

error: Content is protected !!