ಭಾರತೀಯ ಕೃಷಿ ಕ್ಷೇತ್ರದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಅಂದರೆ 2 ಹೆಕ್ಟೇರ್ಗಿಂತಲು ಕಡಿಮೆ ಹಿಡುವಳಿಯನ್ನು ಹೊಂದಿರುವವರು ಸುಮಾರು 126 ದಶಲಕ್ಷ ರೈತರಿದ್ದು ಹೆಚ್ಚಿನ ಕೃಷಿ ಚಟುವಟಿಕೆಗಳು ಮಳೆಯನ್ನು ಅವಲಂಬಿಸಿವೆ. ಹವಾಮಾನ ವೈಪರಿತ್ಯದಿಂದಾಗಿ ವಾಡಿಕೆಗಿಂತಲೂ ಕಡಿಮೆ ಮುಂಗಾರು ಮಳೆಯಾಗುವ ಮಾಹಿತಿಯನ್ನು ಹಲವಾರು ಹವಾಮಾನ ಮುನ್ಸೂಚನಾ ವರದಿಗಳು ನೀಡಿದ್ದರೂ ಮುಂಗಾರು ಪ್ರವೇಶವು ಬೀಜ ಮತ್ತು ಗೊಬ್ಬರದ ವ್ಯಾಪಾರಕ್ಕೆ ವೇಗವನ್ನು ನೀಡಿದೆ. ಆದರೆ ಭತ್ತ, ತಂಬಾಕು, ತರಕಾರಿ ಹಾಗೂ ಇನ್ನಿತರ ಬೆಳೆಗಳಲ್ಲಿ ಮುಂಗಾರಿನ ಸಮಯದಲ್ಲಿ ಸಸಿಗಳನ್ನು ನಾಟಿ ಮಾಡುತ್ತಾರೆ. ಅಂದರೆ ಮುಂಗಾರು ಪೂರ್ವದಲ್ಲೇ ಸಸಿಗಳನ್ನು ಬೆಳೆಸಿರಬೇಕು. ಹೀಗೆ ಸಸಿಗಳನ್ನು ಬೆಳೆಸುವುದರಿಂದ ನಾಟಿಗಾಗಿ ಆರೋಗ್ಯಕರವಾದ ಸಸಿಗಳನ್ನು ಆಯ್ಕೆಮಾಡಬಹುದು. ಬೆಳೆಯ ಸಂಪೂರ್ಣ ಅವಧಿಯಲ್ಲಿ ಸಸಿ ಹಂತವು ತೇವಾಂಶದ ಒತ್ತಡಕ್ಕೆ ಸೂಕ್ಷ್ಮವಾಗಿದ್ದು ಸಸಿಮಡಿಗಳನ್ನು ಅಥವಾ ಸಸಿತೋಟಗಳನ್ನು ಸ್ಧಾಪಿಸುವುದರಿಂದ ಆ ಹಂತದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬಹುದು. ಇತ್ತಿಚಿನ ದಿನಗಳಲ್ಲಿ ರಾಗಿ ಮತ್ತು ತೊಗರಿ ಬೆಳೆಗಳಲ್ಲೂ ನಾಟಿ ಮಾಡುತ್ತಿರುವ ಉದ್ದೇಶವು ಸಸಿಗಳನ್ನು ಜೈವಿಕ ಮತ್ತು ಅಜೈವಿಕ ಒತ್ತಡದಿಂದ ರಕ್ಷಿಸುವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆಯುವುದಾಗಿದೆ.
ಶಾಖದಿಂದ ಹದ ಮಾಡುವ ವರ್ಜೀನಿಯ ಹೊಗೆಸೊಪ್ಪು ನಮ್ಮ ರಾಜ್ಯದ ಮುಖ್ಯ ವಾಣಿಜ್ಯ ಬೆಳೆಯಾಗಿದ್ದು ಮೈಸೂರಿನಿಂದ ದಾವಣಗೆರೆಯವರೆಗೂ ಮಳೆಯಾಶ್ರಿತವಾಗಿ ಬೆಳೆಯುತ್ತಾರೆ. ಕರ್ನಾಟಕದಲ್ಲಿ ಬೆಳೆಯುವ ವರ್ಜೀನಿಯ ಹೊಗೆಸೊಪ್ಪು ಉತ್ತಮ ಗುಣಮಟ್ಟದ್ದಾಗಿದ್ದು ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ “ಮೈಸೂರು ಶೈಲಿ” ಏಂದೆ ಪ್ರಸಿದ್ದಿಯಾಗಿರುವುದಲ್ಲದೆ ಉತ್ತಮ ಗುಣಮಟ್ಟದ ಸಿಗರೇಟ್ ತಯಾರಿಕೆಯಲ್ಲಿ ಫಿಲ್ಲರ್ ಆಗಿ ಬಳಸಲ್ಪಡುತ್ತದೆ. ತಂಬಾಕನ್ನು ಖುಷ್ಕಿ ಬೆಳೆಯಾಗಿ ಬೆಳದರೂ ಸಸಿಗಳನ್ನು ಬೆಳೆಸಲು ಸಾಕಷ್ಟು ಪ್ರಮಾಣದ ನೀರಿನ ಅಗತ್ಯವಿದೆ. ತಂಬಾಕಿನ ಸಸಿಗಳನ್ನು ನಾಟಿ ಮಾಡಲು ಮೇ ತಿಂಗಳಿನಿಂದ ಜೂನ್ ತಿಂಗಳಿನ ಕೊನೆಯ ವಾರದವರೆಗೂ ಸೂಕ್ತವಾಗಿದ್ದು ಸಸಿ ಮಡಿ ತಯಾರಿಕೆಯ ಮಾರ್ಚಿನಲ್ಲೇ ಆರಂಭವಾಗುತ್ತದೆ. ತಂಬಾಕಿನ ಸಸಿಗಳನ್ನು ಸುಮಾರು 55 ರಂದ 60 ದಿನಗಳ ಕಾಲ ಸಸಿಮಡಿಗಳಲ್ಲಿ ಬೆಳೆಸುತ್ತಾರೆ. ಒಂದು ಎಕರೆ ಪ್ರದೇಶಕ್ಕೆ ನಾಟಿ ಮಾಡಲು 15 ಮೀ ಉದ್ದ, 1 ಮೀ ಅಗಲ ಮತ್ತು 0.1 ಮೀ ಎತ್ತರದ 10 ಎರು ಮಡಿಗಳು ಬೇಕಾಗುತ್ತವೆ. ಹಾಗೆಯೇ ಪ್ರತಿ ಚದರ ಮೀ ಸಸಿಮಡಿಯ ಪ್ರದೇಶಕ್ಕೆ ಪ್ರತಿ ದಿನ ಸುಮಾರು 3-5 ಲೀ ನೀರಿನ್ನು ಬಳಸುತ್ತಾರೆ. ಅಂದರೆ ಒಂದು ಎಕರೆಗೆ ನಾಟಿ ಮಾಡಲು ಬೇಕಾಗುವ ಸಸಿಗಳನ್ನು ಬೆಳೆಸಲು 450-750 ಲೀ ಪ್ರತಿ ದಿನ ಹಾಗೂ 27000-45000 ಲೀ ನೀರು ಪೂರ್ತಿ 60 ದಿನಗಳವರೆಗೆ ಬೇಕಾಗುತ್ತದೆ.
ತಂಬಾಕಿನ ಸಸಿಮಡಿಗಳನ್ನು ಮಾರ್ಚಿ-ಏಪ್ರಿಲ್ ತಿಂಗಳಲ್ಲಿ ಮಾಡುವುದರಿಂದ ಒಂದರೆಡು ಮುಂಗಾರು ಪೂರ್ವ ಮಳೆಗಳು ಅವಶ್ಯ ನೀರಿನ ಪ್ರಮಾಣವನ್ನು ಕೊಂಚ ಕಡಿಮೆಮಾಡಿದರೂ ನೀರಿನ ವ್ಯವಸ್ಥೆಯಿಲ್ಲದೆ ಸಸಿಮಡಿಗಳನ್ನು ಮಾಡುವುದು ಕµ್ಟÀ. ನೀರಿನ ಅಭಾವದಿಂದಾಗಿಯೆ ತಂಬಾಕು ಬೆಳೆಯುವ ಪರವಾನಿಗೆ ಇದ್ದರೂ ಕೆಲವು ರೈತರು ಬೆಳೆಯುತ್ತಿಲ್ಲ. ನೀರಾವರಿಯ ಜೊತೆಗೆ ಫಲವತ್ತಾದ ಮಣ್ಣು, ಸುಲಭವಾಗಿ ಗೊಬ್ಬರ ಮತ್ತು ಇತರೆ ಬೇಸಾಯ ಸಾಮಾಗ್ರಿಗಳನ್ನು ಸಾಗಿಸುವಂತಹ ಜಾಗದಲ್ಲಿ ಸಸಿತೋಟಗಳನ್ನು ಮಾಡುವುದರಿಂದ ಸಸಿಮಡಿಗಳ ನಿರ್ವಹಣೆಯೂ ಅನುಕೂಲಕರವಾಗಿರುತ್ತದೆ. ಇಂತಹ ವ್ಯವಸ್ಥೆಯು ಇರದಿದ್ದ ಸಂದರ್ಭದಲ್ಲಿ ಸಮಾನ ಮನಸ್ಕರು ಸೇರಿ ಸಮುದಾಯ ಸಸಿತೋಟಗಳನ್ನು ಮಾಡಿಕೊಳ್ಳಬಹುದು. ಇದರಿಂದ ಸಸಿಗಳನ್ನು ಬೆಳೆಸುವ ಶ್ರಮ, ಜವಬ್ದಾರಿ ಮತ್ತು ಉಪಯೋಗವನ್ನು ಎಲ್ಲಾ ಸದಸ್ಯರು ಹಂಚಿಕೊಂಡಂತಾಗುತ್ತದೆ.
ಸಮುದಾಯ ಸಸಿ ಮಡಿಯ ಉಪಯೋಗಳು
ಸಕಲ ಸೌಲಭ್ಯವುಳ್ಳ ಜಾಗದಲ್ಲಿ ಸಸಿಗಳನ್ನು ಬೆಳೆಸುವ ಅವಕಾಶ ಎಲ್ಲಾ ಸದಸ್ಯರಿಗೂ ದೊರೆಯುತ್ತದೆ
ಸಸಿಗಳನ್ನು ಸಾಮೂಹಿಕವಾಗಿ ಬೆಳೆಸುವುದರಿಂದ ಸಸಿಮಡಿಗಳ ಜವ್ದಾರಿಯುನ್ನು ಸದಸ್ಯರೆಲ್ಲರ ಹಂಚಿಕೊಳ್ಳುತ್ತಾರೆ
ಸರಿಯಾದ ಸಮಯಕ್ಕೆ ನಾಟಿಮಾಡಲು ಆರೋಗ್ಯಕರವಾದ ಯಥೇಚ್ಚ ಸಸಿಗಳು ದೊರೆಯುತ್ತವೆ
ಸಸಿಗಳಲ್ಲಿ ಕಾಣಿಸುವ ಕೀಟ ಮತ್ತು ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು
ಸಾಮೂಹಿಕ ಸೌಲಭ್ಯಗಳಾದ ತುಂತುರು ನೀರಾವರಿ ವ್ಯವಸ್ಥೆ, ಕೃಷಿಹೊಂಡ, ಸ್ಪ್ರೇಯರ್, ನೆರಳಿನ ಪರದೆ, ಇತ್ಯಾದಿಗಳನ್ನು ಕಲ್ಪಿಸಿಕೊಳ್ಳಬಹುದು
ನೀರಾವರಿಯ ವ್ಯವಸ್ಥೆಯಿಲ್ಲದ ರೈತರು ಸಸಿಗಳನ್ನು ಬೆಳೆಸಿ ಮುಂಬರುವ ಮುಂಗಾರು/ಹಿಂಗಾರಿನ ಸದುಪಯೋಗ ಪಡೆಯಬಹುದು
ಸಸಿತೋಟದ ನಿರ್ವಹಣೆಗೆ ಬೇಕಾಗುವ ಆಳಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಹಾಗೆಯೇ, ಎಲ್ಲಾ ಬೀಜಗಳನ್ನು ಒಟ್ಟಿಗೆ ಬಿತ್ತದೆ ಒಂದು ನಿರ್ಧಿಷ್ಠ ಅವಧಿಯ ಅಂತರದಲ್ಲಿ ಬಿತ್ತುವುದರಿಂದ ಸಸಿಗಳು ಹಂತ ಹಂತವಾಗಿ ನಾಟಿಗೆ ಯೋಗ್ಯವಾಗುತ್ತವೆ. ಇದರಿಂದ ನಾಟಿ ಸಮಯದಲ್ಲಿ ಉಂಟಾಗುವ ಆಳಿನ ಕೊರತೆಯನ್ನು ನೀಗಿಸಬಹುದು
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಎಂಬ ಗ್ರಾಮದಲ್ಲಿ ಮಳೆಯ ಕೊರತೆ ಮತ್ತು ನೀರಿನ ಅಭಾವದಿಂದಾಗಿ ನಾಗರಾಜಪ್ಪ ಮತ್ತು ಇತರ 9 ತಂಬಾಕು ಬೆಳೆಯುವ ರೈತರು ಸೇರಿ ತಂಬಾಕಿನ ಸಮುದಾಯ ಸಸಿತೋಟವನ್ನು ಮಾಡಿದ್ದಾರೆ. ಇದಕ್ಕಾಗಿ ಎಲ್ಲಾ ವ್ಯವಸ್ಥೆಯಿರುವ ಜಾಗವನ್ನು ಗುಂಟೆಗೆ ರೂ. 2300 ರಂತೆ ಗುತ್ತಿಗೆಯಾಗಿ ಪಡೆದಿರುತ್ತಾರೆ. ಸಮುದಾಯದ 10 ಸದಸ್ಯರೂ ತಲಾ 2.5 ಗುಂಟೆಯಲ್ಲಿ 3-5 ಎಕರೆಗೆ ಬೇಕಾಗುವ ಸಸಿಗಳನ್ನು ತಯಾರಿಸಿಕೊಳ್ಳುತ್ತಾರೆ. ಸಮುದಾಯ ತೋಟವು ಊರಿಗೆ ಹತ್ತಿರವಾಗಿದ್ದು ಸಸಿಮಡಿಗೆ ನೀರಾಯಿಸಲು ಹಾಗೂ ಇತರೆ ಸಸಿ ತೋಟದ ಕೆಲಸವನ್ನು ಮಾಡಲು ಅನುಕೂಲವಾಗಿದೆ. ಏಲ್ಲಾ ಸದಸ್ಯರು ಸಸಿಮಡಿಗೆ ನಿರಂತರವಾಗಿ ಭೇಟಿ ಮಾಡುವುದರಿಂದ ನಿರ್ವಹಣೆಯೂ ಸುಲಭವಾಗಿದೆಯಾದರು ಸಸಿಗಳಿಗೆ ಬರುವ ರೋಗ ಅಥವ ಕೀಟದ ಬಾದೆಯನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಹೆಚ್ಚಿನ ಮಡಿಗಳಿಗೆ ಹರಡದಂತೆ ನೋಡಿಕೊಳ್ಳುವುದು ಸವಾಲಿನದ್ದಾಗಿದೆ ಎಂದು ಗುಂಪಿನ ಸದಸ್ಯರಲ್ಲೊಬ್ಬರಾದ ಕುಬೇರಪ್ಪರವರು ಅಭಿಪ್ರಾಯಪಟ್ಟರು.
Dr. T.M. SoumyaChief Scientist, AINP (T),
University of Agricultural and Horticultural Sciences,
Savalanga Road,SHIVAMOGGA -577 225.Karnataka, India
Mobile : 9986045712
Office : 08182-267070