
ಶಿವಮೊಗ್ಗ : ಒಂದು ಸಮಯದಲ್ಲಿ ಆಕರ್ಷಣೀಯವಾಗಿದ್ದ, ನಿತ್ಯದ ಒತ್ತಡದ ಬದುಕಿಗೆ ಕೊಂಚ ಸಮಾಧಾನ, ಸಂತೋಷ ನೀಡುವ ತಾಣವಾಗಿದ್ದ ನಗರದ ಗಾಂಧಿ ಪಾರ್ಕ್ ಪ್ರಸ್ತುತ ಸರಿಯಾದ ನಿರ್ವಹಣೆ ಇಲ್ಲದೇ ಅದರ ಕಳೆಯನ್ನು ಕಳೆದುಕೊಂಡು ಸಾರ್ವಜನಿಕರಿಂದ ದೂರ ಉಳಿಯುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್ ಈ ಹಿಂದೆ ನಿತ್ಯದ ಒತ್ತಡದ ಬದುಕಿನ ಜಂಜಾಟದಿಂದ ಬೆಸತ್ತ ಜನರು ವಾರದ ಬಿಡುವಿನ ವೇಳೆ ತಮ್ಮ ಮಕ್ಕಳೊಂದಿಗೆ ಒಂದಿಷ್ಟು ಸಮಯ ಖುಷಿಯಿಂದ ಕಳೆಯಲು ಪಾರ್ಕ್‌ಗೆ ಬರುತ್ತಿದ್ದರು. ಮಕ್ಕಳಿಗೆ ಬೇಸಿಗೆ ರಜೆ ಇರುವ ಕಾರಣ ಈ ಸಂಖ್ಯೆ ಈಗ ದುಪ್ಪಟ್ಟಾಗಿರಬೇಕಿತ್ತು. ಆದರೆ, ನೆಮ್ಮದಿ ಅರಸಿ ಬರುವ ಜನರಿಗೆ ಪಾರ್ಕ್‌ನ ಅವ್ಯವಸ್ಥೆ ಕಿರಿಕಿರಿ ಉಂಟು ಮಾಡುತ್ತಿದ್ದು, ಪಾರ್ಕ್‌ನಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಜನರಿದ್ದು, ಪಾರ್ಕ್ ಜನರಿಲ್ಲದೆ ಬಿಕೋ ಎನ್ನುತ್ತಿದೆ.

ಪಾರ್ಕ್‌ಗೆ ಆಗಮಿಸವವರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ನೀರಿನ ಟ್ಯಾಂಕರ್ ಇರಿಸಲಾಗಿದೆ. ಆದರೆ, ಈ ಟ್ಯಾಂಕರ್ ನೀರು ಸ್ವಚ್ಛತೆ ಇಲ್ಲದೆ ಕುಡಿಯಲು ಯೋಗ್ಯವಿಲ್ಲದಂತಿದೆ. ಇಲ್ಲಿನ ಈಜುಕೊಳ ಕೊಳಚೆ ನೀರಿನಿಂದ ಕೂಡಿದ್ದು, ಸುಮಾರು ದಿನಗಳಿಂದ ಶೇಖರಣೆಯಾಗಿರುವ ಈ ನೀರಿನಲ್ಲಿ ಸೊಳ್ಳೆಗಳು ಸಣ್ಣ ಸಣ್ಣ ಕ್ರಿಮಿಗಳು ಉದ್ಭವವಾಗುತ್ತಿವೆ. ಅಲ್ಲದೆ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ಲೈಟಿಂಗ್ ಪೋಲ್‍ಗಳಲ್ಲಿಯೂ ಸಹ ನೀರು ತುಂಬಿದೆ. ನಿಂತ ನೀರಿನಲ್ಲಿ ಕ್ರಿಮಿ ಕೀಟಗಳು ಉದ್ಭವವಾಗುವುದರಿಂದ ಪಾರ್ಕ್‌ಗೆ ಆಗಮಿಸುವ ಸಾರ್ವಜನಿಕರಿಗೆ ಡೆಂಗ್ಯೂ, ಚಿಕನ್‍ಗುನ್ಯ ಸೇರಿದಂತೆ ಅನೇಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳ ಸ್ವಚ್ಛತೆ ಕೇಳುವವರೇ ಇಲ್ಲ. ಶೌಚಾಲಯಗಳು ಹೆಸರಿಗೆ ಮಾತ್ರ ಎಂಬಂತಿದ್ದು, ಬಳಕೆಯಾಗದೇ ಬಿದ್ದಿವೆ. ಹಾಗಾಗಿ ಆದಷ್ಟು ಬೇಗ ಪಾಲಿಕೆ ಇದಕ್ಕೆ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ.

ಪಾರ್ಕ್‌ನಲ್ಲಿ ಪ್ಲಾಸ್ಟಿಕ್ ಬಾಟಲಿಗಳ ರಾಶಿ ಮತ್ತು ಕಸದ ರಾಶಿಗಳು ಸರಿಯಾದ ರೀತಿಯಲ್ಲಿ ವಿಲೇವಾರಿಯಾಗದೇ ರೋಗರುಜಿನೆಗಳ ಗೂಡಾಗಿದೆ. ಇದರಿಂದ ಅನೇಕ ರೋಗಗಳು ಉದ್ಭವವಾಗುವ ಸಾಧ್ಯತೆ ಇವೆ. ಹಾಗಾಗಿ ಆದಷ್ಟು ಬೇಗ ಮುನ್ನೆಚ್ಚರಿಕೆ ಕ್ರಮವಹಿಸಿ ಕ್ರಮಕೈಗೊಳ್ಳಬೇಕು.
ಇಷ್ಟೆಲ್ಲ ನ್ಯೂನ್ಯತೆಗಳ ಮಧ್ಯೆ ಪ್ರವೇಶ ದರ ರೂ.10 ಇದ್ದು, ಕೊಟ್ಟ ಹಣಕ್ಕೆ ತಕ್ಕಂತೆ ಸೌಲಭ್ಯ ಸಿಗದೆ ಕ್ರಮೇಣ ಸಾರ್ವಜನಿಕರಿಂದ ದೂರ ಉಳಿಯುತ್ತಿದೆ. ಪಾರ್ಕ್‌ನ ಮೂಲ ಸೌಲಭ್ಯಗಳನ್ನು ಅದಷ್ಟು ಬೇಗ ಉತ್ತಮ ಪಡಿಸಬೇಕಿದೆ.
ಪ್ರವಾಸೋದ್ಯಮದ ಅಭಿವೃದ್ಧಿಯ ಕನಸು ಹೊತ್ತು ನಿರ್ಮಾವಾಗಿದ್ದ ಮತ್ಸ್ಯ ಸಂಗ್ರಹಾಲಯ ಕಾಲ ಕ್ರಮೇಣ ಸಮರ್ಪಕ ನಿರ್ವಹಣೆ ಇಲ್ಲದೆ ಕಳೆಗುಂದಿದೆ. ಸೂಕ್ತ ಸೌಲಭ್ಯವಿಲ್ಲದೇ ಹೀಗಿಗ ಪಾರ್ಕ್‌ಗೆ ಬರುವ ಸಾರ್ವಜನಿಕರ ಸಂಖ್ಯೆ ಇಳಿಮುಖವಾಗಿದೆ. ಪಾರ್ಕ್‌ನಲ್ಲಿ ಹಾಳಾಗಿರುವ ಮಕ್ಕಳ ಆಟಿಕೆ ಸಾಮಗ್ರಿಗಳು, ವಾಕಿಂಗ್ ಪಾಥ್, ಈಜುಕೊಳ ಸೇರಿದಂತೆ ಯಾವುದೇ ರೀತಿಯ ಸರಿಯಾದ ವ್ಯವಸ್ಥೆ ಇಲ್ಲದೆ ಎಲ್ಲವೂ ಅವ್ಯವಸ್ಥೆಗಳ ಆಗರವಾಗಿದೆ.
ಮೊದಲ ಹಂತದಲ್ಲಿ ಪಾರ್ಕ್ ಕಾಂಪೌಂಡ್, ಟೈಲ್ಸ್ ಹಾಕುವ ಕೆಲಸ ಮಾಡಲಾಗಿದೆ. ಎರಡನೇ ಹಂತದ ಫ್ರೀ ಫ್ಲಾಂಟೇಶನ್, ಟ್ರೈನ್, ಗಿಡ ಬೆಳೆಸುವುದು ಸೇರದಂತೆ ಇತ್ಯಾದಿ ಕ್ರಮಗಳನ್ನು ಮಾಡಲಾಗುವುದು. ಎಲ್ಲಾ ರೀತಿಯ ಟೆಂಡರ್ ಫ್ಲಾನ್ ಮಾಡಲಾಗಿದ್ದು, ಚುನಾವಣಾ ನೀತಿ ಸಂಹಿತೆ ಜೂ.4 ರಂದು ಮುಗಿದ ನಂತರ ಟೆಂಡರ್ ಮಾಡಿ ಇನ್ನು 6 ತಿಂಗಳಲ್ಲಿ ಸಮಗ್ರವಾಗಿ ಸಂಪೂರ್ಣ ಗಾಂಧಿ ಪಾರ್ಕ್ ಅಭಿವೃದ್ಧಿ ಆಗುವಂತೆ ಮಾಡುತ್ತೇವೆ.
– ಮಾಯಣ್ಣಗೌಡ, ಪಾಲಿಕೆ ಆಯುಕ್ತರು.
ಹೊಸದಾಗಿ ಕಾಮಗಾರಿ ಮಾಡಲಾಗುತ್ತಿದೆ. ಚುನಾವಣೆ ಇದ್ದುದರಿಂದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಇವಾಗ ಚುನಾವಣೆ ಮುಗಿದಿರುವುದರಿಂದ ಮತ್ತೇ ಕಾರ್ಯ ಪ್ರಾರಂಭಿಸಿ, ಸಂಪೂರ್ಣವಾಗಿ ಸರಿಪಡಿಸಲಾಗುವುದು.