ಸಾಗರ: ಕಲೆಗೆ ನಿರಂತರತೆ ಮತ್ತು ಗುರುಮುಖೇನ ಅಭ್ಯಾಸ ಅವಶ್ಯ, ಪ್ರಸ್ತುತ ದಿನಮಾನದಲ್ಲಿ ಕಲಿಕೆ,ಗ್ರಹಿಕೆಗಿಂತ ಪ್ರಸಿದ್ಧಿ ಮತ್ತು ಪ್ರಚಾರಕ್ಕೆ ಕಟ್ಟುಬೀಳುವ ಮನೋಪ್ರವೃತ್ತಿ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಗಾಯಕಿ ಸಹನಾ ಜಿ. ಭಟ್ ಹೇಳಿದರು.
ಸಾಗರದ ಇತಿಹಾಸ ಪ್ರಸಿದ್ಧವಾದ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ಸಂಗೀತ ಸಾಗರ ವಾದ್ಯ ವೃಂದ ಆಯೋಜಿಸಿದ್ದ ಭಕ್ತಿ ಸಿಂಚನ ಕಾರ್ಯಕ್ರಮವನ್ನು ಅಡಿಕೆ ಹಿಂಗಾರ ಬಿಡಿಸುವ ಮೂಲಕ ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳನ್ನು ರಿಯಾಲಿಟಿ ಶೋಗಳಿಗಾಗಿಯೇ ತಯಾರು ಮಾಡುವಂತೆ ಕಲಾಕ್ಷೇತ್ರಗಳಲ್ಲಿ ಪೋಷಕರು ಕಟ್ಟು ಬೀಳುತ್ತಿರುವುದನ್ನು ಕಾಣುತ್ತಿದ್ದೇವೆ, ಮಕ್ಕಳ ಜ್ಞಾನಾರ್ಜನೆಗಿಂತ ರಿಯಾಲಿಟಿ ಶೋಗಳಲ್ಲಿ ವಿಜೃಂಬಿಸುವುದೇ ಮುಖ್ಯವಾಗುತ್ತಿದೆ ಇದರಿಂದ ಮೊದಲು ನಾವು ಹೊರಬರಬೇಕು. ನಮ್ಮ ದಾಸರು, ಶರಣರು, ಸಂತರು ಕನ್ನಡ ಸಾಹಿತ್ಯಕ್ಕೆ ಮತ್ತು ಕೀರ್ತನಾ ಲೋಕಕ್ಕೆ ನೀಡಿರುವ ಕೊಡುಗೆ ಬಹುದೊಡ್ಡದು. ಕಲೆಗಳು ಒಂದು ಕಾಲದಲ್ಲಿ ರಾಜಾಶ್ರಯದಲ್ಲಿದ್ದವು, ಈಗ ಕಲಾಭಿಮಾನಿಗಳು ಮತ್ತು ಪ್ರೇಕ್ಷಕರೇ ಕಲೆಯನ್ನು ಪೋಷಿಸಿ ಉಳಿಸಿಕೊಂಡು ಹೋಗಬೇಕಾಗಿದೆ.
ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ಸಾಗರದ ಅಧಿದೇವತೆ ಗಣಾಧೀಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಂಗೀತ ಸಾಗರ ಸಂಸ್ಥೆಯ ಕಲಾವಿದರು ಸೇವಾ ಮನೋಭಾವದಿಂದ ಭಕ್ತಿಗೀತೆಗಳ ಗಾಯನ ನಡೆಸಿಕೊಟ್ಟು ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದ್ದಾರೆ.
ಕೆಳದಿ ಅರಸರು ಕಲೆ, ಸಾಹಿತ್ಯ, ಸಂಸ್ಕøತಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದಾರೆ. ಆಧುನಿಕ ಜಗತ್ತಿಗೆ ತೆರದುಕೊಳ್ಳುವ ಅವರಸರದಲ್ಲಿ ಸಂಸ್ಕøತಿ ಮತ್ತು ಸಂಸ್ಕಾರವನ್ನು ಕಳೆದುಕೊಳ್ಳುತ್ತಿದ್ದೇವೆ, ಕಲಾವಿದರನ್ನು ಬೆಳೆಸುವ , ಅವರಿಗೆ ವೇದಿಕೆ ನಿರ್ಮಿಸಿಕೊಡುವ ಇನ್ನಷ್ಟು ಪ್ರಯತ್ನವನ್ನು ಈ ಸಂಸ್ಥೆ ಮುನ್ನಡೆಸಲಿ ಎಂದರು.
ಸಂಗೀತ ಸಾಗರ ವಾದ್ಯ ವೃಂದದ ಸಂಚಾಲಕ ಹೆಚ್.ಎಲ್.ರಾಘವೇಂದ್ರ ಮಾತನಾಡಿ, ವಚನಕಾರರು, ಹರಿದಾಸರು, ಸಂತರ ಗೀತೆಗಳನ್ನು ಗಾಯಕರು ಹೆಚ್ಚು ಕಾರ್ಯಕ್ರಮವನ್ನು ಕೊಡುವ ಮೂಲಕ ಜನರಲ್ಲಿ ದಾರ್ಶನಿಕರ ಮಹತ್ವವನ್ನು ಪರಿಚಯಿಸಬೇಕು. ಬರುವ ದಿನಗಳಲ್ಲಿ ಕನಕದಾಸರು, ಪುರಂದರದಾಸರು ಮುಂತಾದ ದಾಸವಣ್ರ್ಯರ ಕೀರ್ತನೆಗಳ ಗಾಯನ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳಲ್ಲಿ ನಡೆಸುವ ಯೋಜನೆ ರೂಪಿಸುತ್ತೇವೆ ಜನತೆ ಸಹಕಾರ ನೀಡಬೇಕು ಎಂದು ಕೋರಿದರು.
ಗಾಯಕ ಕಾರ್ಯಕ್ರಮವನ್ನು ರಸಮಂಜರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಶಿವಣ್ಣ, ಮೋಹನ್, ಸಿ.ಪಿ.ಗಣೇಶ್, ವಿ.ಶಂಕರ್, ರಾಜು,ಹೆಚ್.ಎಲ್.ರಾಘವೇಂದ್ರ, ನಡೆಸಿಕೊಟ್ಟರು.
ಸಾಗರದ ಇತಿಹಾಸ ಪ್ರಸಿದ್ಧವಾದ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ಸಂಕಷ್ಟಹರ ಚತುರ್ಥಿಯ ಅಂಗವಾಗಿ ಸಂಗೀತ ಸಾಗರ ವಾದ್ಯ ವೃಂದದಿಂದ ಭಕ್ತಿ ಸಿಂಚನ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉದ್ಘಾಟನೆಯನ್ನು ಗಾಯಕಿ ಸಹನಾ ಜಿ.ಭಟ್ ನೆರವೇರಿಸಿದರು. ಸಂಸ್ಥೆಯ ಸಂಚಾಲಕ ಹೆಚ್.ಎಲ್.ರಾಘವೇಂದ್ರ , ರಸಮಂಜರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಶಿವಣ್ಣ, ವಿ.ಶಂಕರ್ ಇತರರಿದ್ದರು.