*ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು ಸಾರ್ಥಕ ಬದುಕಿಗೆ ದಿಕ್ಸೂಚಿ- ಡಾ.ಆರ್. ಕಾವಲಮ್ಮ *

ಜಗತ್ತು ಕಂಡ ಅಪರೂಪದ ಪ್ರತಿಭೆ ಅಂಬೇಡ್ಕರ್. ಅವರು ಜನಿಸದೇ ಇದ್ದಿದ್ದೇರೇ ನಮ್ಮಗಳ ಅಸ್ತಿತ್ವ ಇರಲು ಸಾಧ್ಯವಿಲ್ಲ. ಶಿಕ್ಷಣವನ್ನು ಕಲಿಯಲೇ ಬಾರದೆಂಬ ನಿರ್ಬಂಧಕ್ಕೆ ಒಳಗಾಗಿದ್ದ ಸಮುದಾಯದಲ್ಲಿ ಜನಿಸಿದ ಅವರು ಜಾಗತಿಕ ಮಟ್ಟದ ಬಹು ದೊಡ್ಡ ಶಿಕ್ಷಣವಂತರಾಗಿದ್ದು ಭಾರತ ದೇಶದ ಹೆಗ್ಗಳಿಕೆ. ಅವರ ವಿಚಾರಗಳು ಸಾರ್ಥಕ ಬದುಕಿಗೆ ದಿಕ್ಸೂಚಿ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ಆರ್.ಕಾವಲಮ್ಮ ಅವರು ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಮತ್ತು ಶಿಕ್ಷಣ ಎಂಬ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಸಮಾರೋಪ ನುಡಿಗಳನ್ನಾಡಿದರು. ಅಧ್ಯಾಪಕರಾದ ನಾವುಗಳು ಅವರ ವಿಚಾರಗಳನ್ನು ಮನನ ಮಾಡಿ, ವಿದ್ಯಾರ್ಥಿಗಳ ಮನೋಭೂಮಿಕೆಯಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಬೀಜಗಳನ್ನು ಬಿತ್ತಿ ಬೆಳೆಯುವ ಕೃಷಿಕರಾಗಬೇಕೆಂದರು. ಅಧ್ಯಕ್ಷತೆ ವಹಿಸಿ ಮಾತಾಡಿದ ಕುಲಪತಿ ಪ್ರೊ.ಶರತ್ ಅನಂತ್ ಮೂರ್ತಿ ಅವರು ಮಾನವೀಯತೆಯ ಅಂತಃ ಕರಣ ಅಂಬೇಡ್ಕರ್ ಅವರ ವಿಚಾರಗಳಲ್ಲಿದೆ. ಅದನ್ನು ಅರ್ಥೈಸಿಕೊಂಡು ಬೋಧಿಸಬೇಕೆಂದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಓಬಳೇಶ್ ಘಟ್ಟಿ, ಡಾ.ಜಗನ್ನಾಥ ಕೆ.ಡಾಂಗೆ, ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಉಪಸ್ಥಿತರಿದ್ದರು. ಎಂ.ಸಂಪತ್ ಕುಮಾರ್, ಓಬಳೇಶ್ ಟಿ. ಮಂಜುನಾಥಯ್ಯ, ಆರ್.ರವಿಕುಮಾರ್ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಬಿ.ಇಡಿ.ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರುಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

error: Content is protected !!