
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ , ಶಿವಮೊಗ್ಗ. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024 ಹಳೇಮುಗಳಗೆರೆ ಗ್ರಾಮದಲ್ಲಿ ರಾತ್ರಿ ಆಹಾರ ಕಲಬೆರಕೆ ವಿಷಯದ ಮೇಲೆ ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯಕ ಪ್ರಾಧ್ಯಾಪಕಿ ಡಾ . ಶೃತಿ ನಾಯಕ್ ರವರು ಆಗಮಿಸಿದ್ದರು
ಆಹಾರ ಕಲಬೆರಕೆ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೆಚ್ಚು ಕಲಬೆರಕೆ ಆಹಾರವನ್ನು ಸೇವಿಸುವ ಜನರು ಅತಿಸಾರ, ಹೃದ್ರೋಗ, ಅಲರ್ಜಿಗಳು, ವರ್ಟಿಗೋ, ಮಧುಮೇಹ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.
ಆಹಾರದ ಕಲಬೆರಕೆ ಸಾಮಾನ್ಯ ಸಮಸ್ಯೆ ಎಂಬ ಮಟ್ಟಿಗೆ ಬೆಳೆದು ಈಗ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ನಿತ್ಯ ಬದುಕಿನಲ್ಲಿ ಮೆಣಸಿಕಾಯಿಪುಡಿಯಿಂದ ತರಕಾರಿವರೆಗೆ ಎಲ್ಲವೂ ಕಲಬೆರಕೆಗೆ ಒಳಗಾಗಿವೆ.
ವಿದ್ಯಾರ್ಥಿಗಳು ಗ್ರಾಮಸ್ಥರ ಎದುರಿಗೆ ಹತ್ತಕ್ಕೂ ಹಲವು ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಿದರು. ಅವುಗಳಲ್ಲಿ ಕೆಲವು ಎಂದರೆ….
1) ಜೇನು: ಒಂದು ಲೋಟ ನೀರಿಗೆ ಕೆಲವು ಹನಿ ಜೇನುತುಪ್ಪ ಸೇರಿಸಿ. ಜೇನುತುಪ್ಪವು ನೀರಿನ ತಳ ಸೇರಿದರೆ ಅದು ಶುದ್ಧವಾಗಿದೆ ಎಂದರ್ಥ. ಜೇನುತುಪ್ಪಕ್ಕೆ ಸಾಮಾನ್ಯವಾಗಿ ಸಕ್ಕರೆ ಅಥವಾ ಬೆಲ್ಲದ ಪಾಕ ಸೇರಿಸಲಾಗುತ್ತದೆ. ಹಾಗೆ ಮಾಡಿದರೆ ಅದು ನೀರಿನಲ್ಲಿ ಕರಗುತ್ತದೆ.
2) ಅರಿಶಿನ ಮತ್ತು ಮೆಣಸಿನ ಪುಡಿ: ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಅರಿಶಿನ ಪುಡಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತು ಬಿಡಿ. ಶುದ್ಧ ಹಳದಿ ನೀರು ಲೋಟದ ಕೆಳಗೆ ಸಂಗ್ರಹವಾಗಿ ಉಳಿದ ಭಾಗ ಪಾರದರ್ಶಕವಾಗುತ್ತದೆ. ಕಲಬೆರಕೆಯಾಗಿದ್ದರೆ ನೀರಿನ ಬಣ್ಣ ಬದಲಾಗುತ್ತೆ. ಇದೇ ತಂತ್ರ ಕರಿಮೆಣಸಿನ, ಕೆಂಪು ಮೆಣಸಿನ ಪುಡಿಗೂ ಬಳಸಬಹುದು.
3) ಹಾಲು: ಯಾವುದೇ ಪಾತ್ರೆಯ ಮೇಲೆ ಒಂದು ಹನಿ ಹಾಲನ್ನು ಹಾಕಿ . ಹಾಲು ಯಾವುದೇ ಕಲೆ ಇಲ್ಲದೆ ಕೆಳಗೆ ಬಿದ್ದರೆ, ಹಾಲಿಗೆ ನೀರು ಸೇರಿದೆ ಎಂದು ಅರ್ಥ. ಅಲ್ಲದೆ ಹಾಲು ಚೆನ್ನಾಗಿ ಕಲಸಿ ನೊರೆ ಬಂದರೆ ಕಲಬೆರಕೆ ಎಂದು ತಿಳಿಯಬಹುದು.
4) ಚಹಾ, ಕಾಫಿ: ಒದ್ದೆ ಕಾಗದದ ಮೇಲೆ ಸ್ವಲ್ಪ ಟೀ ಪುಡಿ ಉದುರಿಸಿ. ಅಲ್ಲಿ ಇನ್ನೇನಾದರೂ ಬಣ್ಣ ಕಾಣಿಸಿಕೊಂಡರೆ, ಚಹಾ ಪುಡಿಗೆ ಬಣ್ಣ ಸೇರಿಸಲಾಗಿದೆ ಎಂದು ಅರ್ಥ. ಕಾಫಿ ಪುಡಿ ಪರೀಕ್ಷಿಸಲು, ನೀರಿಗೆ ಸ್ವಲ್ಪ ಕಾಫಿ ಪುಡಿ ಸೇರಿಸಿ. ಶುದ್ಧ ಕಾಫಿ ಕೆಳಭಾಗಕ್ಕೆ ತಲುಪುವ ಮೊದಲು ಕೆಲ ಸೆಕೆಂಡು ನೀರಿನ ಮೇಲೆ ತೇಲುತ್ತದೆ. ಕಲಬೆರಕೆ ಬೇಗ ತಳ ಮುಟ್ಟುತ್ತದೆ.
5) ತರಕಾರಿ: ಹಣ್ಣು ಮತ್ತು ಕೆಲವು ತರಕಾರಿ ಕಲಬೆರಕೆಯಾಗಿದೆ ಎಂಬ ಅನುಮಾನ ಇದ್ದರೆ, ಹತ್ತಿ ಉಂಡೆಯನ್ನು ನೀರು ಅಥವಾ ಎಣ್ಣೆಯಲ್ಲಿ ಅದ್ದಿ ತರಕಾರಿ ಅಥವಾ ಹಣ್ಣುಗಳ ಮೇಲೆ ಉಜ್ಜಿ. ಹತ್ತಿಯ ಬಣ್ಣ ಬದಲಾದರೆ ಕೃತಕ ಬಣ್ಣದ ಲೇಪನ ಮಾಡಲಾಗಿದೆ ಎಂದರ್ಥ.
6) ಗೋಧಿ ಹಿಟ್ಟು: ಒಂದು ಲೋಟ ನೀರಿಗೆ ಒಂದು ಚಮಚ ಹಿಟ್ಟು ಮಿಕ್ಸ್ ಮಾಡಿ. ಕಲಬೆರಕೆ ಮಾಡದ ಹಿಟ್ಟು ನೀರಿನ ತಳಕ್ಕೆ ಇಳಿಯುತ್ತದೆ. ನೀರು ಸ್ಪಷ್ಟವಾಗಿ ಕಾಣುತ್ತದೆ. ಕಲಬೆರಕೆ ಇದ್ದರೆ ನೀರಿನ ಬಣ್ಣ ಬದಲಾಗುತ್ತೆ.
7) ಬೆಣ್ಣೆ: ಒಂದು ಚಮಚ ಬೆಣ್ಣೆ ಕರಗಿಸಿ. ಶುದ್ಧ ಬೆಣ್ಣೆ ಕರಗಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕಲಬೆರಕೆ ಬೆಣ್ಣೆಯು ಕರಗಲು ಹೆಚ್ಚು ಸಮಯ ಬೇಕು. ಕೊನೆಗೆ ಬಿಳಿ ಅವಶೇಷ ಇರುತ್ತೆ.
8) ತೆಂಗಿನ ಎಣ್ಣೆ: ಫ್ರಿಡ್ಜ್‌ನಲ್ಲಿ ಸ್ವಲ್ಪ ಎಣ್ಣೆ ಇಡಿ. ಎಣ್ಣೆ ಗಟ್ಟಿಯಾದರೆ ಅದು ಶುದ್ಧವಾಗಿದೆ ಎಂದರ್ಥ. ಇತರ ಎಣ್ಣೆಗಳೊಂದಿಗೆ ಕಲಬೆರಕೆ ಮಾಡಿದ ತೆಂಗಿನ ಎಣ್ಣೆ ಹೆಪ್ಪುಗಟ್ಟುವುದಿಲ್ಲ.
ಮುಖ್ಯ ಅತಿಥಿಗಳು ಮಾತನಾಡಿ ಆಹಾರ ಸುರಕ್ಷತೆ ಹಾಗೂ ಭದ್ರತಾ ಕಾಯ್ದೆ ಅನ್ವಯ ಚಿಕನ್ ಕಬಾಬ್, ಗೋಬಿ ಮಂಚೂರಿ ಸೇರಿದಂತೆ ಚಾಟ್‌ಗಳಿಗೆ ಬಣ್ಣ ಹಾಗೂ ರಾಸಾಯನಿಕ ಬಳಸದಂತೆ ರಾಜ್ಯ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ, ಪಾನಿಪುರಿ ಹಾಗೂ ಚಿಕನ್ ಕಬಾಬ್ ಉತ್ಪನ್ನಗಳ ತಯಾರಿಕೆಗೆ ಕೃತಕ ಬಣ್ಣಗಳು ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಬಾರದು ಎಂದರು ಮತ್ತು ಕಲಬೆರಿಕೆ ಮಾಡುವುದು ಅಪರಾಧ ಎಂದರು.