ಶಿವಮೊಗ್ಗ: ವೈದ್ಯರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದಿಂದ ನೀಡುವ ಶ್ರೇಷ್ಠ ವೈದ್ಯ ರಾಜ್ಯ ಪ್ರಶಸ್ತಿಗೆ ಶಿವಮೊಗ್ಗದ ವೈದ್ಯ ಡಾ. ಗುಡದಪ್ಪ ಕಸಬಿ ಪಾತ್ರರಾಗಿದ್ದಾರೆ.
ಡಾ. ಗುಡದಪ್ಪ ಕಸಬಿ ಶಿಕಾರಿಪುರ ತಾಲೂಕಿನ ಮದಗ ಹಾರನಹಳ್ಳಿಯವರು. ಸಿದ್ದಪ್ಪ ಮತ್ತು ಯಲ್ಲಮ್ಮ ದಂಪತಿ ಪುತ್ರ. 1976ರಲ್ಲಿ ಜನಿಸಿದ ಗುಡದಪ್ಪ ಕಸಬಿ ಅವರು ಹುಬ್ಬಳ್ಳಿ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್, ಚೆನ್ನೈನಲ್ಲಿ ಐ.ಸಿ.ಎಂ.ಆರ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿ ಎಂ.ಪಿ.ಹೆಚ್ ಹಾಗೂ ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯಲ್ಲಿ ಪಿ.ಜಿ ಡಿಪ್ಲೊಮಾ ಇನ್ ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ಅಧ್ಯಯನ ಮಾಡಿದ್ದಾರೆ.
ವೈದ್ಯಾಧಿಕಾರಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಗಡಿಯಲ್ಲಿ ವೃತ್ತಿ ಪ್ರಾರಂಭಿಸಿ, ನಂತರ ಮಾಸೂರಿನಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ,
ಹಾಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2012ರಲ್ಲಿ ಜೋರ್ಡಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೆ.ಎಫ್.ಡಿ ಕುರಿತು ಪ್ರಬಂಧ ಮಂಡಿಸಿದ್ದಾರೆ. ಕೆ.ಎಪ್.ಡಿ ಬಗ್ಗೆ ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಸಿದ್ದಾರೆ. 2013ರಿಂದ ರೋಟರಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ರೋಟರಿ ಅಧ್ಯಕ್ಷ, ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಆಲೆಮನೆ ಟಿ ಬಿ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ, ಮನೆಮನೆಗೆ ಲಾರ್ವಾಹಾರಿ ಮೀನುಗಳ ವಿತರಣೆ ಸೇರಿ ಅನೇಕ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ರೋಟರಿ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳಾದ ರೋಟರಿ ಸಹಾಯಕ ಗವರ್ನರ್ ಹಾಗೂ ರೋಟರಿ ಜಿಲ್ಲಾಮಟ್ಟದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿಯಾಗಿ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ. ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಒಳ್ಳೆಯ ಮಾತಿನ ಕಲೆ ಹೊಂದಿರುವ ಡಾ. ಗುಡದಪ್ಪ ಕಸಬಿ ರೋಟರಿ ಸಂಸ್ಥೆ ಅಧ್ಯಕ್ಷರಾದಾಗ ವಿಶೇಷ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಘದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾಧ್ಯಕ್ಷರಾದ ಸಂದರ್ಭದಲ್ಲಿ ಆರೋಗ್ಯ ಭವನ ನಿರ್ಮಾಣದ ಕನಸು ಕಂಡವರು. ನಗರದ ಶಕ್ತಿಧಾಮದಲ್ಲಿ ಈಗ ಆರೋಗ್ಯ ಭವನ ನಿರ್ಮಾಣವಾಗುತ್ತಿದೆ.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಮಾಜಿ ಜಿಲ್ಲಾ ಗವರ್ನರ್ ಡಾ. ಗೌರಿ ಅಭಿನಂದಿಸಿದ್ದಾರೆ.

error: Content is protected !!