ಮಾನಸ ಸಮೂಹ ಸಂಸ್ಥೆ, ಐ ಎಂ ಎ ಹಾಗೂ ರೋಟರಿ ಮಿಡ್ ಟೌನ್, ರೋಟರಿ ಬ್ಲಡ್ ಬ್ಯಾಂಕ್, ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್, ಶಿವಮೊಗ್ಗ ವತಿಯಿಂದ ದಿ. ಡಾ. ಅಶೋಕ್ ಪೈ ರವರ ಸಂಸ್ಮರಣಾರ್ಥವಾಗಿ ಮಾನಸ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿ ಕೊಳ್ಳಲಾಗಿತ್ತು.

ಈ ಶಿಬಿರದ ಉದ್ಘಾಟಣೆಯನ್ನು ಮಾಡಿದ ಐ.ಎಂ.ಎ, ಶಿವಮೊಗ್ಗದ ಅಧ್ಯಕ್ಷರಾದ ಡಾ. ಶ್ರೀಧರ್.ಎಸ್ ರವರು ಮಾತನಾಡುತ್ತಾ ಡಾ. ಅಶೋಕ್ ಪೈರವರು ಮಾನಸಿಕ ಆರೋಗ್ಯ ಸೇವೆಯ ಕುರಿತಂತೆ ಜಗತ್ತು ಶಿವಮೊಗ್ಗದೆಡೆಗೆ ನೋಡುವಂತೆ ಮಾಡಿದವರು. ಅವರು ವೈದ್ಯರಾಗಿ ಮಾತ್ರವಲ್ಲದೆ ಒಬ್ಬ ಸಮಾಜ ಸುಧಾರಕರಾಗಿಯೂ ಗುರುತಿಸಿಕೊಂಡಂತವರು. ಅವರು ಅಂದು ಸಮಾಜಕ್ಕೆ ಮಾಡಿದ ಮಹತ್ಕಾರ್ಯಗಳಿಂದಾಗಿ ಇಂದಿಗೂ ನಾವೆಲ್ಲರೂ ಅವರನ್ನು ಸ್ಮರಿಸುತ್ತಿದ್ದೇವೆ. ಅವರ ನಂತರದಲ್ಲಿ ಮಾನಸ ಸಂಸ್ಥೆ ಶಿವಮೊಗ್ಗದ ಹಲವಾರು ಸಂಘಟನೆಗಳ ಸಹಯೋಗವನ್ನು ಮುಂದುವರಿಸಿಕೊಂಡು ಹಲವಾರು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಲೇ ಬಂದಿದೆ. ಒಬ್ಬ ವ್ಯಕ್ತಿಯ ಸಂಸ್ಮರಣೆಯಲ್ಲಿ ರಕ್ತದಾನದಂತಹ ಕಾರ್ಯಕ್ರಮ ಬಹಳ ಮುಖ್ಯವಾಗಿದೆ. ಅದೊಂದು ಸಮಾಜದ ಋಣವನ್ನು ತೀರಿಸಲು ಸಿಗುವ ಪುಣ್ಯದ ಅವಕಾಶ ಎಂದು ವಿವರಿಸಿದರು. ನಮ್ಮ ದೇಹದಲ್ಲಿ ರಕ್ತ ಮತ್ತೆ-ಮತ್ತೆ ಉತ್ಪತ್ತಿಯಾಗುವುದರಿಂದ ಈ ರಕ್ತದಾನಕ್ಕೆ ನಮ್ಮ ದೇಹವೇ ಸಂಪನ್ಮೂಲದ ಮೂಲ ಎಂದು ತಿಳಿಸಿದರು. ಇಂದಿನ 18 ತುಂಬಿದ ಯುವಕ – ಯುವತಿಯರು ರಕ್ತದಾನವನ್ನು ಪ್ರಾರಂಭಿದಲ್ಲಿ 40ವರ್ಷ ತುಂಬುವಲ್ಲಿ ಅರ್ಧಶತಕಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡುವ ಹೆಮ್ಮೆಯನ್ನು ಹೊಂದಬಹುದು ಎಂದು ಪ್ರೇರೇಪಿಸಿದರು.


ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ಶ್ರೀ. ಸುರೇಶ್ ಕುಮಾರ್‌ ರವರು ಎಲ್ಲೆಡೆಯೂ ರಕ್ತದ ಕೊರತೆ ಇದೆ. ಇದನ್ನು ಸರಿದೂಗಿಸಿ ಜೀವ ರಕ್ಷಣೆ ಮಾಡಲು ಇರುವ ಒಂದೇ ದಾರಿ ರಕ್ತದಾನ ಮಾಡುವುದಾಗಿದೆ. ಆದುದರಿಂದ ಎಲ್ಲ ಆರೋಗ್ಯವಂತ ವ್ಯಕ್ತಿಗಳೂ ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್‍ನ ಶ್ರೀ. ಮಂಜುನಾಥ್ ಅಪ್ಪಾಜಿ, ಐ.ಎಂಎ ಕಾರ್ಯದರ್ಶಿ ಡಾ.ವಿನಯಾ, ಬ್ಲಡ್‍ಬ್ಯಾಂಕ್‍ನ ವೈದ್ಯೆ ಡಾ. ಪ್ರಣೀತ, ರೋಟರಿ ಕಾರ್ಯದರ್ಶಿ ಶ್ರೀ. ಸಾಹಿನ್ ಹುಸೇನ್, ಮಾನಸದ ಡಾ.ಪ್ರೀತಿ ಶಾನ್‍ಭಾಗ್ ಉಪಸ್ಥಿತರಿದ್ದರು.

ಸುಮಾರು 150 ರಕ್ತದಾನಿಗಳು ಈಗಾಗಲೇ ಹೆಸರನ್ನು ನೊಂದಾಯಿಸಿದ್ದು ಅವರಿಗೆ ಸೋಲ್ಯುಷನ್‍ನ ಶ್ರೀ.ಗಂಗಾಧರ್ ಹಣ್ಣನ್ನು ವಿತರಿಸಿದರು ಹಾಗೂ ಕೇಟರರ್ ಶ್ರೀ ನವೀನ್ ಕುಮಾರ್ ತಂಪು ಪಾನೀಯ ನೀಡುವ ಸಹಕಾರವನ್ನು ನೀಡಿರುವುದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾನಸ ಸಂಸ್ಥೆಯ ನಿರ್ದೇಶಕಿ ಡಾ. ರಜನಿ.ಎ.ಪೈ ತಿಳಿಸಿದರು ಅಲ್ಲದೆ ಮಾನಸ ಸಂಸ್ಥೆಯಿಂದ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮ ನಿರೂಪಣೆಯನ್ನು ಹಿರಿಯ ಆಪ್ತಸಮಾಲೋಚಕರಾದ ಶ್ರೀ ಗಣೇಶ್ ರಾವ್ ನಡೆಸಿಕೊಟ್ಟರು. ಮನಸ್ಪೂರ್ತಿಯ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್.ಎಸ್.ಎಸ್ ವಿಧ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಅತ್ಯುತ್ಸಹದಿಂದ ಪಾಲ್ಗೊಂಡರು.

Leave a Reply

error: Content is protected !!