ಶಿವಮೊಗ್ಗ : ಯಾವುದೇ ಸವಾಲುಗಳಿದ್ದರೂ ಸಮರ್ಥವಾಗಿ ಎದುರಿಸಿ ಜನ ತಲೆ ತಗ್ಗಿಸದ ರೀತಿಯಲ್ಲಿ ಸೇವೆ ಸಲ್ಲಿಸಲು ಬದ್ಧ, ನಮ್ಮೆಲ್ಲರ ಗೆಲುವಿಗೆ ಶ್ರಮಿಸಿದ ತಮ್ಮ ಋಣವನ್ನು ತೀರಿಸಲಾಗದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗ ನಗರ ಬಿಜೆಪಿ ವತಿಯಿದ ಬಿ.ಹೆಚ್. ರಸ್ತೆಯ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಗುರುವಾರ ಸಂಜೆ ಶಿವಮೊಗ್ಗ ಲೋಕಸಭಾ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ವಿಜಯಶಾಲಿಗಳಾದ ಹಿನ್ನೆಲೆಯಲ್ಲಿ ಇವರುಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ವಿಜಯಕ್ಕೆ ಕಾರಣಕರ್ತರಾದ ಎಲ್ಲಾ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿಕಸಿತ ಭಾರತಕ್ಕಾಗಿ, ಸದೃಢ ಭಾರತದ ನಿರ್ಮಾಣಕ್ಕಾಗಿ ಅಮೂಲ್ಯವಾದ ಮತ ನೀಡುವ ಮೂಲಕ ನರೇಂದ್ರ ಮೋದಿ ಜೀ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ, ಶಿವಮೊಗ್ಗದ ಮತ್ತಷ್ಟು ಅಭಿವೃದ್ದಿಗೆ ಹಾಗೂ ವಿಐಎಸ್ಎಲ್ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದರು.
ನಗರ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಮಾತನಾಡಿ, ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯತೆ ವಿಚಾರವಾಗಿ ಬದ್ಧವಾಗಿದ್ದು, ಅಭಿವೃದ್ಧಿಯ ವಿಚಾರದಲ್ಲೂ ತನ್ನ ಬದ್ಧತೆ ಪ್ರದರ್ಶಿಸಿ ವಿಶ್ವಾಸವನ್ನು ಉಳಿಸಿಕೊಂಡಿದೆ, ಹಾಗಾಗಿ ಪರಿಷತ್ ಮತ್ತು ಲೋಕಸಭೆ ಚುನಾವಣೆಯಲ್ಲಿ ಜನ ಮನ್ನಣೆ ನೀಡಿದ್ದಾರೆ, ಗೆಲುವಿನಲ್ಲಿ ನಿಷ್ಟಾವಂತ ಕಾರ್ಯಕರ್ತರ ಶ್ರಮವಿದೆ, ಅವರೇ ನಮ್ಮ ಶಕ್ತಿ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಲೋಕಸಭೆ ಮತ್ತು ಪರಿಷತ್ ಚುನಾವಣೆಯಲ್ಲಿ ಅಹಂಕಾರಕ್ಕೆಅಪಜಯ ಮತ್ತು ಸಂಯಮಕ್ಕೆ ಜಯ ಸಿಕ್ಕಿದೆ, ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ, ಅಲ್ಲದೇ 3 ಲಕ್ಷಕ್ಕೂ ಹೆಚ್ಚು ಜನ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಲು ಬರಲಿಲ್ಲ, ಇದು ನಿಜಕ್ಕೂ ಎಚ್ಚರಿಕೆ ಗಂಟೆ, ನಾವು ಕೂಡ ಜಾಗೃತರಾಗಬೇಕಿದೆ ಎಂದರು.
ನೂತನ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಮಾತನಾಡಿ, ಪಕ್ಷದ ದೊಡ್ಡ ಶಕ್ತಿ ಸಂಘಟನೆ ಮತ್ತು ಕಾರ್ಯಕರ್ತರು. ನಿಮ್ಮೆಲ್ಲರ ಶ್ರಮವೇ ಗೆಲುವಿಗೆ ಕಾರಣ, ಇದು ನಿಮ್ಮ ಗೆಲುವು, ಇದು ನಿಮಗೆ ಅರ್ಪಣೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಹಿಂದೆಂದೂ ಯಾರೂ ಮಾಡದಷ್ಟು ಅಭಿವೃದ್ಧಿಯನ್ನು ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ನಮ್ಮ ಕ್ಷೇತ್ರದಲ್ಲಿ ಮಾಡಿದ್ದಾರೆ, ಜನ ಅವರನ್ನು ಮತ್ತೆ ಗೆಲ್ಲಿಸಿಕೊಟ್ಟಿದ್ದಾರೆ, ಬಿ.ವೈ.ರಾಘವೇಂದ್ರ, ನೂತನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಮತ್ತು ಎಸ್.ಎಲ್.ಭೋಜೇಗೌಡ ಅವರಿಗೆ ಜೆಡಿಎಸ್ ಪಕ್ಷದ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ನೂತನ ಸಂಸದ ಬಿ.ವೈ.ರಾಘವೇಂದ್ರ, ನೂತನ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಹಾಗೂ ಭೋಜೇಗೌಡ ಅವರುಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಬಿಜೆಪಿ ನಗರ ಅಧ್ಯಕ್ಷ ಡಿ. ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು, ಡಿ.ಎಸ್. ಅರುಣ್. ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ, ಚುನಾವಣಾ ಪ್ರಭಾರಿ ಎಸ್. ಜ್ಞಾನೇಶ್ವರ್, ಚುನಾವಣಾ ಕ್ಷೇತ್ರ ಸಂಚಾಲಕ ಎನ್.ಜಿ. ನಾಗರಾಜ್ ಮತ್ತಿತರರು ಹಾಜರಿದ್ದರು.
